ತಕಿಟ ತಕಿಟ ಧೋಂ

Thursday, December 30, 2010

ತಕಿಟ ತಕಿಟ ಧೋಂ 


ಕಳೆದ ವಾರ ಹೀಗೆ ಸುಮ್ಮನೇ ಕರಗಿಹೋಗಿಲ್ಲವೆನ್ನುವುದೇ ಒಂದು ಸಮಾಧಾನ. ಇಲ್ಲಿ ನನ್ನೂರಿನಲ್ಲಿ ಅಂತಹ ಹೇಳಿಕೊಳ್ಳುವ ಕಾರ್ಯಕ್ರಮಗಳು ನಡೆಯುವುದೇ ವಿರಳ. ಚಾತಕ ಪಕ್ಷಿಯಂತೆ ಎಲ್ಲಿಯಾದರೂ ಯಾವುದಾದರೂ ಒಳ್ಳೆಯ ಕಾರ್ಯಕ್ರಮಗಳು ನಡೆಯಬಹುದೇ ಎಂದು ಕಣ್ಣು ಕಿವಿಗಳು ಹಪಹಪಿಸುತ್ತಿರುತ್ತವೆ. ಏನೂ ಇಲ್ಲದೆಯೂ ಬದುಕಬಹುದು ಎನ್ನುವುದು ಸತ್ಯ. ಆದರೂ ಮನಸ್ಸಿಗೆ ಕೆಲವೊಮ್ಮೆ ಬೇಸರ ಕವಿದುಕೊಂಡಾಗ , ಈ ಮಬ್ಬನ್ನು ಕಳೆಯುವ ಯಾವುದಾದರೂ ಒಂದು ಏನಾದರೂ  ಒಂದರ ಅಗತ್ಯವಿರುತ್ತದೆ. ಈ ವಾರ ಅಂತಹದೊಂದು ಅವಕಾಶ ಒದಗಿ ಬಂದಿತು. 


ಓಡಿಹೋದ ಚಳಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಂತೆ ಅಲ್ಲ  .ಮೈಯನ್ನು ಗಡಗಡ ನಡುಗಿಸುವ ಚಳಿ ಕಾಣಿಸಿಕೊಂಡಿಲ್ಲ. ಆದರೆ ಇದೆ. ಸಂಜೆಯಾಗುತ್ತಲೇ ದೇಹವಿಡೀ ತಂಪಾಗುವ ಹಾಗೆ., ಮನೆಯ ನೆಲವೆಲ್ಲಾ ತಣ್ಣಗಾಗುವ ಹಾಗೆ, ಚಳಿ ಕಾಣಿಸಿಕೊಂಡಿದೆ. ಕಂಬಳಿ ಹೊದ್ದು ಮಲಗುವ ಅಭ್ಯಾಸವೇ ಇಲ್ಲದ ನಾನು ಈಗ ಅದನ್ನು ದಿನನಿತ್ಯ ಹೊದ್ದು ಮಲಗಬೇಕಾಗಿದೆ. ಇಬ್ಬನಿ ಮಾತ್ರ ಕಾಣಿಸುತ್ತಿಲ್ಲ. ಇಬ್ಬನಿ ಇಲ್ಲದಿದ್ದರೆ ಮುಂದಿನ ವರುಷ ಮಳೆ ಕಡಮೆಯಾಗುವುದಂತೆ. 


ಮೊನ್ನೆ ಬುಧವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮ ನಡೆಯಿತು. ಇಲ್ಲಿನ ಏಕತಾನತೆಗೆ ಬೇಸತ್ತು ಗೆಳೆಯರೊಡನೆ ಕಾರಿನಲ್ಲಿ ಅಲ್ಲಿಗೆ ಹೊರಟೆವು. ಸುಮಾರು ಇಪ್ಪತ್ತೆರೆಡು ತಬಲಾ ವಾದಕರು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡುವ ಕಾರ್ಯಕ್ರಮ "ತಬಲಾ ಫೀಲಿಯಾ". ಸದ್ಯಕ್ಕೆ ಅಮೆರಿಕಾದಲ್ಲಿರುವ ಸಮೀರ್ ಚಟರ್ಜಿ ತಮ್ಮ ಎಲ್ಲಾ ಶಿಷ್ಯರನ್ನು ಕರೆದುಕೊಂಡು ಬಂದು ಈ ಕಾರ್ಯಕ್ರಮ ನೀಡಿದ್ದರು. ಇವರಲ್ಲಿ ಎಂಟು ಜನ ವಿದೇಶಿಯರು, ಎಂಟು ಜನ ಪಶ್ಚಿಮ ಬಂಗಾಳದವರು ಮತ್ತು ಉಳಿದ ಆರು ಜನ ನಮ್ಮ ಕನ್ನಡಿಗರು. ಮೂರು ಸಾಲಿನಲ್ಲಿ ಕುಳಿತು ವಿಶಿಷ್ಟವಾದ ಸಂಗೀತ ಸಂಯೋಜನೆಯಿಂದ ಅದ್ಭುತವಾದ ಕಾರ್ಯಕ್ರಮ ನೀಡಿದರು. ಪ್ರಾರಂಭದಲ್ಲಿ ಶ್ರೀ ಅಶೋಕ ಹುಗ್ಗಣ್ಣವರ‍್ರವರ ಮತ್ತು ಶ್ರೀಮತಿ ಪಿಯು ಚಟರ್ಜಿಯವರ ಸಂಗೀತ ಕಾರ್ಯಕ್ರಮವಿತ್ತು. ನಂತರ ಒಂದು ಗಂಟೆಯ ಕಾಲ ತಬಲಾ ವಾದನ. ಮನುಷ್ಯನ ಬದುಕಿನ ನಾಲ್ಕು ಅವಸ್ಥೆಗಳಾದ -ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವೆಂಬ ಈ ನಾಲ್ಕು ಅವಸ್ಥೆಗಳನ್ನು ಸಂಗೀತದಲ್ಲಿ ಅಳವಡಿಸಿಕೊಂಡು ವಿಭಿನ್ನ ಸ್ವರಗಳಿಂದ ಅದನ್ನು ಮನದಟ್ಟಾಗುವಂತೆ ಕಾರ್ಯಕ್ರಮವನ್ನು ರೂಪಿಸಿದ್ದರು. ಆಶ್ಚರ್ಯವೆಂದರೆ ಪ್ರತಿಯೊಬ್ಬರ ಬಳಿಯಿದ್ದ ಒಂದೊಂದು ತಬಲಾವೂ ಒಂದೊಂದು ರೀತಿಯ ನಾದವನ್ನು ಹೊರಡಿಸುತ್ತಿತ್ತು. ಹಿನ್ನಲೆಯಲ್ಲಿ ಇಬ್ಬರು ಗಾಯಕಿಯರು ಮತ್ತು ಇಬ್ಬರು ಗಾಯಕರು ಸಹಕರಿಸಿದ್ದರು. ಉಪನಿಷತ್ತಿನ ಕೆಲವು ಶ್ಲೋಕಗಳನ್ನು  ಮತ್ತು ಆಲಾಪನೆಯನ್ನು  ಹಿತವಾಗಿ ಹಾಡುತ್ತಿದ್ದರು.   ಅಲ್ಲಿ ಕಳೆದ ಮೂರುಗಂಟೆ ವ್ಯರ್ಥವಾಗಲಿಲ್ಲವೆಂದೆನಿಸಿತು.  


ಮುಂದಿನ ವಾರ ನಮ್ಮ ಕುಪ್ಪಳ್ಳಿಗೆ ಹೋಗಬೇಕು.  ಕುವೆಂಪು ಹಬ್ಬವಿದೆ. (ಡಿ.೨೯ ಮತ್ತು ೩೦)


ಕಳೆದವಾರದ ಓದು. :೧. ಸಂಗೀತ ಜೀವನ ತಪಸ್ಯಾ: ದ.ಸ.ಗರುಡ .(೨೭೭ಪು). ೨. ಸಂಗೀತ ಸಮಯ : ಎಸ್.ಕೃಷ್ಣಮೂರ್ತಿ. (೩೪೯ಪು) . ೩. ಸಂಗೀತ ಸಾಮ್ರಾಜ್ಞಿ ಎಂ.ಎಸ್-ಸಾಕೃರಾಮಚಂದ್ರರಾವ್ (೧೦೬) ೪, ನಾ ಕಂಡ ಕಲಾವಿದರು-ವಾಸುದೇವಾಚಾರ್ಯ (೧೩೫ಪು) ೫, ನನ್ನ ರಸಯಾತ್ರೆ- ಮಲ್ಲಿಕಾರ್ಜುನ್ ಮನ್ಸೂರ್ (೧೧೨ಪು)

Friday, December 17, 2010

ಕಾಣದಂತೆ ಮಾಯವಾಯಿತು- ಚಳಿ

ಕಾಣದಂತೆ ಮಾಯವಾಯಿತು- ಚಳಿ.


ಈಗ ಹತ್ತು ಹನ್ನೆರೆಡು ದಿನಗಳಿಂದ ನನ್ನೂರಿಗೆ ಮಳೆಯಿಂದ ಮುಕ್ತಿ ಸಿಕ್ಕಿದೆ. ಕೃಷಿಕರೆಲ್ಲರೂ ನೆಮ್ಮದಿಯಿಂದ ತಮ್ಮ ಅಡಿಕೆ ಮತ್ತು ಗದ್ದೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಚಳಿಗಾಲದ ಆರಂಭದ ದಿನಗಳಲ್ಲಿ ಬೆಳಿಗ್ಗೆ ಎಂಟರವರೆಗೆ ಊರನ್ನು ಆವರಿಸಿಕೊಂಡಿದ್ದ ಚಳಿ ಮಾತ್ರ ಈಗ ಎರಡು ದಿನಗಳಿಂದ ಕಾಣೆಯಾಗಿದೆ. ಬೆಳಿಗ್ಗೆ ಆರರವರೆಗೆ ಮಾತ್ರ ಸ್ವಲ್ಪ ಇಬ್ಬನಿ ಕಾಣಿಸಿಕೊಂಡರೂ ನಂತರ ಪೂರ್ಣವಾಗಿ ಮಾಯವಾಗಿ ಹೋಗಿಬಿಡುತ್ತದೆ. ಚಳಿ ಕಡಮೆಯಾದರೆ , ಇಬ್ಬನಿ ಸುರಿಯುವುದು ಕಡಮೆಯಾದರೆ ಮುಂದಿನ ವರ್ಷ ಮಳೆ ಕಡಮೆ ಎಂಬ ನಂಬಿಕೆ ಇಲ್ಲಿಯವರದು. ಕಳೆದ ವರ್ಷ ಚಳಿಗಾಲವೇ ಇರಲಿಲ್ಲ. ಕೇವಲ ಐದು ದಿನ ಮಾತ್ರ ಚಳಿ ಕಾಡಿತ್ತು. ಜಾತ್ರೆಯ ಸಮಯ ಕಂಬಳಿಯ ರಾಶಿ ಹೊತ್ತು ಕೊಂಡು ಬಂದವರು ನಿರಾಶರಾಗಿ ಹಾಗೆಯೇ ಆ ರಾಶಿಯನ್ನು ಹೊತ್ತುಕೊಂಡು ಮರಳಿ ತಮ್ಮೂರಿಗೆ ಹೋಗಿದ್ದರು. ಈ ಬಾರಿಯೂ ಹೀಗೇ ಆಗಬಹುದು ಎಂಬ ನಿರೀಕ್ಷೆ ಎಲ್ಲರದೂ. 


ಜಾತ್ರೆ ಬರುತ್ತಿದೆ. ಎಳ್ಳಮಾವಸ್ಯೆಯ ಸ್ನಾನ ಮಾಡಲು ಎಲ್ಲಾ ಪಾಪಿಗಳೂ ಸಿದ್ಧರಾಗುತ್ತಿದ್ದಾರೆ. ಆ ದಿನ ರಾಮಕುಂಡದಲ್ಲಿ ಮುಳುಗಿದರೆ ಸರ್ವ ಪಾಪವೂ ಪರಿಹಾರವಾಗುತ್ತದೆ ಎಂಬ ವಿಶ್ವಾಸ ಊರಜನರಲ್ಲಿದೆ. ಹಾಗಾಗಿ ಬೆಳಿಗ್ಯೆ ಎಲ್ಲರೂ ಸರದಿಯಲ್ಲಿ ಒಂದು ಮುಳುಗು ಹಾಕಲು ನಿಂತಿರುತ್ತಾರೆ. ಒಂದೇ ಮುಳುಗು ಮಾತ್ರ. ಏಕೆಂದರೆ ಉಳಿದ ಪಾಪಿಗಳಿಗೂ ಅವಕಾಶ ಸಿಗಬೇಕಲ್ಲ. ಪೋಲಿಸ್ ಆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಇತ್ತ ಹರಿಯುವ ನದಿಯಲ್ಲಿ ನೀವು ಎಷ್ಟು ಹೊತ್ತು ಈಜಾಡಿದರೂ ಚಿಂತಿಲ್ಲ. ಆದರೆ ರಾಮಕುಂಡದಲ್ಲಿ ಆ ದಿನ ಒಂದೇ ಮುಳುಗು.  ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ನಾನೂ ಕಾಯುತ್ತಿದ್ದೇನೆ -ಮನೆಯ ಚಿಕ್ಕ ಮಕ್ಕಳ ಜತೆಯಲ್ಲಿ ಸೇರಿ ಬೀದಿ ತುಂಬಾ ತಿರುಗಬೇಕು. ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರು ಈಗಲೇ ತಮ್ಮ ತಮ್ಮ ವ್ಯಾಪಾರದ ಸ್ಥಳಗಳನ್ನು ಗುರುತಿಸಿಕೊಂಡು ಗಡಿ ನಿರ್ಧರಿಸಿ ತಮ್ಮ ಪತಾಕೆಯಂತೆ ಒಂದು ಹಗ್ಗವನ್ನು ಕಟ್ಟಿ ಹೋಗಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ತಮ್ಮ ವಸ್ತುಗಳನ್ನು ತಂದು ಅಲ್ಲಿ ಹರಡಿ ಬಾಯಿಗೆ ಕೆಲಸಕೊಡುತ್ತಾರೆ. ಅವರ ಅಂಗಡಿಗೆ ವ್ಯಾಪಾರಕ್ಕೆ ಬರುವ ಹಳ್ಳಿಗರ ಚೌಕಾಶಿ ನೋಡಲು ಬಹಳ ಖುಷಿಯಾಗುತ್ತದೆ. ವ್ಯಾಪಾರಿ ಹೇಳಿದ ಬೆಲೆಯನ್ನು ಯಾರೂ ಕೊಡುವುದೇ ಇಲ್ಲ. ಹಾಗೆ ಕೊಟ್ಟರೆ ಅವನು ಮಂಗ . ಅವನು ಹೇಳಿದ್ದಕ್ಕಿಂತ ಕಡಮೆ ಕೊಟ್ಟರೆ ಮಾತ್ರ ಅವನು ಬುದ್ಧಿವಂತನೆನಿಸಿಕೊಳ್ಳುತ್ತಾನೆ. 


ಕಳೆದ ವರ್ಷ ಹೀಗಾಯಿತು. ನನ್ನ ಗೆಳೆಯರೊಬ್ಬರ ಅಂಗಡಿಯ ಎದುರು ಒಬ್ಬ ವ್ಯಾಪಾರಿ ದೊಡ್ಡದೊಡ್ಡ ಪೋಸ್ಟರ‍್ಗಳನ್ನು ಹರಡಿಕೊಂಡು ಕುಳಿತುಕೊಂಡಿದ್ದ. ಅವನ ವ್ಯಾಪಾರದ ರೀತಿಯನ್ನು ನೋಡುತ್ತಾ ನಾನೂ ಅಲ್ಲಿ ನನ್ನ ಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಸಂಜೆಯ ವೇಳೆ ಕಾಲೇಜು ಹುಡುಗಿಯರ ದಂಡು ಒಂದು ಬಂದಿತು. ಆ ಪೋಸ್ಟರ‍್ಗಳನ್ನು ನೋಡುತ್ತಲೇ ಅಯ್ಯೋ ಹೃತಿಕ್, ಶಾರೂಕ್ ಎಂದು ಸಂಭ್ರಮಿಸಿತ್ತಿರುವಾಗಲೇ ರಾಮಚಂದ್ರಾಪುರ ಮಠದ ಇಬ್ಬರು ಮಾಣಿಗಳೂ ಅಲ್ಲಿಗೆ ಬಂದರು. ಆದರೆ ಅವರು ಅಪ್ಪಿ ತಪ್ಪಿಯೂ ಸಿನಿಮಾನಟರ ಪೋಸ್ಟರ‍್ಗಳನ್ನು ನೋಡಲೇ ಇಲ್ಲ. ಐಶ್ವರ್ಯಾ, ಕರೀನಾ ಪೋಸ್ಟರ್ ಅವರನ್ನು ಸೆಳೆಯಲೇ ಇಲ್ಲ. ಅಲ್ಲಿದ್ದ ದೇವರ ಪೋಸ್ಟರ‍್ಗಳ ಮೇಲೆಯೇ ಅವರ ಗಮನ. ಅದರಲ್ಲಿ ಎರಡು ಪೋಸ್ಟರ‍್ಗಳನ್ನು ಆರಿಸಿ ದುಡ್ಡುಕೊಟ್ಟು ಹೊರಟುಹೋದರು. ಒಂದು ಲೋಕಕ್ಕೆ ಪೂರ್ಣ ಕುರುಡರಾದ ಇವರ ವರ್ತನೆ ಕಂಡ ನನಗೆ ಅನಿಸಿದ್ದು- ಹೀಗೂ ಉಂಟೇ? ಇಂತಹ ಜಾತ್ರೆ ಜನವರಿ ೪ ರಂದು. ನಾನೂ ನನ್ನ ಮೊಮ್ಮಕ್ಕಳೂ ಕಾದು ಕುಳಿತಿದ್ದೇವೆ. 


ಕಳೆದವಾರ ಊರಿನ ನಟಮಿತ್ರರು ಕಾರ್ನಾಡರ ಯಯಾತಿಯನ್ನು ಪ್ರದರ್ಶಿಸಿದರು. ಸಾಗರದ ಎಸ್. ಮಾಲತಿಯ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ತೃಪ್ತಿಕರವಾಗಿತ್ತು. ಮುಖ್ಯಪಾತ್ರಗಳಲ್ಲಿ ಸಂದೇಶ್ ಜವಳಿ ಮತ್ತು ನಿಲೇಶ್ ಜವಳಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದರು ಎಂದೇ ಹೇಳಬೇಕು. ಇಬ್ಬರ ಅಭಿನಯ ಪ್ರೇಕ್ಷಕರ ಕರತಾಡನವನ್ನು ಗಳಿಸಿತು. ಆದರೆ ಸ್ತ್ರೀಪಾತ್ರಗಳು ಸೋತು ಹೋದವು. ಒಳ್ಳೆಯ ನಟಿಯರ ಅಭಾವದಿಂದಾಗಿ ನಿರ್ದೇಶಕರು ಕಾಲೇಜಿನ ಎಳೆಯ ವಿದ್ಯಾರ್ಥಿನಿಯರನ್ನು ಆರಿಸಿಕೊಂಡಿದ್ದರು. ಅವರ ಪಾತ್ರಕ್ಕೂ ಪ್ರಾಯಕ್ಕೂ ಹೊಂದಾಣಿಕೆಯಾಗದೇ ಹೋಯಿತು. 


ವಾರದ ಓದು: ಶ್ರೀ ಸದಾಶಿವ ಯೋಗಿಗಳ "ಸತ್ಯದ ಹುಡುಕಾಟ(೨೬೯ಪು) ಮತ್ತು ಸಂಗೀತ ಸಂವಾದ-ಭಾಸ್ಕರ್ ಚಂದಾವರ್ಕರ್ (೨೦೨ಪು).    

Friday, December 10, 2010

ಬಿಟ್ಟೆನೆಂದರೂ ಬಿಡದ ಈ ಮಾಯೆ

ಬಿಟ್ಟೆನೆಂದರೂ ಬಿಡದ ಈ ಮಾಯೆ 


ನಿನ್ನೆ ಶುಕ್ರವಾರ ಅನಿವಾರ್ಯವಾಗಿ ಮತ್ತೆ ಮಂಗಳೂರಿಗೆ ಹೋಗಬೇಕಾಯಿತು. ೨೦೦೬ರಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರು ಮಾಡಿ ಮಾರುತ್ತಿದ್ದ ಒಂದು ಗುಂಪನ್ನು ಮಂಗಳೂರು ಪೋಲಿಸರು ಬಂಧಿಸಿದ್ದರು. ಅದರಲ್ಲಿ ನಮ್ಮ ಕಾಲೇಜಿನ ಮುದ್ರೆಯಿರುವ ಒಂದು ಅಂಕಪಟ್ಟಿಯೂ ಇತ್ತು. ಅದರ ಮಹಜರಿಗಾಗಿ ಬಂದ ಪೋಲಿಸರಿಗೆ ಅದು ನಕಲಿ ಎಂದು ಹೇಳಿಕೆ ಕೊಟ್ಟಿದ್ದೆ. ನಾಲ್ಕು ವರುಷದ ನಂತರ ಈಗ ಈ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದರ ಸಾಕ್ಷಿ ಹೇಳಲು ನಾನು ನ್ಯಾಯಾಲಯಕ್ಕೆ ಹೋಗಬೇಕಾಗಿ ಬಂತು. ಬಹು ಕಾಲದ ನಂತರ ಮತ್ತೆ ಮಂಗಳೂರು ಭೇಟಿ ಹೀಗೆ ಆಯಿತು.


ಮಂಗಳೂರು ಪ್ರವೇಶಿಸುತ್ತಲೇ ಏನೋ ಒಂದು ತರದ ಅನುಭವ. ಮೂವತ್ತೇಳು ವರುಷಗಳ ಕಾಲ ಇದ್ದ ಈ ಊರನ್ನು ಬಿಟ್ಟು ಈಗ ಹುಟ್ಟೂರಿಗೆ ಹೋಗಿ ನೆಲೆನಿಂತರೂ, ಮತ್ತೆ ಮಂಗಳೂರು ನನ್ನ ಮೇಲೆ ಮೋಡಿ ಮಾಡಿತು. ಒಂದು ಕ್ಷಣ ನಾನು ಈ ಊರನ್ನು ಬಿಟ್ಟು ತಪ್ಪು ಮಾಡಿದೇನೋ ಎಂದೆನಿಸಿತು. ಅಗಾಧವಾಗಿ ದಿನದಿಂದ ದಿನಕ್ಕೆ ಗುರುತೇ ಸಿಗದಂತೆ ಬದಲಾಗುತ್ತಿರುವ ಮಂಗಳೂರಿನ ಮಾಯೆಯೇ ಅಂತಹದು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಮೌಲ್ಯಮಾಪನ ಈಗ ನಡೆಯುತ್ತಿದೆ. ಈ ಕಾರಣದಿಂದ ನನ್ನ ಕನ್ನಡ ಅಧ್ಯಾಪಕರನ್ನು ಹುಡುಕಿ ಎಸ್‍ಡಿಎಂ ಕಾಲೇಜಿಗೆ ಹೋಗಿ ಮೂರು ಮಾಳಿಗೆಯನ್ನು ಏರಿ ಏದುಸಿರು ಬಿಡುತ್ತಾ ನನ್ನವರನ್ನು ನೋಡುತ್ತಾ ನಿಂತಾಗ  ಹತ್ತಿ ಬಂದ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಪರಿಹಾರವಾಗಿತ್ತು. ಎಲ್ಲರೂ ನನ್ನವರೇ. ಬಾಯಿತುಂಬಾ ಮಾತನಾಡಿಸುವವರು. ಅವರನ್ನೆಲ್ಲಾ ನೋಡಿ ಮಾತನಾಡಿಸಿದಾಗ ನನ್ನ ಊರಿನ ಒಂಟಿತನ ನೆನಪಿಗೆ ಬಂದಿತು. ಇಲ್ಲಿಯೇ ಇದ್ದಿದ್ದರೆ ಇವರೆನ್ನೆಲ್ಲಾ ಆಗಾಗ ನೋಡುತ್ತಾ ಇರಬಹುದಿತ್ತಲ್ಲ ಎಂದೆನಿಸಿತು. 


ಮಂಗಳೂರಿನ ಮತ್ತೊಂದು ಆಕರ್ಷಣೆಯೆಂದರೆ ನಮ್ಮ ಅಶೋಕರ ಅತ್ರಿ ಪುಸ್ತಕ ಮಳಿಗೆ. ಮಂಗಳೂರಿಗೆ ಹೋದಾಗಲೆಲ್ಲಾ ಅಲ್ಲಿಗೆ ಹೋಗದಿದ್ದರೆ ನನ್ನ ಮಂಗಳೂರು ದರ್ಶನ ಅಪೂರ್ಣವಾಗಿರುತ್ತದೆ. ವ್ರತದಂತೆ ಅಲ್ಲಿಗೆ ಹೋಗಿಯೇ ಹೋಗುತ್ತಿರುತ್ತೇನೆ. ಅವರ ಮಳಿಗೆಯಲ್ಲಿರುವ ಪುಸ್ತಕಗಳ ರಾಶಿ ನೋಡಿದಾಗ ಮಾಲಿಗೆ ಹೋಗಿ ಕಕ್ಕಾಬಿಕ್ಕಿಯಾಗುವ ಮಗುವಿನಂತೆ ನನ್ನ ಮನಸ್ಸು ಗೊಂದಲಕ್ಕೀಡಾಗುತ್ತದೆ. ಯಾವ ಪುಸ್ತಕ ಆರಿಸುವುದು ಎಂಬ ಸಮಸ್ಯೆ ಕಾಡುತ್ತದೆ. ಎಲ್ಲವೂ ಬೇಕೆನಿಸುತ್ತದೆ.  ನಿನ್ನೆಯೂ ಅಲ್ಲಿಗೆ ಹೋಗಿ ಹೊಸಪುಸ್ತಕಗಳನ್ನು ಕೊಂಡು ಬಂದೆ. ಮತ್ತೆ ಒಂದು ತಿಂಗಳು ಚಿಂತೆಯಿಲ್ಲ ಎಂಬ ಸಮಾಧಾನ ಈಗ. 


 ಮಂಗಳೂರಿಗೆ ಬಂದಾಕ್ಷಣ  ಮನಸ್ಸಿನಲ್ಲಿ ಆವರಿಸಿಕೊಂಡ ಮಾಯೆ  ಊರಿನತ್ತ ಹೊರಟಾಗ  ನಿಧಾನವಾಗಿ ಕರಗಲಾರಂಭಿಸಿತು. ಮತ್ತೆ ನನ್ನೂರೇ ಒಳ್ಳೆಯದು. ಏನಿದ್ದರೂ ಇದೇ ಸ್ವರ್ಗವೆಂದೆನಿಸಿತು. ಅಲ್ಲಿಗೆ ಬಂದಾಗಲೆಲ್ಲಾ ವಿಶ್ವಾಮಿತ್ರನ ಮುಂದೆ ಕುಣಿದ ಮೇನಕೆಯಂತೆ ಈ ಮಾಯೆ ನನ್ನನ್ನು ಆವರಿಸಿಕೊಳ್ಳುತ್ತಿರುತ್ತದೆ. ಅದರಿಂದ ಪಾರಾಗಿ ಬಂದ ನಂತರ ನನ್ನೂರು ಹೊಸತಾದ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ..  


ಈಗ ನಿನ್ನೆಯ ನೆನಪುಗಳು ಉಳಿದುಕೊಂಡಿವೆ. ಕೈಯಲ್ಲಿ ನಿನ್ನೆ ಕೊಂಡು ತಂದ ಹೊಸ ಪುಸ್ತಕಗಳಿವೆ. ಮನಸ್ಸು ತಳಮಳವನ್ನು ಮೆಟ್ಟಿನಿಂತಿದೆ. ಏನೋ ಲವಲವಿಕೆ ಮೂಡಿದೆ. ಈ ದಿನ ಆಗಸದಲ್ಲಿ ಮೋಡ ಆವರಿಸಿಕೊಂಡು ಹಗಲಿನಲ್ಲಿ ಮಬ್ಬುಗತ್ತಲೆ ತುಂಬಿಕೊಂಡರೂ ಖುಷಿಯಲ್ಲಿದ್ದೇನೆ.


ವಾರದ ಓದು.
ಗಾನಗಂಗೆಯಾದ ಗಂಗೂಬಾಯಿ ಹಾನಗಲ್‍ರವರ ಕುರಿತಾದ ಎರಡು ಪುಸ್ತಕಗಳನ್ನು ಓದಿದೆ. ೧, ನನ್ನ ಬದುಕಿನ ಹಾಡು-ಎನ್ಕೆ (೧೦೬) ಮತ್ತು ೨. ಗಂಗಾವತರಣ- ದಮಯಂತಿ ನರೇಗಲ್ಲ. (೧೫೫). ಎರಡೂ ಪುಸ್ತಕಗಳನ್ನು ಸಂಗೀತ ಪ್ರೇಮಿಯಾದ ನನ್ನ ಆತ್ಮೀಯರಾದ ಶ್ರೀ ಮಹಾಲಿಂಗಭಟ್ಟರಿಗೆ ದಾನ ಮಾಡಿದೆ. ಸತ್ಪಾತ್ರರಿಗೆ ಕೊಟ್ಟ ಸಮಾಧಾನ ನನಗೆ. 

Saturday, December 4, 2010

ಒಮ್ಮೆ ಹಾಡಿದ ಹಾಡು ಮತ್ತೊಮ್ಮೆ

ಒಮ್ಮೆ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡದಿರಲು ನಿರ್ಧರಿಸಿದ್ದೇನೆ. ಅಂದರೆ ನಾನು ಒಬ್ಬ ಗಾಯಕನೆಂಬ ಭ್ರಮೆ ಬೇಡ. ಈ ವಾರದ ನನ್ನ ಬರವಣಿಗೆಯ ಶೀರ್ಷಿಕೆ ಇದು ಅಷ್ಟೇ. ನನ್ನ ಬಳಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕ ಪುಸ್ತಕಗಳಿವೆ.  ವೃತ್ತಿಗೆ ಸೇರಿದ ದಿನದಿಂದ ಪುಸ್ತಕ ಸಂಗ್ರಹಿಸಲು ಪ್ರಾರಂಬಿಸಿದೆ. ನನ್ನ ಗುರುಗಳಾದ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ತರಗತಿಯಲ್ಲಿ ’ ಓದಬೇಕ್ರಯ್ಯಾ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಇಷ್ಟು ಪುಸ್ತಕಗಳು ಅಚ್ಚಾಗುತ್ತಿವೆ. ಅಂದರೆ ನಿಮಿಷಕ್ಕೆ ಇಷ್ಟಾಯಿತು. ಗಂಟೆಗೆ ಇಷ್ಟಾಯಿತು. ನೀವು ಇದರಲ್ಲಿ ಎಷ್ಟು ಓದಲು ಸಾಧ್ಯ? ಆದ್ದರಿಂದ ಓದಿ . ಓದಿ ಎಂದು ಪ್ರೊತ್ಸಾಹಿಸುತ್ತಿದ್ದರು. ಯಾವುದೇ ಪಠ್ಯವನ್ನು ಮಾಡುವಾಗ ನಾನು ಅದರ ಮೂಲವನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಅದರ ಕುರಿತಾಗಿ ಬಂದಿರಬಹುದಾದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ಓದುತ್ತಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಹವ್ಯಾಸ ಇವತ್ತಿಗೂ ಹೋಗಿಲ್ಲ. ಇಲ್ಲಿ ಸಣ್ಣದಾದ ಊರಲ್ಲಿ ಕುಳಿತುಕೊಂಡರೂ ತಿಂಗಳಿಗೆ ಏಳೆಂಟುಪುಸ್ತಕಗಳನ್ನು ತರಿಸಿಕೊಳ್ಳುತ್ತಿರುತ್ತೇನೆ. ಒಂದು ಊರಿನ ಮಾನಸಿಕ ಸ್ಥಿತಿಯಲ್ಲಿ ಅಳೆಯಬೇಕಾದರೆ ಅಲ್ಲಿನ ಪುಸ್ತಕದ ಅಂಗಡಿಗೆ ಹೋಗಬೇಕು. ಎಷ್ಟೆಷ್ಟು ಪುಸ್ತಕದ ಅಂಗಡಿಗಳು ಇರುತ್ತವೆಯೋ ಅಷ್ಟು ಆರೋಗ್ಯವಂತವಾಗಿ ಆ ಊರು ಸಮಾಜ ಇದೆ ಎನ್ನುವುದು ತಿಳಿಯುತ್ತದೆ. ವ್ಯಾಪಾರವಿಲ್ಲದೆ ಆ ಅಂಗಡಿಗಳು ಸೊರಗುತ್ತಿವೆ ಎಂದಾದರೆ ಊರಿಗೆ ಗ್ರಹಣ ಹಿಡಿಯುತ್ತಿದೆ ಎಂದೇ ಅರ್ಥ ಮಾಡಿಕೊಳ್ಳಬೇಕು.  ಗ್ರಹಚಾರಕ್ಕೆ ನನ್ನೂರಿನಲ್ಲಿ ಒಳ್ಳೆಯ ಪುಸ್ತಕ ಭಂಡಾರವಿಲ್ಲ. ಹಾಗಾಗಿ ಮಂಗಳೂರಿನ ಅತ್ರಿಯಿಂದ ತಿಂಗಳಿಗೊಮ್ಮೆ ಪುಸ್ತಕ ತರಿಸಿಕೊಳ್ಳುತ್ತಿರುತ್ತೇನೆ.


ಮೂರು ತಿಂಗಳ ಹಿಂದೆ ಹೀಗಾಯಿತು. ಭೈರಪ್ಪನವರ ಕವಲು ಪ್ರಕಟವಾದಾಕ್ಷಣ ತರಿಸಿಕೊಂಡು ಓದಿದೆ. ಅದನ್ನು ಓದಿದನಂತರ ಅವರ ಹಿಂದಿನ ಕಾದಂಬರಿಗಳನ್ನು ಓದುವ ಹುಕ್ಕಿ ಬಂದಿತು. ಸರಿ . ಮತ್ತೆ ಅವರ ಹಳೆಯ ಕಾದಂಬರಿಗಳನ್ನು ಒಂದರ ನಂತರ ಒಂದರಂತೆ ಓದಲು ಪ್ರಾರಂಭಿಸಿದೆ. ಹೀಗೆ ನಾಲ್ಕು ಪುಸ್ತಕ ಓದಿದೆ. ಆಗ ನನ್ನ ಹೊಸ ಓದಿಗೆ ಅಡ್ಡಿಯಾಯಿತು. ಮತ್ತೆ ಮತ್ತೆ ಅವೇ ಎಂದೋ ಓದಿದ ಪುಸ್ತಕಗಳನ್ನು ಓದುತ್ತಿದ್ದೇನೆ. ಇದು ಸರಿಯಲ್ಲವೆಂದೆನಿಸಿತು. ಹಾಗಾಗಿ ಈಗ ಮತ್ತೆ ಹಳೆಯ ಪುಸ್ತಕಗಳನ್ನು ಓದುವುದನ್ನು ಬಿಟ್ಟಿದ್ದೇನೆ. ಒಮ್ಮೆ ಓದಿದ ಪುಸ್ತಕವನ್ನು ಇನ್ನು ಯಾವುದೇ ಕಾರಣಕ್ಕೆ ಮತ್ತೊಮ್ಮೆ ಓದಲಾರೆ ಎಂದು ನಿರ್ಧರಿಸಿದ್ದೇನೆ. ಓದಿಯಾದ ಪುಸ್ತಕಗಳನ್ನು ನಿರ್ಮೋಹದಿಂದ ಕೈಯೆತ್ತಿ ದಾನ ಮಾಡುತ್ತಿದ್ದೇನೆ.  ಇದು ನನ್ನ ಅಂತಿಮ ಓದು. ಹಾಗಾಗಿ ಪುನರಾವರ್ತನೆಯಾಗದಂತೆ ಒಮ್ಮೆ ಓದಿ ಮುಗಿಸಬೇಕು. ಒಮ್ಮೆ ಹಾಡಿದ ಹಾಡು ಮತ್ತೆ ಹಾಡಬಾರದು.  


ಈ ವಾರದ ಓದು. : ರವಿಬೆಳೆಗೆರೆಯವರ ಕಾಮರಾಜಮಾರ್ಗ (೪೦೨ಪು) ಮತ್ತು ರಥಬೀದಿ- ಶ್ರೀಧರ ಬಳೆಗಾರ (೧೫೩ಪು). 

Sunday, November 28, 2010

ಕಭಿ ಖುಷಿ ಕಭಿ ಗಂ

ಕಭಿ  ಖುಷಿ ಕಭಿ ಗಂ


ಕಳೆದ ವಾರದ ಏಳು ದಿನಗಳಲ್ಲಿ ಐದು ದಿನ ಸಂಜೆ ಮತ್ತೆ ಅದೇ ಮೋಡ ಮತ್ತು ಅದೇ ಮಳೆ. ಉಳಿದ ಎರಡು ದಿನಗಳಲ್ಲಿ ಸಂಜೆ ಕಾಣಿಸಿಕೊಂಡ ಬಿಸಿಲು ಮನಸ್ಸಿಗೆ ಎಷ್ಟು ಸಂತೋಷ ತಂದುಕೊಟ್ಟಿತು ಎಂದರೆ ದಿನಾ ಹೀಗೆ ಇರಬಾರದಾ ಎಂದೆನಿಸಿತು. ಮತ್ತೆ ನಾಳೆ ಹೇಗೋ ಏನೋ ಎಂಬ ಚಿಂತೆ ಕಾಡುತ್ತಿತ್ತು. ಅರ್ಥ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲದ ಹವಾಮಾನ ನಮ್ಮೆಲ್ಲರ ತಲೆಯನ್ನಂತೂ ತಿನ್ನುತ್ತಿದೆ. ಇಂತಹ ವಾತಾವರಣ ಮನಸ್ಸನ್ನು ಮುದುಡಿಸುತ್ತಿದೆ. ಖಿನ್ನತೆ ಆವರಿಸಿಕೊಳ್ಳುತ್ತಿದೆ. ಯಾವ ಕೆಲಸದಲ್ಲಿಯೂ ಉತ್ಸಾಹವಿರುವುದಿಲ್ಲ. ಬೆಳಿಗ್ಯೆ ಏಳುವಾಗಲೇ ಮೋಡ ತುಂಬಿದ ಆಕಾಶ ಕಂಡಾಗ ಯಾರಿಗಾದರೂ ಉತ್ಸಾಹ ಬರುವುದು ಹೇಗೆ?. ಮಳೆಗಾಲವಂತೂ ಅಲ್ಲ. ಈಗ ಯಾವತ್ತೂ ಮಳೆಗಾಲವೇ. ಪ್ರತಿದಿನದ ಪತ್ರಿಕೆಯಲ್ಲಿ ಹವಾಮಾನ ವರದಿ ನೋಡಿದಾಗ ಮತ್ತೆ ಮಳೆ ಬರುವ ಸಂಭವವುಂಟು ಎಂದು ತಿಳಿದಾಗ ಮತ್ತೆ ಮತ್ತೆ ಮನಸ್ಸು ಕುಸಿದುಹೋಗುತ್ತಿದೆ.


ಹೇಳಿ ಕೇಳಿ ನನ್ನೂರು ಅಂತಹ ದೊಡ್ಡ ಊರೇನೂ ಅಲ್ಲ. ಸಾಹಿತ್ಯಕ ಕಾರ್ಯಕ್ರಮಗಳಾಗಲೀ ಅಥವಾ ಬೇರೆ ಕಾರ್ಯಕ್ರಮಗಳು ನಡೆಯುವುದೇ ಕಷ್ಟದಲ್ಲಿ. ಸಾಂಸ್ಕೃತಿಕವಾಗಿ ಬಹಳ ಸಂಪನ್ನವಾಗಿರುವ ಊರು ಎಂದು ಒಂದು ಕಾಲದಲ್ಲಿ ಹೆಸರನ್ನು ಪಡೆದಿತ್ತು ನನ್ನೂರು. ಆದರೆ ಈಗ ಕಾಲ ಬದಲಾಗಿದೆ. ತಿಳಿದವರು, ಬುದ್ಧಿವಂತರು, ಓದುಗರು ಸೇರುವುದೇ ವಿರಳವಾಗಿ ಹೋಗಿದೆ. ಬೇರೆಯವರ ಮಾತುಗಳನ್ನು ಕೇಳುವ ಅವಕಾಶವನ್ನೇ ನಾವು ಕಳೆದುಕೊಂಡಿದ್ದೇವೆ. ಊರು ನಿಧಾನವಾಗಿ ಎಚ್ಚತ್ತುಕೊಳ್ಳುತ್ತದೆ ಮತ್ತು ರಾತ್ರಿ ಎಂಟುಗಂಟೆಯೆನ್ನುವಾಗ ನಿದ್ರಿಸಲು ಪ್ರಾರಂಭಿಸುತ್ತದೆ. ಧಾವಂತವಿಲ್ಲದ ನಡೆ ನನ್ನೂರಿನದು. ನಾವು ಹಾಗೇ ಆಗಿಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಬೆಳ್ಳಂಬೆಳಗ್ಗೆ ಎದ್ದು ಚಟುವಟಿಕೆಯಿಂದ ಬದುಕು ನಡೆಸುತ್ತಿದ್ದ ನಾನು ಈಗ ಹೊಂದಿಕೊಂಡಿದ್ದೇನೆ ನನ್ನೂರಿಗೆ. ಗಂಟೆ ಐದೂವರೆ ಎನ್ನುವಾಗ ಬೆಳಗಾಗುತ್ತದೆ. ಹಾಲು ಮತ್ತು ಪೇಪರ್ ತೆಗೆದುಕೊಂಡು ಬಂದರೆ ದಿನದ ವ್ಯವಹಾರ ಮುಗಿದ ಹಾಗೆ. ಮೊದಲಿನ ಪುಟದಿಂದ ಕೊನೆಯ ಪುಟದವರೆಗೆ ಎಲ್ಲಾ ಆರು ಪತ್ರಿಕೆಗಳನ್ನು ಓದುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಬೇರೆ ಯಾವುದೇ ಹೇಳಿಕೊಳ್ಳುವ ಕೆಲಸವಿಲ್ಲದೇ ಇದ್ದುದರಿಂದ ಅದರಲ್ಲಿಯೇ ಸುಖ ಹುಡುಕುತ್ತಿದ್ದೇನೆ.ಇದರ ಜತೆಗೆ ಮತ್ತುಳಿದ ಪುಸ್ತಕಗಳಿವೆ. ಹೊಸತಾಗಿ ಬರುತ್ತಿರುವ ಪುಸ್ತಕಗಳನ್ನು ತರಿಸಿಕೊಂಡು ಓದುವುದು ಮತ್ತು ಅದನ್ನು ಬೇರೆಯವರಿಗೆ ಹೇಳಿ ಅದನ್ನು ಓದುವಂತೆ ಮಾಡುವ ಪ್ರಯತ್ನ ಮಾಡುತ್ತಿರುತ್ತೇನೆ.   


ಕಳೆದವಾರದ ಓದು:ಜೀವಧ್ವನಿ - ಸರ್ಜಾಶಂಕರ ಹರಳಿಮಠ. (೧೫೨ಪು) ಜೋಗಿಕಾಲಂ-ಜೋಗಿ(೨೧೬ಪು) ಕಾಸರಗೋಡಿನ ಸಣ್ಣಕತೆಗಳು (೩೫೩) ಮತ್ತು ಮರುಓದು ತೇಜಸ್ವಿಯವರ ಪಾಕಕ್ರಾಂತಿ (೮೯ಪು)

Wednesday, November 17, 2010

ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.

ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.


ಪ್ರಾಯವಾಗುತ್ತಾ ಹೋದಂತೆ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ "ಹಿಂದೆಲ್ಲಾ ಹೀಗಿರಲಿಲ್ಲ" ಎಂದು ಹಪಹಪಿಸುವುದು ಸಾಮಾನ್ಯ.  ಈಗಿನ ವಾತಾವರಣ ನೋಡಿ. ಮಳೆಗಾಲ ಸಾಧಾರಣವಾಗಿ ಅಕ್ಟೋಬರ್ ತಿಂಗಳಿಗೆ ಮುಗಿದು ಹೋಗುತ್ತಿತ್ತು. ನವೆಂಬರ್ ಡಿಸೆಂಬರ್ ತಿಂಗಳೆಂದರೆ ಥರಥರ ನಡುಗಿಸುವ ಚಳಿ ಕಾಣಿಸಿಕೊಳ್ಳಬೇಕಾಗಿತ್ತು. ಈಗ ಏನಾಗಿದೆ ಎಂದರೆ ಇನ್ನೂ ಮಳೆಗಾಲ ಮುಗಿದಿಲ್ಲ. ಪ್ರತಿದಿನವೂ ಮಳೆ ಮಳೆ. ಮನಸ್ಸನ್ನು ಮುದುಡಿಸುವ ಮಳೆ. ಬೇಸರವನ್ನು ಹೆಚ್ಚಿಸುವ ಮಳೆ. ಉತ್ಸಾಹವನ್ನು ಕುಗ್ಗಿಸುವ ಮಳೆ . ಹಗಲಿಡೀ ಮಬ್ಬುಗತ್ತಲೆ. ಮಧ್ಯಾಹ್ನವಾಗುತ್ತಲೇ ಸುರಿವ ಮಳೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆನ್ನುವಂತೆ , ಬೆಳೆದ ಬೆಳೆ ಎಲ್ಲವೂ ಮಳೆಯಲ್ಲಿ ಕರಗಿಹೋಗುತ್ತಿದೆ. ಮುಗ್ಗಲು ವಾಸನೆ ಎಲ್ಲೆಲ್ಲೂ ತುಂಬಿಕೊಂಡಿದೆ. ಹೊರಗಿನ ಮಬ್ಬುಗತ್ತಲೆ ನಮ್ಮ ಮನಸ್ಸನ್ನೂ ಆವರಿಸಿಕೊಂಡಿದೆ. 


ಓದು ಮಾತ್ರ ಎಲ್ಲವನ್ನೂ ಮರೆಯಿಸುವ ಶಕ್ತಿಯನ್ನು ಪಡೆದುಕೊಂಡಿದೆ ಎಂದೆನಿಸುತ್ತದೆ. ಕುಗ್ಗಿದ ಮನಸ್ಸನ್ನು ಸ್ವಲ್ಪವಾದರೂ ಚೇತೋಹಾರಿಯಾಗಿಸುತ್ತದೆ. ಪ್ರತಿನಿತ್ಯ ಮನೆಗೆ ಬರುವ ಆರು ದಿನಪತ್ರಿಕೆಗಳು ಮನಸ್ಸನ್ನು ಮುದುಡಿಸುತ್ತವೆ. ಒಂದಾದರೂ ಒಳ್ಳೆಯ ಸುದ್ದಿಯಿಲ್ಲದೇ ಕೇವಲ ರಾಜಕೀಯ ಹಗರಣಗಳಿಂದ ಕೂಡಿ ನಾವು ಎಂತಹ ದಿನಗಳಲ್ಲಿ ಬದುಕುತ್ತಿದ್ದೇವೆ. ಇದನ್ನು ಬದಲಾಯಿಸುವುದಾದರೂ ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ. 


ಬಹುಶಃ ಆಳುವವರು ಒಳ್ಳೆಯ ಪುಸ್ತಕಗಳನ್ನು ಓದದೇ ಇರುವುದರಿಂದ ಲೋಕದ ಪರಿಜ್ಞಾನವನ್ನು ಪಡೆದುಕೊಳ್ಳದೇ ಹೋದರು.ಸ್ವಾರ್ಥಿಗಳಾಗುತ್ತಾ ಹೋದರು. ಉಳಿದವರ ಬಗ್ಗೆ ಯೋಚಿಸದೇ ಕಲ್ಲುಮನಸ್ಸಿನವರಾಗಿ ಹೋದರು.  ಓದುವ ಹವ್ಯಾಸವಿರುವವರು ಬೇರೆಯವರ ಮನಸ್ಸನ್ನು . ಬದುಕನ್ನು ಅರ್ಥಮಾಡಿಕೊಳ್ಳಲು ಸಮರ್ಥರಿರುತ್ತಾರೆ. ಹಾಗಾಗಿಯೇ ನಾನು ನನ್ನ ವಿದ್ಯಾರ್ಥಿಗಳಿಗೆ ದಿನನಿತ್ಯ ಒಂದು ಮೂವತ್ತು ಪುಟಗಳನ್ನಾದರೂ ಓದುವ ಹವ್ಯಾಸವಿಟ್ಟುಕೊಳ್ಳಿ ಎಂದು ಹೇಳುತ್ತಿದ್ದೆ. ನಾನಂತೂ ಆ ಅಭ್ಯಾಸವನ್ನು ಇವತ್ತಿನವರೆಗೂ ಬಿಟ್ಟಿಲ್ಲ. 


ನಿವೃತ್ತನಾದರೂ ಸಮಯ ಕಳೆಯುವುದು ನನಗೆ ಸಮಸ್ಯೆಯಾಗಿಲ್ಲ. ಮನೆತುಂಬಾ ತುಂಬಿಕೊಂಡಿರುವ ಪುಸ್ತಕಗಳು ಮನಸ್ಸಿಗೆ ಖುಷಿಯನ್ನು ತಂದುಕೊಡುತ್ತಿವೆ. ಅವುಗಳ ಸಂಗದಲ್ಲಿ ಹೊತ್ತು ಹೋಗುತ್ತಿದೆ ನನಗೆ. ಓದುವುದರಲ್ಲಿಯೇ ಸಮಯದ ಪರಿಜ್ಞಾನವನ್ನು ಕಳೆದುಕೊಂಡ ನನ್ನನ್ನು ಹೊರಗೆ ಕವಿದ ಮಬ್ಬುಗತ್ತಲೆ ನಾಳಿನ ಬಗ್ಗೆ ಚಿಂತಿಸುವಂತೆ ಮಾಡುತ್ತಿವೆ. ನೆನೆದ ಪೈರನ್ನು ಉಳಿಸಲು ಹೆಣಗುತ್ತಿರುವ ರೈತನ ಬಗ್ಗೆ ಯೋಚಿಸುವಂತೆ ಮಾಡುತ್ತಿವೆ. ನಾಳೆ ಹೇಗೋ ಏನೋ ಎಂಬ ಭಯ ಕಾಡುತ್ತಿದೆ. ಮತ್ತೆ ಅಕಾಶ ತಿಳಿಯಾಗುವುದು ಯಾವಾಗ. ಮಳೆ ನಿಲ್ಲುವುದು ಯಾವಾಗ? ಒಂದೂ ಅರ್ಥವಾಗುತ್ತಿಲ್ಲ. 


ವಾರದ ಓದು" ಜೋಗಿಯವರ "ಜರಾಸಂಧ", ವಿಕಾಸ ಸ್ವರೂಪರ Q & A (slumdog millionaire) english ಕಾದಂಬರಿ ಓದಿದೆ. ಜತೆಗೆ ಡಿ.ಕೆ.ಚೌಟರ "ಮಿತ್ತಬೈಲು ಯಮುನಕ್ಕ" ಕಾದಂಬರಿಯನ್ನು ಮರುಓದಿದೆ. 

Wednesday, November 10, 2010

ಒಂದು ಪದ್ಯ ಮತ್ತು ಅನುವಾದ.

ಯಾವುದೋ ಒಂದು ಪುಸ್ತಕದಲ್ಲಿ ನನಗೆ ಈ ಪದ್ಯ ಸಿಕ್ಕಿತು. ಓದಿದಾಗ ನಾವು ಶಿಕ್ಷಕರು ಇದನ್ನು ಭಗವದ್ಗೀತೆಯಂತೆ ನಿತ್ಯ ಪಠನ ಮಾಡುತ್ತಿರಬೇಕು. ಮತ್ತು ತರಗತಿಗೆ ಹೋಗುವ ಮುನ್ನ ಇದರತ್ತ ಒಮ್ಮೆಯಾದರೂ ಕಣ್ಣು ಹಾಯಿಸುತ್ತಲೇ ಇರಬೇಕು ಎಂದೆನಿಸಿತು. ಅದನ್ನು ಚೆಂದವಾಗಿ ಪ್ರಿಂಟ್ ಮಾಡಿ ನನ್ನ ಟೇಬಲ್ ಮೇಲೆ ಇಟ್ಟುಕೊಂಡಿದ್ದೆ. ಪ್ರತಿಬಾರಿಯೂ ತರಗತಿಗೆ ಹೋಗುವ ಮುನ್ನ ಅದರತ್ತ ಕಣ್ಣು ಹಾಯಿಸಿ ಮತ್ತೆ ತರಗತಿಗೆ ಹೋಗುತ್ತಿದ್ದೆ. ಅದರ ಕನ್ನಡ ಅನುವಾದವನ್ನೂ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ಓದಿದ ನನ್ನ ಗೆಳೆಯರು ಅದರ ಒಂದು ಪ್ರತಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದನ್ನು ಇಲ್ಲಿ ಕೊಟ್ಟಿದ್ದೇನೆ.

My Prayer.


 O God, giver of the gift of Life,


Bless me this day as I go to teach,


I thank you for my career.


                 And for the health and enthusiasm


                 You have given me,


                 I thank you for my teaching skill,


                 And the joy I find in it.


I thank you for my students,


And friends, in whose company


Joys are doubled, sorrows soothe,


And weakness changed into strength.


             Help me to be cheerful to day,
        
             Kind and loving to my students,


             That they may be happy


             In my company.


ಕನ್ನಡ ಅನುವಾದ:


ಬದುಕಿನ ದಾನ ನೀಡಿದ ದೈವವೇ,
ಪಾಠ ಹೇಳ ಹೊರಟ ನನ್ನನ್ನು ಆಶೀರ್ವದಿಸು.
ಈ ವೃತ್ತಿಗಾಗಿ ನಾನು ಸದಾ ಋಣಿ.


              ನೀ ನೀಡಿದ ಉತ್ಸಾಹ ಮತ್ತು ಆರೋಗ್ಯಕ್ಕಾಗಿ,
                  ಪಾಠ ಹೇಳುವ ಕಲೆಗಾಗಿ
                                ಅದರಿಂದ ನಾ ಪಡೆವ ಆನಂದಕ್ಕಾಗಿ
                                                 ವಂದನೆಗಳು ನಿನಗೆ. 


ನನ್ನ ಸಜ್ಜನ ವಿದ್ಯಾರ್ಥಿಗಳಿಗಾಗಿ ಕೃತಜ್ಞತೆಗಳು ನಿನಗೆ.
      ಮತ್ತು ಗೆಳೆಯರಿಗಾಗಿ, ಯಾರ ಸಹವಾಸದಲ್ಲಿ
             ಸಂತೋಷ ಇಮ್ಮಡಿಯಾಗಿ, ಕಷ್ಟಗಳು ಕರಗಿ
                     ಬಲಹೀನತೆಯು ಬಲವಾಗಿ ಬದಲಾಗಿದೆಯೊ ಅದಕ್ಕಾಗಿ;.


ಇಂದು ನನ್ನ ಮಕ್ಕಳ ಮುಖದಲ್ಲಿ ನಗು ಮಾಸದಿರಲಿ.
     ಮಕ್ಕಳ ಮೇಲೆ ದಯೆ ಮತ್ತು ಪ್ರೀತಿ ಮಳೆಯಾಗಿ ಸುರಿಯಲಿ.
       ಮತ್ತು ಅವರು ನನ್ನೊಂದಿಗೆ ಸಂತೋಷದಿಂದಿರಲಿ.
          ಇದಿಷ್ಟನ್ನು ಮಾತ್ರ ಕರುಣಿಸು ತಂದೆಯೇ. 

ಇದನ್ನು ಬರೆದವರು ಯಾರು ಎನ್ನುವುದು ತಿಳಿದಿಲ್ಲ ಮತ್ತು ಈಗ ಇದನ್ನು ಯಾವ ಪುಸ್ತಕದಿಂದ ನಾನು ಬರೆದಿಟ್ಟುಕೊಂಡೆ ಎನ್ನುವುದೂ ನೆನಪಿಲ್ಲ.

ಕಳೆದವಾರ ಉಡುಪಿಅ ಗುರುರಾಜ ಸನೀಲ್ ಇವರು ಬರೆದ "ಹಾವು ನಾವು" ಪುಸ್ತಕ ಓದಿದೆ. ಜತೆಗೆ Mark Haddon ಬರೆದ curious incident of the dog in the night time"  ಓದಿದೆ. ಸಮಗ್ರ ಕುಂವೀ ಓದಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದೆನಿಸಿತು. ಸದ್ಯಕ್ಕೆ ನೂರೈವತ್ತು ಪುಟಗಳನ್ನು ಮಾತ್ರ ಓದಿದ್ದೇನೆ.

Wednesday, November 3, 2010

ಸಂತೆಯಲ್ಲಿ ನಿಂತ ಸಂತ.


ಕಳೆದ ವಾರ ಯೋಚಿಸಿದಂತೆ ಮೂಡಬಿದ್ರೆಯ ನುಡಿಸಿರಿಗೆ ಹೋಗಿದ್ದೆ. ದಾರಿಯುದ್ದಕ್ಕೂ ಮೋಡ, ಮಳೆಯ ವಾತಾವರಣ. ಘಟ್ಟ ಇಳಿದು ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡುತ್ತಿದ್ದಂತೆ ಸ್ವಲ್ಪ ಬಿಸಿಲು ಕಾಣಿಸಿಕೊಂಡಿತು. ಮೂಡಬಿದ್ರೆ ಹಿತವಾದ ಬಿಸಿಲಿನಿಂದ, ಜನರ ಓಡಾಟದಿಂದ ತುಂಬಿಕೊಂಡಿತ್ತು. ಚಿತ್ರ ಕಲಾ ಪ್ರದರ್ಶನ ನೋಡಿ ಮತ್ತೆ ಪುಸ್ತಕದಂಗಡಿಗೆ ನುಗ್ಗಿದೆ. ಎಲ್ಲಿಹೋದರೂ ಜನ ಜನ ಜನ.ಶಾಲಾ  ಮಕ್ಕಳು ಪ್ರತಿ ಮಳಿಗೆಯಲ್ಲಿ ತುಂಬಿಕೊಂಡಿದ್ದರು. ನನ್ನಲ್ಲಿ ಇಲ್ಲದ ಪುಸ್ತಕಗಳನ್ನು ಹುಡುಕುವುದೇ ಕಷ್ಟವಾಯಿತು. ಆಕೃತಿಯ ಮಳಿಗೆಯಲ್ಲಿ ಸಮಗ್ರ ಕುಂವೀ ಸಿಕ್ಕಾಗ ಸಂಭ್ರಮಗೊಂಡಿದ್ದೆ. ಇನ್ನು ಒಂದು ತಿಂಗಳು ಯೋಚನೆಯಿಲ್ಲ. ಏಕೆಂದರೆ ಸುಮಾರು ಸಾವಿರ ಪುಟಗಳಿಷ್ಟಿರುವ ಪುಸ್ತಕ ಒಂದು ತಿಂಗಳ ಓದಿಗೆ ಸಾಕಾಗುತ್ತದೆ. 


ಎಲ್ಲಾ ಮಳಿಗೆಯಲ್ಲೂ ಒಂದೇ ರೀತಿಯ ಪುಸ್ತಕಗಳಿದ್ದವು. ವಿಶ್ವೇಶ್ವರ ಭಟ್‍ರ ಪುಸ್ತಕಗಳು, ಛಂದ ಪ್ರಕಾಶನದ ಪುಸ್ತಕಗಳು ಹೆಚ್ಚಾಗಿ ಎಲ್ಲಾ ಮಳಿಗೆಯಲ್ಲೂ ಕಾಣಿಸಿಕೊಂಡಿದ್ದವು. ಮಂಗಳೂರಿನಲ್ಲಿ ನಡೆದ ಪುಸ್ತಕಮೇಳದಲ್ಲಿ ವ್ಯಾಪಾರವೇ ಇರಲಿಲ್ಲವಂತೆ. ಇಲ್ಲಿ ನುಡಿಸಿರಿಯಲ್ಲಿ ಚೆನ್ನಾಗಿಯೇ ವ್ಯಾಪಾರ ಆಗಿರಬೇಕು. 


ಮತ್ತೆ ಹೊರಗೆ ಬಂದ ನಾನು ಯಾರಿಗೂ ಕಾಣಿಸಿಕೊಳ್ಳದಂತೆ ಅಡಗಿಕೊಳ್ಳುವುದರಲ್ಲಿಯೇ ಮಗ್ನನಾದೆ. ಗುರುತಿನವರು ಯಾರಾದರೂ ಸಿಕ್ಕರೆ ಮತ್ತೆ ಮಾತು ಮಾತು ಮಾತು . ನನಗಿದು ಬೇಕಿರಲಿಲ್ಲ. ನಾನು ಹೋದದ್ದೇ ಸಂತೆಯಲ್ಲಿ ನಿಂತ ಸಂತನಂತೆ ಇರಲು. ಗದ್ದಲದ ನಡುವೆಯೂ ನಾನು ನಾನಾಗಿರಲು . ಕೊನೆಗೂ ಅಲ್ಲಿಯೇ ಇದ್ದು ಇಲ್ಲದವನಂತೆ ಇರಲು ನನ್ನಿಂದ ಸಾಧ್ಯವಾಯಿತು. 


ಒಂದು ರೀತಿಯ ಸಂಕೋಚ , ಮುಜುಗರ ಕಾಡುತ್ತಿರುತ್ತದೆ. ನಾಲ್ಕು ಜನರ ನಡುವೆ ಕಾಣಿಸಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಿವೃತ್ತನಾದ ಕಾರಣದಿಂದಲೋ ಏನೋ. ಎಲ್ಲಿಯೂ ಕಾಣಿಸಿಕೊಳ್ಳಲು ಆಸೆಯಾಗುವುದಿಲ್ಲ. ನನ್ನ ಸುತ್ತ ಇರುವ ಜನರಿಗೆಲ್ಲಾ ತಾವು ಏನಾದರೂ ಮಾಡಿ ಎಲ್ಲಿರ ಕಣ್ಣಿಗೂ ಕಾಣಿಸಿಕೊಳ್ಳುವಂತಿರಬೇಕು ಎಂಬ ಹಪಹಪಿಕೆ ಇದ್ದಂತೆ ಕಾಣುತ್ತದೆ. ಅಂತಹವರಿಗೆ ಚಲಾವಣೆಯಲ್ಲಿರುವ ಪ್ರತಿಷ್ಠಿತರ ಹಿಂದೆ ಮುಂದೆ ಇರಲು ಅವರು ಬಯಸುತ್ತಾರೆ ಶಿವಾಯ್ ನಮ್ಮಂತಹವರು, ಒಂದು ಕಾಲದಲ್ಲಿ ಆತ್ಮೀಯರು ಆಗಿದ್ದ ನಾವು ಕಾಣುವುದಿಲ್ಲ. ನಾನೂ ಅದಕ್ಕೆ ಈಗ ಹೊಂದಿಕೊಂಡಿದ್ದೇನೆ. ಅವರಿಗೂ ಮುಜಗರವಾಗದಂತೆ ಸೈಡ್‍ವಿಂಗ್‍ಗೆ ತೆರಳಿದ್ದೇನೆ. 


ಕಳೆದವಾರದ ಓದು:
                                              ಖುಶವಂತ್ ಸಿಂಗ್‍ನ obslute kushawant ಓದಿದೆ. ಕೇವಲ ೧೮೬ ಪುಟಗಳಷ್ಟಿರುವ ಪುಸ್ತಕ ಮುಗಿಸಲು ವಾರವೇ ಬೇಕಾಯ್ತು. ನಡನಡುವೆ ಏನೇನೋ ಕೆಲಸಗಳು. ಈಗ ಕುಂವೀ ಸಮಗ್ರ ಕೈಗೆತ್ತಿಕೊಂಡಿದ್ದೇನೆ. ಇನ್ನು ಈ ತಿಂಗಳು ಚಿಂತಿಲ್ಲ.    

Thursday, October 28, 2010

ಎಕ್ಲೊ ಚಲೋರೆ

ಎಕ್ಲೊ ಚಲೋರೆ




ಕವಿ ರವೀಂದ್ರನಾಥ ಠಾಗೋರರ ಪ್ರಸಿದ್ಧ ಹಾಡಿನ ಮೊದಲ ಸಾಲಿದು. ಪದ್ಯ ಪೂರ್ತಿ ಗೊತ್ತಿಲ್ಲದಿದ್ದರೂ ಈ ಸಾಲು ಮಾತ್ರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದು ಕೊಂಡು ಬಿಟ್ಟಿದೆ. ಏಕಾಂಗಿಯಾಗಿ ಹೋಗು. ಜತೆಯಲ್ಲಿ ಯಾರೂ ಇರುವುದಿಲ್ಲ ಎನ್ನುವ ಮಾತು ಸತ್ಯವೆನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. 


ನಾಳಿದ್ದು ಭಾನುವಾರ ಮೂಡಬಿದ್ರೆಗೆ ನುಡಿಸಿರಿ ಕಾರ್ಯಕ್ರಮಕ್ಕೆ  ಹೋಗಬೇಕೆಂದು ನಿರ್ಧರಿಸಿದ್ದೇನೆ. ಸುಮ್ಮನೆ ಅಲ್ಲಿ ಪುಸ್ತಕದ ಅಂಗಡಿಗೆ ಹೋಗಿ ನೋಡಿ ಬರಬೇಕು ಎಂಬಾಸೆ. ಜತೆಯಲ್ಲಿ ಯಾರೂ ಬರಲು ಸಿದ್ಧರಿಲ್ಲ. ಅಡಕೆ ಕೊಯ್ಲು, ಮಳೆ ,ಕೆಲಸ, ಆತಂಕ ಅವರಿಗೆ ಕಾಡುತ್ತಿದೆ. ನನ್ನ ಸ್ವಾರ್ಥಕ್ಕೆ ಅವರಿಗೆ ತೊಂದರೆ ಕೊಡಲು ಬಯಸದೇ ನಾನೊಬ್ಬನೇ ಹೊರಟಿದ್ದೇನೆ. ಅಲ್ಲೂ ಗೆಳೆಯರು ಸಿಕ್ಕಬಹುದು. ಸಿಗದೇ ಹೋಗಬಹುದು. ಒಂಟಿಯಾಗಿ ತಿರುಗುವ ಸುಖವೇ ಬೇರೆಯಾಗಿರುತ್ತದೆ. ಭಾನುವಾರವನ್ನು ನಿರೀಕ್ಷಿಸುತ್ತಿದ್ದೇನೆ.  ಮೊನ್ನೆ ಗೆಳೆಯ ಮುರಲೀಧರ ಉಪಾಧ್ಯರು ಮಂಗಳೂರಿನಲ್ಲಿ ನಡೆಯುತ್ತಿರುವ ಪುಸ್ತಕಮೇಳದಲ್ಲಿ ತಿರುಗುತ್ತಿರುವಾಗ ನನ್ನ ನೆನಪಾಯಿತು ಎಂದು ಸಂದೇಶ ಕಳುಹಿಸಿದ್ದರು. ಅವರಿಗೆ ಏನೆಂದು ಉತ್ತರಿಸಬಹುದಿತ್ತು. ಸುಮ್ಮನೆ ಯೋಚಿಸುತ್ತಾ ಕುಳಿತೆ. ಹಳ್ಳಿಯಲ್ಲಿ ಬದುಕುವುದರಿಂದ ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಮತ್ತೆ ಕೆಲವನ್ನು ಗಳಿಸುತ್ತೇವೆ. ಇಲ್ಲಿನ ಶಾಂತಿ, ನಿಧಾನಗತಿಯ ಬದುಕು ಅಲ್ಲಿ ಸಿಗಲು ಸಾಧ್ಯವಿಲ್ಲ. ಪುಸ್ತಕಮೇಳದಂತಹ ಮೇಳಗಳು ಇಲ್ಲಿ ನಡೆಯಲು ಸಾಧ್ಯವಿಲ್ಲ. ಇಲ್ಲಿ ಸರಿಯಾಗಿ ದಿನಪತ್ರಿಕೆಗಳೂ, ವಾರಪತ್ರಿಕೆಗಳೂ ಸಿಗುವುದಿಲ್ಲ. ಆದರೆ ಅವುಗಳ ಮೇಲಿದ್ದ ಮೋಹವನ್ನು ಬಿಟ್ಟುಬಿಟ್ಟಿದ್ದೇನೆ. ನಾನೂ ಈಗ ಪಕ್ಕಾ ಹಳ್ಳಿಗನಾಗಿದ್ದೇನೆ. 


ನಾನಾಗಿಯೇ ಆರಿಸಿಕೊಂಡ ಬದುಕು ಇದು. ಹಾಗಾಗಿ ಬೇರೆ ಯಾವ ಬೇಸರವೂ ಮನಸ್ಸಿನಲ್ಲಿ ಬೇರೂರದಂತೆ ಇದ್ದುದರಲ್ಲಿಯೇ ಉಳಿದ ಪಯಣವನ್ನು ಸಾಗಿಸಬೇಕು. ಏಕ್ಲೋ ಚಲೋರೆ. 


ಕಳೆದವಾರ ಹೆಚ್ಚಿನದನ್ನು ಓದಲಾಗಲಿಲ್ಲ. ಕಂಪ್ಯೂಟರ್ ನಲ್ಲಿ ಸಮಸ್ಯೆ ಬಂದಿತ್ತು. ಒಬ್ಬನೇ ಕುಳಿತು ಏನೇನೋ ಪ್ರಯೋಗ ಮಾಡಿ ಸರಿಮಾಡಿಕೊಂಡಿದ್ದೇನೆ. ನನ್ನ ಸಂಗ್ರಹದಲ್ಲಿದ್ದ ಸುಮಾರು ಮೂರುವರೆಸಾವಿರ ಸಂಗೀತದ ಫೈಲ್‍ಗಳು ನಾಪತ್ತೆಯಾಗಿದ್ದವು. ಅವುಗಳನ್ನು ಮತ್ತೆ ಸ್ಥಾಪಿಸಿಕೊಳ್ಳುವುದರಲ್ಲಿಯೇ ವಾರದ ನಾಲ್ಕುದಿನಗಳು ಕರಗಿದವು. ಈ ವಾರ  ಸಲ್ಮಾನ್ ರಶ್ದೀಯ Haroun and the sea of stories ಪುಸ್ತಕ ಮಾತ್ರ ಓದಲು ಸಾಧ್ಯವಾಯಿತು. ಈಗ ಕುಶವಂತ್ ಸಿಂಗ್‍ರವರ obsolute kushawant ಓದುತ್ತಿದ್ದೇನೆ.  

Friday, October 22, 2010

ಎಲ್ಲಿ ಹೋದರು ನನ್ನವರು ?





ಎಲ್ಲಿ ಹೋದರು ನನ್ನವರು?


ನನ್ನ ವೃತ್ತಿಜೀವನದ ಮೂವತ್ತೈದು ವರ್ಷಗಳಲ್ಲಿ ಕೊನೆಯ ಐದು ವರ್ಷ ಕಾಲೇಜಿನ ಪ್ರಾಂಶುಪಾಲನಾಗಿ ಕೆಲಸಮಾಡಿ ಅದೇ ಹುದ್ದೆಯಲ್ಲಿಯೇ ನಿವೃತ್ತನಾದೆ. ಸಾಧಾರಣವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥನಾದವನು ನಿವೃತ್ತಿಯಾದನಂತರ ತೀರಾ ಒಂಟಿಯಾಗಿರುತ್ತಾನೆ ಎಂದು ಕೇಳಿದ್ದೆ. ಅದು ನನ್ನ ಅನುಭವಕ್ಕೂ ಬಂದಿತು. ಈಗ ನನ್ನದೇ ಊರಿಗೆ ಮರಳಿ ಬಂದನಂತರ ನನ್ನ ಲೋಕ-ಸ್ನೇಹಲೋಕ ಇದ್ದಕ್ಕಿಂದಂತೆ ಕರಗಿ ಹೋಗಿದೆ. ನಿವೃತ್ತನಾದ ಹೊಸತರಲ್ಲಿ ಮತ್ತು ಊರಿಗೆ ಬಂದ ಪ್ರಾರಂಭದಲ್ಲಿ ಸ್ನೇಹಿತರಿಗೆ ಮೊಬೈಲಿನಲ್ಲಿ ಫೋನ್ ಮಾಡುತ್ತಿದ್ದೆ. ಆ ಕಡೆಯಿಂದ ರಿಂಗ್ ಕೇಳಿಸುತ್ತಿತ್ತು. ಕೆಲವು ಕ್ಷಣದ ನಂತರ ಸಂಪರ್ಕ ಕಡಿದು ಹಾಕಲಾಗಿದೆ ಎಂದು ಸಂದೇಶ ಬರುತ್ತಿತ್ತು. ಇವನೆಲ್ಲಿ ಶನಿ ಎಂದು ಅವರು ಅಂದುಕೊಳ್ಳುತ್ತಿದ್ದರೇನೋ. ಎರಡುಬಾರಿ ಇದು ಅನುಭವಕ್ಕೆ ಬಂದ ನಂತರ ಮತ್ತೆ ಯಾರಿಗೂ ಫೋನ್ ಮಾಡಲಿಲ್ಲ. 


ತಪ್ಪು ನನ್ನದೇ. ನಾನೇನೋ ನಿವೃತ್ತ. ಸಮಯವೆಲ್ಲ ನನ್ನದೇ. ಆದರೆ ನನ್ನ ಸ್ನೇಹಿತರಿಗೆ ಕೆಲಸವಿರುತ್ತದೆ. ಅವರಿಗೆ ಸಮಯ ಅಮೂಲ್ಯವಾಗಿರುತ್ತದೆ. ಹಾಗಾಗಿ ಯಾರಿಗೂ ತೊಂದರೆ ಕೊಡಬಾರದೆಂದು ಸುಮ್ಮನಾದೆ. ಇದರಿಂದ ಒಂದು ರೀತಿಯ ಕೀಳರಿಮೆ ಕೂಡ ನನ್ನಲ್ಲಿ ಬೆಳೆಯಲು ಪ್ರಾರಂಭವಾಯಿತು. ಯಾರಿಗಾದರೂ ಫೋನ್ ಮಾಡಬೇಕಾದರೆ ನೂರು ಬಾರಿ ಯೋಚಿಸಬೇಕಾಯಿತು. ಇದಕ್ಕಿಂತ ಮೌನವೇ ಲೇಸು ಎಂದು ಈಗ ಯಾರಿಗೂ ಫೋನ್ ಮಾಡುತ್ತಿಲ್ಲ. ಅವರ ವಿಷಯಗಳ ಬಗ್ಗೆ ಕುತೂಹಲ ತೋರಿಸುವುದಿಲ್ಲ. 


ಜನ ಏಕೆ ಹೀಗೆ ವರ್ತಿಸುತ್ತಾರೆ ಎನ್ನುವುದು ತಿಳಿಯುತ್ತಿಲ್ಲ. ನಾನೇನೂ ಅಂತಹ ದುಷ್ಟನಾಗಿರಲಿಲ್ಲ. ಸಂಪರ್ಕಕ್ಕೆ ಬಂದ ಎಲ್ಲರೊಡನೆಯೂ ಸರಿಯಾಗಿ ನಡೆದುಕೊಂಡಿದ್ದೆ. ವಿದ್ಯಾರ್ಥಿಗಳ ಜತೆಯಲ್ಲಿ, ಸಹೋದ್ಯೋಗಿಗಳ ಜತೆಯಲ್ಲಿ ಸರಿಯಾಗಿ ವರ್ತಿಸಿದ್ದೆ. ಯಾರೊಡನೆಯೂ ಜಗಳವನ್ನು ಮಾಡಿರಲಿಲ್ಲ. ನಗುತ್ತಾ, ನಗಿಸುತ್ತಾ ಇದ್ದೆ. ಆದರೂ.....?


ನಾನೀಗ ಕೊರಗುತ್ತಿಲ್ಲ. ವೃತ್ತಿಜೀವನದ ಉದ್ದಕ್ಕೂ ಸಂಗ್ರಹಿಸಿದ ಪುಸ್ತಕಗಳು ಇವೆ. ಸಂಗ್ರಹಿಸಿದ ಸಂಗೀತದ ಮುದ್ರಿಕೆಗಳಿವೆ. ಅವೆಲ್ಲವನ್ನೂ ನನ್ನ ಐಪಾಡ್‍ಗೆ ಹಾಕಿ, ದಿನವಿಡೀ ಕೇಳುತ್ತಾ, ಒಂದು ಕೈಯಲ್ಲಿ ಪುಸ್ತಕ, ಮತ್ತೊಂದರಲ್ಲಿ ಹೊಗೆಬತ್ತಿ ಹಿಡಿದುಕೊಂಡು ಲೋಕ ಮರೆಯುತ್ತಿದ್ದೇನೆ. ಮೂರು ಮತ್ತು ನಾಲ್ಕು ವರ್ಷದ ಇಬ್ಬರು ಮೊಮ್ಮಕ್ಕಳಿದ್ದಾರೆ-ಅಣ್ಣನ ಮೊಮ್ಮಕ್ಕಳು ನನ್ನವೂ ತಾನೇ. ಅವರು ಮನೆಯಿಡೀ ಓಡಾಡಿಕೊಂಡಿರುವಾಗ ಫ್ಯಾನ್ ಕೂಡ ಅಗತ್ಯವಿರುವುದಿಲ್ಲ. ಮನಸ್ಸಿಗೂ ತಂಪು.ಇಂತಹ ಸುಖದ ಸಮಯದಲ್ಲಿ  ಕೆಲವೊಮ್ಮೆ ಸ್ವರ್ಗಕ್ಕೆ ಬೆಂಕಿ ಹಚ್ಚಬೇಕೆನಿಸುತ್ತದೆ. ಆದರೂ ಮನದ ಮೂಲೆಯಲ್ಲಿ ಆಗಾಗ ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಮನುಷ್ಯರ ವರ್ತನೆಗಳು ಅಚ್ಚರಿಯನ್ನುಂಟುಮಾಡುತ್ತಿದೆ. 


ಅವಧಿ ಮುಗಿಯುತ್ತಾ ಬಂದಿದೆ ಎಂದೆನಿಸುತ್ತಿದೆ. ಸರದಿಯಲ್ಲಿ ನಿಂತಿದ್ದೇನೆ ಎಂದೂ ಭಾಸವಾಗುತ್ತಿದೆ. ಅದರ ಬಗ್ಗೆ ಭಯವೇನೂ ಕಾಡುತ್ತಿಲ್ಲ. ಹೊತ್ತು ಹೋಗುವ ಮುನ್ನ (ಬಸವಣ್ಣನವರ ಮಾತು) ಓದಿ ಮುಗಿಸಬೇಕು. ಓದಿನ ಕ್ಷಣದಲ್ಲಿ ಸಿಗುವ ಸುಖಕ್ಕಿಂತ ಮಿಗಿಲಾದ ಸುಖವನ್ನು ಕಳೆದುಕೊಂಡ ಸ್ನೇಹಿತರ ಮಾತಿನಲ್ಲಿ ನಾನು ಮತ್ತೆ ಪಡೆಯಲಾರನೇನೋ. 


ಕಳೆದವಾರ ಓದಿದ ಪುಸ್ತಕಗಳು: ಬಾನಯಾನ-ಕ್ಯಾಪ್ಟನ್ ಗೋಪಿನಾಥ್  ಮತ್ತು ಹೆಚ್.ಎಸ್.ವಿಯವರ ಅನಾತ್ಮ ಕಥನ. 

Thursday, October 14, 2010

ರಾಘವ-ಓದಿನ ಮನೆ: ಒಡೆದು ಹೋದ ಕನಸು.

"ರಾಘವ-ಓದಿನ ಮನೆ"- ಒಡೆದುಹೋದ ಕನಸು.


ನಾನು ನಿವೃತ್ತಿಯಾದ ನಂತರ ಊರಿಗೆ ಮರಳಲು ಸಿದ್ಧನಾಗುವಾಗ ನನ್ನೆಲ್ಲಾ ಪುಸ್ತಕಗಳನ್ನು ಊರಿಗೆ ತಂದು ಒಂದು ಮುಕ್ತ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿದ್ದೆ. ಆ ವೇಳೆಗೆ ನನ್ನಣ್ಣ ತೀರಿಹೋಗಿದ್ದರು. ಅವರಿಗೂ ಹೊಸ ಪುಸ್ತಕಗಳ ಹುಚ್ಚು ಇದ್ದಕಾರಣ ಅವರ ಹೆಸರಿನಲ್ಲಿಯೇ ಒಂದು ಊರವರಿಗಾಗಿ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿ "ರಾಘವ-ಓದಿನ ಮನೆ" ಎಂದು ನಾಮಕರಣವನ್ನೂ ಮಾಡಿದ್ದೆ. ನನ್ನ ಗೃಹಪ್ರವೇಶದ ದಿನ ಅದರ ಉದ್ಘಾಟನೆ ಮಾಡುವುದು ಎಂದೂ ನಿಶ್ಚಯವಾಗಿತ್ತು. ಅಣ್ಣ ಮನೆಯ ಅಂಗಳದಲ್ಲಿ ಒಂದು ಸಣ್ಣ ಕೊಠಡಿಯನ್ನು ಕಟ್ಟಿಕೊಂಡಿದ್ದರು. ಅವರ ದುರಾದೃಷ್ಟದಿಂದ ಅಲ್ಲಿ ಅವರು ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಕಾಲ ಅವರಿಗೆ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ನಾನು ಅದಕ್ಕೆ ಸುಣ್ಣ ಬಣ್ಣವನ್ನು ಹೊಡೆಯಿಸಿ, ವಿದ್ಯುಚ್ಛಕ್ತಿ ಸಂಪರ್ಕವನ್ನು ಸರಿಪಡಿಸಿ, ಹಳೆಯ ಮನೆಯ ಎರಡು ದೊಡ್ಡ ಬೀರುಗಳನ್ನು ತಂದು ಅದರ ತುಂಬಾ ಪುಸ್ತಕಗಳನ್ನು ತುಂಬಿಸಿದ್ದೆ. ನನ್ನ ಬಳಿಯಲ್ಲಿ ಹಿರಿಯ ಲೇಖಕರ (ಅನಕೃ, ತರಾಸು ಮೊದಲಾದವರ) ಪುಸ್ತಕಗಳು ಇಲ್ಲದಿದ್ದರೂ , ಹೊಸ ಲೇಖಕರ(ಕಾಯ್ಕಿಣಿ, ರವಿ ಬೆಳೆಗೆರೆ, ಜೋಗಿ, ಛಂದ ಪ್ರಕಟನೆಗಳು) ಪುಸ್ತಕಗಳು ತುಂಬಾ ಇದ್ದವು. 
ಗೃಹ ಪ್ರವೇಶದ ದಿನ ನಾನು ಬಹಳ ವಾಗಿ ಮೆಚ್ಚಿಕೊಳ್ಳುವ ಹಿರಿಯರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಂದ ಅದರ ಉದ್ಘಾಟನೆಯನ್ನೂ ಮಾಡಿದೆ ಮತ್ತು ಊರವರಿಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಆಹ್ವಾನವನ್ನೂ ನೀಡಿದೆ. ಸದಸ್ಯ ಶುಲ್ಕವೆಂದು ಹಣ ವಸೂಲಿಯಿರಲಿಲ್ಲ. ತೆಗೆದುಕೊಂಡು ಹೋದ ಪುಸ್ತಕಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದರೆ ಸಾಕು ಎಂದು ಹೇಳಿದ್ದೆ. ಸದಸ್ಯರ ಪರಿಚಯವನ್ನು ತಿಳಿಸುವ ಒಂದು ಪರಿಚಯ ಪತ್ರವನ್ನು ಅಚ್ಚುಮಾಡಿಸಿ ಇಟ್ಟುಕೊಂಡಿದ್ದೆ. ನನ್ನ ಗ್ರಹಚಾರವೆನ್ನುವಂತೆ ಅದನ್ನು ಕೇಳಿಕೊಂಡು ಯಾರೂ ಬರಲಿಲ್ಲ. ಈಗ ಎರಡು ವರ್ಷಗಳಾಗುತ್ತಾ ಬಂದಿದೆ.  ಪ್ರತಿವಾರವೂ ಎನ್ನುವಂತೆ ನನ್ನ ಸಂಬಂಧಿಕರಿಬ್ಬರು ಮಾತ್ರ ನಿಯಮಿತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿರುತ್ತಾರೆ. ಇಬ್ಬರಿಗೂ ಪ್ರಾಯ ಎಪ್ಪತ್ತೆರೆಡು ಆಗಿದೆ. ಪುಸ್ತಕದ ಹುಚ್ಚು ಅತಿಯಾಗಿದೆ ಅವರಿಗೆ. ಹೊಸಪುಸ್ತಕಗಳನ್ನು ಓದುವುದೇ ಸುಖವೆಂದು ಖುಷಿಯಲ್ಲಿದ್ದಾರೆ. ನಿನ್ನಿಂದಾಗಿ ಈ ಲೇಖಕರನ್ನು ಓದಿದಂತಾಯಿತು ಎಂದು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಇವರು ಬಿಟ್ಟರೆ ಮೂರನೆಯವರು ಕಾಣುತ್ತಿಲ್ಲ. 

ಏಕೆ ಹೀಗೆ? ಓದುಗರು ಎಲ್ಲರೂ ಎಲ್ಲಿ ಹೋದರು. ಅರ್ಥವಾಗುತ್ತಿಲ್ಲ. ನನ್ನೂರು ಸಂಸ್ಕೃತಿ ಸಂಪನ್ನವಾದ ಊರು ಎಂದೇ ಪ್ರಸಿದ್ಧವಾಗಿತ್ತು. ಪುಸ್ತಕದ ಹುಚ್ಚು ಇರುವವರು ತುಂಬಾ ಜನರಿದ್ದರು. ಈಗ ಯಾರಿಗೂ ಪುಸ್ತಕಗಳು ಬೇಡವಾದವೆ? ಒಂದೂ ತಿಳಿಯುತ್ತಿಲ್ಲ. ಹೊಸ ಹೊಸ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದೇನೆ. ನಾವು ಮೂರು ಜನ ಮಾತ್ರ ಓದುತ್ತಿದ್ದೇವೆ. ಈಗ ನನಗೆ ಸಮಸ್ಯೆ ಬಂದಿರುವುದು ನನ್ನ ಬಳಿ ಇರುವ ಪುಸ್ತಕಗಳ ರಾಶಿಯನ್ನು ಏನು ಮಾಡುವುದು ಎನ್ನುವುದು. ಹಾಗಾಗಿ ನಿಧಾನವಾಗಿ ಆಸಕ್ತರಿಗೆ ನನ್ನ ಬಳಿ ಇರುವ  ಮತ್ತು ಓದಿಯಾದ ಪುಸ್ತಕಗಳನ್ನು ನಿರ್ಮೋಹಿಯಾಗಿ ದಾನ ಮಾಡುತ್ತಿದ್ದೇನೆ. ಇನ್ನೈದು ವರ್ಷಗಳಲ್ಲಿ ನನ್ನ ಬಳಿಯಿರುವ ಪುಸ್ತಕಗಳನ್ನೆಲ್ಲವನ್ನೂ ಹೀಗೆ ಕರಗಿಸಬೇಕು ಎಂದು ನಿರ್ಧರಿಸಿದ್ದೇನೆ.  

ನನ್ನ ಓದಿನ ಮನೆಯ ಕನಸು ಒಡೆದುಹೋಗಿದೆ. ಕಾಲ ಸರಿಯುತ್ತಿದೆ. ಪ್ರಾಯವಾಗುತ್ತಿದೆ. ಪುಸ್ತಕಗಳನ್ನು ಆದಷ್ಟು ಬೇಗ ಓದಿ ಕರಗಿಸಬೇಕು.  

Saturday, October 9, 2010

ಬದಲಾದ ಗತಿ

*ನನ್ನ ಹಿರಿ ಕಿರಿ ಗೆಳೆಯರು ಬ್ಲಾಗ್‍ನ್ನು ಪ್ರಾರಂಭಿಸಿದನ್ನು ನೋಡಿ ನಾನೂ ಈ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಕವಿ ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದು ಅಲ್ಲ.ಪ್ರಾರಂಭವೇನೋ ಮಾಡಿದ್ದೇನೆ. ಆದರೆ ಬರೆಯುವುದು ಏನನ್ನು? ಈ ಬೇತಾಳ ಬೆನ್ನ ಮೇಲೆ ಏರಿ ಕುಳಿತಿದ್ದಾನೆ. 




*ಬ್ಲಾಗ್ ಎಂದರೆ ದಿನಚರಿ ತಾನೆ? ಅಥವಾ ನಾನು ಹಾಗೆ ತಿಳಿದುಕೊಂಡಿದ್ದೇನೆ. ಖಾಸಗಿಯಾದ ವಿಷಯಗಳನ್ನು ಬೇರೆಯವರೆಲ್ಲರೂ ಓದುವಂತೆ ಇದು ಸಹಾಯ ಮಾಡುತ್ತದೆ. ಆರವತ್ತು ದಾಟಿದ ನನ್ನ ಮನಸ್ಸಿನ ನೆನಪುಗಳು ಪೂರ್ಣ ಅಳಿದು ಹೋಗುವ ಮುನ್ನ ದಾಖಲಿಸಬೇಕು ಎಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.




ಬದಲಾದ ಗತಿ




ಸುಮಾರು ಮೂವತ್ತೈದು ವರ್ಷಗಳ ಕಾಲ ಕನ್ನಡ ಪಾಠವನ್ನು ಹೇಳಿಕೊಡುವ ಮಾಸ್ಟ್ರಾಗಿದ್ದೆ. ವೃತ್ತಿಯ ಕೊನೆಯ ಐದು ವರುಷ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡಿ ನಿವೃತ್ತನಾದೆ. ಕೊನೆಕೊನೆಯಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ನನಗೆ ಬದುಕನ್ನು , ವೃತ್ತಿಯನ್ನು ನೀಡಿದ್ದ ನನ್ನ ದಕ್ಷಿಣ ಕನ್ನಡ ನಿಧಾನವಾಗಿ ಬೇಸರವನ್ನುಂಟುಮಾಡಲು ಪ್ರಾರಂಭಿಸಿತ್ತ್ತು. ಈ ಊರೇ ಬೇಡ. ಹುಟ್ಟೂರಿಗೆ ಹೋಗೋಣವೆಂದೆನಿಸಲು ಅನ್ನಿಸಿತ್ತು. ಈ ಯೋಚನೆ ಆಗಲೇ ಬಂದದ್ದಲ್ಲ. ನಿವೃತ್ತನಾಗಲು ಮೂರು ವರ್ಷವಿದೆ ಎನ್ನುವಾಗಲೇ ಈ ಯೋಚನೆ ಬರಲು ಪ್ರಾರಂಭಿಸಿತ್ತು.  ಹುಟ್ಟೂರಿನ ಸೆಳೆತ ಬಲವಾಗುವುದಕ್ಕೆ ಇನ್ನೂ ಎರಡು ಕಾರಣಗಳಿವೆ.


೨೦೦೪ರಲ್ಲಿ ನನ್ನ ತಾಯಿ ತೀರಿಹೋದಾಗ ಅವರ ಅಪರಕರ್ಮವನ್ನು ಮಾಡಲು ಊರಿಗೆ ಬಂದಿದ್ದೆ. ಸಂಪ್ರದಾಯದಂತೆ ಮೀಸೆ ಮತ್ತು ತಲೆಯ ಕೂದಲುಗಳನ್ನು ತೆಗೆಯಿಸಿಕೊಂಡು ಯಾರಿಗೂ ಗುರುತೇ ಸಿಗದಂತೆ ರೂಪ ಬದಲಾಯಿಸಿಕೊಂಡಿದ್ದೆ. ಒಂದು ದಿನ ನನ್ನಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ನನ್ನ ಸಹಪಾಠಿಯಾಗಿದ್ದ ದಿ.ರವೀಂದ್ರ ಶೆಟ್ಟಿಯ ತಮ್ಮ      ಶೆಟ್ಟಿ ಸಿಕ್ಕಿದ್ದ. ನನ್ನ ಮುಖವನ್ನೇ ನೋಡುತ್ತಾ ’ಏಯ್ ,ನಾಗರಾಜ ಅಲ್ವೇನೋ !, ಏನಾಯಿತೋ’ ಎಂದು ವಿಚಾರಿಸಿದ.  ವಿಷಯ ತಿಳಿದಾಗ ಸಂತಾಪ ವ್ಯಕ್ತಪಡಿಸಿ, ನನ್ನ ಕೈ ಯನ್ನು ಬಲವಾಗಿ ಹಿಡಿದು ’ ಇನ್ನು ಎಷ್ಟು ವರುಷ ಸರ್ವೀಸ್ ಇದೆ’ ಎಂದು ಕೇಳಿದ. ಮೂರು ವರ್ಷವೆಂದು ನಾನು ಹೇಳಿದಾಗ ಹಿಡಿದ ಕೈ ಯನ್ನು ಬಿಡದೇ, ಇನ್ನೂ ಬಿಗಿಯಾಗಿ ಹಿಡಿದುಕೊಂಡು ’ನಾಗರಾಜಾ, ನಿವೃತ್ತನಾದ ಮೇಲೆ ಊರಿಗೇ ಬಾ. ಒಟ್ಟಿಗೇ ಸಾಯೋಣ’ ಎಂದು ಹೇಳಿದ. ನಾನು ನಕ್ಕು ಹಾಗೇ ಆಗಲಿ ಎಂದು ಹೇಳಿದೆ. ಆಗ ಅವನ ಮಾತು ನನ್ನ ಮನಸ್ಸಿನ ಆಳದಲ್ಲಿ ಇಳಿದಿರಲಿಲ್ಲ. ದಿನ ಕಳೆದಂತೆ ಅವನಾಡಿದ ಮಾತಿನರ್ಥ ಸ್ವಷ್ಟವಾಗಲು ಪ್ರಾರಂಭವಾಯಿತು. ಗೆಳೆಯರೆಂದರೆ ಹೀಗೆ ಇರುತ್ತಾರೆ. ಒಟ್ಟಿಗೆ ಸಾಯಲು ಕಾಯುತ್ತಿರುತ್ತಾರೆ. ಸಾಯಬೇಕಾದರೂ ಸರಿಯೇ. ಸರಿಯಾದ ಸ್ಠಳದಲ್ಲಿಯೇ ಸಾಯಬೇಕು. ಗೆಳೆಯರು ಇದ್ದ ಊರಿನಲ್ಲಿ, ಬಂಧುಗಳು ಇರುವ ಊರಿನಲ್ಲಿ. ಹುಟ್ಟೂರಿನಲ್ಲಿ.  ಈಗ ನಾನಿರುವ ಊರು ನನ್ನದಲ್ಲ. ಅಲ್ಲದೆ ನನ್ನ ಬರವಿಗೆ ಕಾಯುತ್ತಿರುವವರು ಹುಟ್ಟೂರಿನಲ್ಲಿದ್ದಾರೆ. ಆದ್ದರಿಂದ ಮತ್ತೆ ಅಲ್ಲಿಗೆ ಹೋಗಬೇಕು ಎಂದು ಬಲವಾಗಿ ಅನ್ನಿಸಲು ಪ್ರಾರಂಭಿಸಿತು. 


ನಾನಿದ್ದ ಊರಿನ ಬಗ್ಗೆ ಮೋಹ ಕಡಮೆಯಾಗಲು ಮತ್ತು ಮರಳಿ ಮಣ್ಣಿಗೆ ತೆರಳುವ ನನ್ನ ನಿರ್ಧಾರ ಗಟ್ಟಿಯಾಗಲು ಇನ್ನೂ ಒಂದು ಘಟನೆ ನಡೆಯಿತು. ನಾನು ನಿವೃತ್ತನಾಗಲು ಎಂಟು ತಿಂಗಳು ಇತ್ತು. ನನ್ನ ಉತ್ತರಾಧಿಕಾರಿಯಾಗಿ ನಿಯುಕ್ತರಾಗಿದ್ದ ನನ್ನ ಸಹೋದ್ಯೋಗಿಯೊಬ್ಬರು ದಿನನಿತ್ಯ ನಡೆದಾಡುವ ರಸ್ತೆಯಲ್ಲಿ ನಿತ್ಯದಂತೆ ನಡೆದುಕೊಂಡು ಹೋಗುತ್ತಿರುವಾಗ ಅವರಿಗೆ ತಲೆ ಸುತ್ತು ಬಂದು ರಸ್ತೆಯಲ್ಲಿಯೇ ಬಿದ್ದು ಬಿಟ್ಟರು. ಸ್ಮೃತಿ ಕಳೆದುಕೊಂಡರು. ಆ ರಸ್ತೆ ಅಪರಿಚಿತವಾದುದೇನೂ ಅಲ್ಲ. ಸುಮಾರು ಹದಿನೆಂಟು ವರುಷಗಳಿಂದ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತಿರುತ್ತೇವೆ. ಅಲ್ಲಿ ಅಕ್ಕಪಕ್ಕದಲ್ಲಿರುವ ಅಂಗಡಿಗಳವರಿಗೆ ನಾವು ಯಾರು ಎನ್ನುವುದು ಸರಿಯಾಗಿ ತಿಳಿದಿದೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಎಂದು ಹತ್ತಿರಕ್ಕೆ ಬರಲಿಲ್ಲ. ಒಂದು ಅಂಗಡಿಯವರು ಹತ್ತಿರಕ್ಕೆ ಬಂದು ಸ್ಮೃತಿ ಕಳೆದುಕೊಂಡು ಬಿದ್ದಿದ್ದ ನನ್ನ ಗೆಳೆಯರ ಕೈಯಲ್ಲಿದ್ದ ಚೀಲವನ್ನು ಮಾತ್ರ ಸುರಕ್ಷಿತವಾಗಿ ತೆಗೆದಿರಿಸಲು ಅದನ್ನು ಎತ್ತಿಕೊಂಡು ಅವರ ಅಂಗಡಿಗೆ ಹೋದರು. ಶಿವಾಯ್ ಅವರ ಸಹಾಯಕ್ಕೆ ಯಾರೂ ಹತ್ತಿರಕ್ಕೆ ಸುಳಿಯಲಿಲ್ಲ. ಆ ವೇಳೆಯಲ್ಲಿ ಆಪದ್ಭಾಂಧವನಂತೆ ಸಹಾಯಕ್ಕೆ ಬಂದವರು ಒಬ್ಬರು ಸಾಮಾನ್ಯ ಜನವೆಂದು ನಾವು ಗುರುತಿಸುವ ಗ್ಯಾರೇಜಿನಲ್ಲಿ ಕೆಲಸ ಮಾಡುವ ಒಬ್ಬ ಸಹೃದಯಿ. ಅವರು ರಿಕ್ಷಾವನ್ನು ನಿಲ್ಲಿಸಿ ಆಸ್ಪತ್ರೆಗೆ ಅವರನ್ನು ಸೇರಿಸಿದರು. ವಿಷಯ ತಿಳಿದು ನಾವೆಲ್ಲ ಆಸ್ಪತ್ರೆಗೆ ಧಾವಿಸಿದಾಗ ಆ ವ್ಯಕ್ತಿ ಇನ್ನೂ ಅಲ್ಲಿಯೇ ಇದ್ದರು. ಅವರು ನಮ್ಮನ್ನು ನೋಡಿ ’ ಎಂತಹ ಊರು ಸ್ವಾಮಿ ಇದು. ಮಾಸ್ಟ್ರು ಎಚ್ಚರ ತಪ್ಪಿ ಬಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಗುರುತೇ ಇಲ್ಲದವರ ಹಾಗೇ ಎಲ್ಲರೂ ನಡೆದು ಕೊಂಡರು. ಇಂತಹ ಊರಿನಲ್ಲಿ ಬದುಕುವುದು ಕಷ್ಟ’ ಎಂದು ಉದ್ಗರಿಸಿದರು. ಕೇಳಿದ ನಮಗೂ ಇದು ಹೃದಯಹೀನ ಊರು, ಆತ್ಮವಿಲ್ಲದ ಊರು ಎಂದೆನಿಸಿತು. ಅಲ್ಲಿದ್ದ ಅಂಗಡಿಯವರಿಗೆ ನಾವು ಅಪರಿಚಿತರೇನೂ ಅಲ್ಲ. ರಸ್ತೆ ದಾಟಿದರೆ ನಮ್ಮ ಕಾಲೇಜು ಇದೆ. ಅಲ್ಲಿ ಸಾಲಾಗಿ ಇರುವ ಅಂಗಡಿಗಳಲ್ಲಿ ನಾವು ಎಷ್ಟೋ ಬಾರಿ ವ್ಯಾಪಾರವನ್ನು ಮಾಡಿದ್ದೇವೆ. ಹೀಗೆ ಇದ್ದೂ ಇಂತಹ ಪರಿಸ್ಠಿತಿ ಬಂದಿತೆಂದರೆ ಈ ಊರೇ ಬೇಡವೆಂಬ ಹೇವರಿಕೆ ಬಲವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿತು.


ಅದಕ್ಕಾಗಿ ನೆಮ್ಮದಿಯನ್ನು ಅರಸಿಕೊಂಡು , ಸಾಯಲು ಒಳ್ಳೆಯ ಸ್ಠಳವೆಂದು , ಗೆಳೆಯರೊಡನೆ ನಗೆಯಾಡುತ್ತಾ ಕೊನೆಯ ದಿನಗಳನ್ನು ಕಳೆಯಲು ಹುಟ್ಟೂರಿಗೆ ಬಂದಿದ್ದೇನೆ. ನಿಜವಾಗಲೂ ನೆಮ್ಮದಿಯಿಂದ ಇದ್ದೇನೆ.