ತಕಿಟ ತಕಿಟ ಧೋಂ

Thursday, October 28, 2010

ಎಕ್ಲೊ ಚಲೋರೆ

ಎಕ್ಲೊ ಚಲೋರೆ




ಕವಿ ರವೀಂದ್ರನಾಥ ಠಾಗೋರರ ಪ್ರಸಿದ್ಧ ಹಾಡಿನ ಮೊದಲ ಸಾಲಿದು. ಪದ್ಯ ಪೂರ್ತಿ ಗೊತ್ತಿಲ್ಲದಿದ್ದರೂ ಈ ಸಾಲು ಮಾತ್ರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದು ಕೊಂಡು ಬಿಟ್ಟಿದೆ. ಏಕಾಂಗಿಯಾಗಿ ಹೋಗು. ಜತೆಯಲ್ಲಿ ಯಾರೂ ಇರುವುದಿಲ್ಲ ಎನ್ನುವ ಮಾತು ಸತ್ಯವೆನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. 


ನಾಳಿದ್ದು ಭಾನುವಾರ ಮೂಡಬಿದ್ರೆಗೆ ನುಡಿಸಿರಿ ಕಾರ್ಯಕ್ರಮಕ್ಕೆ  ಹೋಗಬೇಕೆಂದು ನಿರ್ಧರಿಸಿದ್ದೇನೆ. ಸುಮ್ಮನೆ ಅಲ್ಲಿ ಪುಸ್ತಕದ ಅಂಗಡಿಗೆ ಹೋಗಿ ನೋಡಿ ಬರಬೇಕು ಎಂಬಾಸೆ. ಜತೆಯಲ್ಲಿ ಯಾರೂ ಬರಲು ಸಿದ್ಧರಿಲ್ಲ. ಅಡಕೆ ಕೊಯ್ಲು, ಮಳೆ ,ಕೆಲಸ, ಆತಂಕ ಅವರಿಗೆ ಕಾಡುತ್ತಿದೆ. ನನ್ನ ಸ್ವಾರ್ಥಕ್ಕೆ ಅವರಿಗೆ ತೊಂದರೆ ಕೊಡಲು ಬಯಸದೇ ನಾನೊಬ್ಬನೇ ಹೊರಟಿದ್ದೇನೆ. ಅಲ್ಲೂ ಗೆಳೆಯರು ಸಿಕ್ಕಬಹುದು. ಸಿಗದೇ ಹೋಗಬಹುದು. ಒಂಟಿಯಾಗಿ ತಿರುಗುವ ಸುಖವೇ ಬೇರೆಯಾಗಿರುತ್ತದೆ. ಭಾನುವಾರವನ್ನು ನಿರೀಕ್ಷಿಸುತ್ತಿದ್ದೇನೆ.  ಮೊನ್ನೆ ಗೆಳೆಯ ಮುರಲೀಧರ ಉಪಾಧ್ಯರು ಮಂಗಳೂರಿನಲ್ಲಿ ನಡೆಯುತ್ತಿರುವ ಪುಸ್ತಕಮೇಳದಲ್ಲಿ ತಿರುಗುತ್ತಿರುವಾಗ ನನ್ನ ನೆನಪಾಯಿತು ಎಂದು ಸಂದೇಶ ಕಳುಹಿಸಿದ್ದರು. ಅವರಿಗೆ ಏನೆಂದು ಉತ್ತರಿಸಬಹುದಿತ್ತು. ಸುಮ್ಮನೆ ಯೋಚಿಸುತ್ತಾ ಕುಳಿತೆ. ಹಳ್ಳಿಯಲ್ಲಿ ಬದುಕುವುದರಿಂದ ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಮತ್ತೆ ಕೆಲವನ್ನು ಗಳಿಸುತ್ತೇವೆ. ಇಲ್ಲಿನ ಶಾಂತಿ, ನಿಧಾನಗತಿಯ ಬದುಕು ಅಲ್ಲಿ ಸಿಗಲು ಸಾಧ್ಯವಿಲ್ಲ. ಪುಸ್ತಕಮೇಳದಂತಹ ಮೇಳಗಳು ಇಲ್ಲಿ ನಡೆಯಲು ಸಾಧ್ಯವಿಲ್ಲ. ಇಲ್ಲಿ ಸರಿಯಾಗಿ ದಿನಪತ್ರಿಕೆಗಳೂ, ವಾರಪತ್ರಿಕೆಗಳೂ ಸಿಗುವುದಿಲ್ಲ. ಆದರೆ ಅವುಗಳ ಮೇಲಿದ್ದ ಮೋಹವನ್ನು ಬಿಟ್ಟುಬಿಟ್ಟಿದ್ದೇನೆ. ನಾನೂ ಈಗ ಪಕ್ಕಾ ಹಳ್ಳಿಗನಾಗಿದ್ದೇನೆ. 


ನಾನಾಗಿಯೇ ಆರಿಸಿಕೊಂಡ ಬದುಕು ಇದು. ಹಾಗಾಗಿ ಬೇರೆ ಯಾವ ಬೇಸರವೂ ಮನಸ್ಸಿನಲ್ಲಿ ಬೇರೂರದಂತೆ ಇದ್ದುದರಲ್ಲಿಯೇ ಉಳಿದ ಪಯಣವನ್ನು ಸಾಗಿಸಬೇಕು. ಏಕ್ಲೋ ಚಲೋರೆ. 


ಕಳೆದವಾರ ಹೆಚ್ಚಿನದನ್ನು ಓದಲಾಗಲಿಲ್ಲ. ಕಂಪ್ಯೂಟರ್ ನಲ್ಲಿ ಸಮಸ್ಯೆ ಬಂದಿತ್ತು. ಒಬ್ಬನೇ ಕುಳಿತು ಏನೇನೋ ಪ್ರಯೋಗ ಮಾಡಿ ಸರಿಮಾಡಿಕೊಂಡಿದ್ದೇನೆ. ನನ್ನ ಸಂಗ್ರಹದಲ್ಲಿದ್ದ ಸುಮಾರು ಮೂರುವರೆಸಾವಿರ ಸಂಗೀತದ ಫೈಲ್‍ಗಳು ನಾಪತ್ತೆಯಾಗಿದ್ದವು. ಅವುಗಳನ್ನು ಮತ್ತೆ ಸ್ಥಾಪಿಸಿಕೊಳ್ಳುವುದರಲ್ಲಿಯೇ ವಾರದ ನಾಲ್ಕುದಿನಗಳು ಕರಗಿದವು. ಈ ವಾರ  ಸಲ್ಮಾನ್ ರಶ್ದೀಯ Haroun and the sea of stories ಪುಸ್ತಕ ಮಾತ್ರ ಓದಲು ಸಾಧ್ಯವಾಯಿತು. ಈಗ ಕುಶವಂತ್ ಸಿಂಗ್‍ರವರ obsolute kushawant ಓದುತ್ತಿದ್ದೇನೆ.  

Friday, October 22, 2010

ಎಲ್ಲಿ ಹೋದರು ನನ್ನವರು ?





ಎಲ್ಲಿ ಹೋದರು ನನ್ನವರು?


ನನ್ನ ವೃತ್ತಿಜೀವನದ ಮೂವತ್ತೈದು ವರ್ಷಗಳಲ್ಲಿ ಕೊನೆಯ ಐದು ವರ್ಷ ಕಾಲೇಜಿನ ಪ್ರಾಂಶುಪಾಲನಾಗಿ ಕೆಲಸಮಾಡಿ ಅದೇ ಹುದ್ದೆಯಲ್ಲಿಯೇ ನಿವೃತ್ತನಾದೆ. ಸಾಧಾರಣವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥನಾದವನು ನಿವೃತ್ತಿಯಾದನಂತರ ತೀರಾ ಒಂಟಿಯಾಗಿರುತ್ತಾನೆ ಎಂದು ಕೇಳಿದ್ದೆ. ಅದು ನನ್ನ ಅನುಭವಕ್ಕೂ ಬಂದಿತು. ಈಗ ನನ್ನದೇ ಊರಿಗೆ ಮರಳಿ ಬಂದನಂತರ ನನ್ನ ಲೋಕ-ಸ್ನೇಹಲೋಕ ಇದ್ದಕ್ಕಿಂದಂತೆ ಕರಗಿ ಹೋಗಿದೆ. ನಿವೃತ್ತನಾದ ಹೊಸತರಲ್ಲಿ ಮತ್ತು ಊರಿಗೆ ಬಂದ ಪ್ರಾರಂಭದಲ್ಲಿ ಸ್ನೇಹಿತರಿಗೆ ಮೊಬೈಲಿನಲ್ಲಿ ಫೋನ್ ಮಾಡುತ್ತಿದ್ದೆ. ಆ ಕಡೆಯಿಂದ ರಿಂಗ್ ಕೇಳಿಸುತ್ತಿತ್ತು. ಕೆಲವು ಕ್ಷಣದ ನಂತರ ಸಂಪರ್ಕ ಕಡಿದು ಹಾಕಲಾಗಿದೆ ಎಂದು ಸಂದೇಶ ಬರುತ್ತಿತ್ತು. ಇವನೆಲ್ಲಿ ಶನಿ ಎಂದು ಅವರು ಅಂದುಕೊಳ್ಳುತ್ತಿದ್ದರೇನೋ. ಎರಡುಬಾರಿ ಇದು ಅನುಭವಕ್ಕೆ ಬಂದ ನಂತರ ಮತ್ತೆ ಯಾರಿಗೂ ಫೋನ್ ಮಾಡಲಿಲ್ಲ. 


ತಪ್ಪು ನನ್ನದೇ. ನಾನೇನೋ ನಿವೃತ್ತ. ಸಮಯವೆಲ್ಲ ನನ್ನದೇ. ಆದರೆ ನನ್ನ ಸ್ನೇಹಿತರಿಗೆ ಕೆಲಸವಿರುತ್ತದೆ. ಅವರಿಗೆ ಸಮಯ ಅಮೂಲ್ಯವಾಗಿರುತ್ತದೆ. ಹಾಗಾಗಿ ಯಾರಿಗೂ ತೊಂದರೆ ಕೊಡಬಾರದೆಂದು ಸುಮ್ಮನಾದೆ. ಇದರಿಂದ ಒಂದು ರೀತಿಯ ಕೀಳರಿಮೆ ಕೂಡ ನನ್ನಲ್ಲಿ ಬೆಳೆಯಲು ಪ್ರಾರಂಭವಾಯಿತು. ಯಾರಿಗಾದರೂ ಫೋನ್ ಮಾಡಬೇಕಾದರೆ ನೂರು ಬಾರಿ ಯೋಚಿಸಬೇಕಾಯಿತು. ಇದಕ್ಕಿಂತ ಮೌನವೇ ಲೇಸು ಎಂದು ಈಗ ಯಾರಿಗೂ ಫೋನ್ ಮಾಡುತ್ತಿಲ್ಲ. ಅವರ ವಿಷಯಗಳ ಬಗ್ಗೆ ಕುತೂಹಲ ತೋರಿಸುವುದಿಲ್ಲ. 


ಜನ ಏಕೆ ಹೀಗೆ ವರ್ತಿಸುತ್ತಾರೆ ಎನ್ನುವುದು ತಿಳಿಯುತ್ತಿಲ್ಲ. ನಾನೇನೂ ಅಂತಹ ದುಷ್ಟನಾಗಿರಲಿಲ್ಲ. ಸಂಪರ್ಕಕ್ಕೆ ಬಂದ ಎಲ್ಲರೊಡನೆಯೂ ಸರಿಯಾಗಿ ನಡೆದುಕೊಂಡಿದ್ದೆ. ವಿದ್ಯಾರ್ಥಿಗಳ ಜತೆಯಲ್ಲಿ, ಸಹೋದ್ಯೋಗಿಗಳ ಜತೆಯಲ್ಲಿ ಸರಿಯಾಗಿ ವರ್ತಿಸಿದ್ದೆ. ಯಾರೊಡನೆಯೂ ಜಗಳವನ್ನು ಮಾಡಿರಲಿಲ್ಲ. ನಗುತ್ತಾ, ನಗಿಸುತ್ತಾ ಇದ್ದೆ. ಆದರೂ.....?


ನಾನೀಗ ಕೊರಗುತ್ತಿಲ್ಲ. ವೃತ್ತಿಜೀವನದ ಉದ್ದಕ್ಕೂ ಸಂಗ್ರಹಿಸಿದ ಪುಸ್ತಕಗಳು ಇವೆ. ಸಂಗ್ರಹಿಸಿದ ಸಂಗೀತದ ಮುದ್ರಿಕೆಗಳಿವೆ. ಅವೆಲ್ಲವನ್ನೂ ನನ್ನ ಐಪಾಡ್‍ಗೆ ಹಾಕಿ, ದಿನವಿಡೀ ಕೇಳುತ್ತಾ, ಒಂದು ಕೈಯಲ್ಲಿ ಪುಸ್ತಕ, ಮತ್ತೊಂದರಲ್ಲಿ ಹೊಗೆಬತ್ತಿ ಹಿಡಿದುಕೊಂಡು ಲೋಕ ಮರೆಯುತ್ತಿದ್ದೇನೆ. ಮೂರು ಮತ್ತು ನಾಲ್ಕು ವರ್ಷದ ಇಬ್ಬರು ಮೊಮ್ಮಕ್ಕಳಿದ್ದಾರೆ-ಅಣ್ಣನ ಮೊಮ್ಮಕ್ಕಳು ನನ್ನವೂ ತಾನೇ. ಅವರು ಮನೆಯಿಡೀ ಓಡಾಡಿಕೊಂಡಿರುವಾಗ ಫ್ಯಾನ್ ಕೂಡ ಅಗತ್ಯವಿರುವುದಿಲ್ಲ. ಮನಸ್ಸಿಗೂ ತಂಪು.ಇಂತಹ ಸುಖದ ಸಮಯದಲ್ಲಿ  ಕೆಲವೊಮ್ಮೆ ಸ್ವರ್ಗಕ್ಕೆ ಬೆಂಕಿ ಹಚ್ಚಬೇಕೆನಿಸುತ್ತದೆ. ಆದರೂ ಮನದ ಮೂಲೆಯಲ್ಲಿ ಆಗಾಗ ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಮನುಷ್ಯರ ವರ್ತನೆಗಳು ಅಚ್ಚರಿಯನ್ನುಂಟುಮಾಡುತ್ತಿದೆ. 


ಅವಧಿ ಮುಗಿಯುತ್ತಾ ಬಂದಿದೆ ಎಂದೆನಿಸುತ್ತಿದೆ. ಸರದಿಯಲ್ಲಿ ನಿಂತಿದ್ದೇನೆ ಎಂದೂ ಭಾಸವಾಗುತ್ತಿದೆ. ಅದರ ಬಗ್ಗೆ ಭಯವೇನೂ ಕಾಡುತ್ತಿಲ್ಲ. ಹೊತ್ತು ಹೋಗುವ ಮುನ್ನ (ಬಸವಣ್ಣನವರ ಮಾತು) ಓದಿ ಮುಗಿಸಬೇಕು. ಓದಿನ ಕ್ಷಣದಲ್ಲಿ ಸಿಗುವ ಸುಖಕ್ಕಿಂತ ಮಿಗಿಲಾದ ಸುಖವನ್ನು ಕಳೆದುಕೊಂಡ ಸ್ನೇಹಿತರ ಮಾತಿನಲ್ಲಿ ನಾನು ಮತ್ತೆ ಪಡೆಯಲಾರನೇನೋ. 


ಕಳೆದವಾರ ಓದಿದ ಪುಸ್ತಕಗಳು: ಬಾನಯಾನ-ಕ್ಯಾಪ್ಟನ್ ಗೋಪಿನಾಥ್  ಮತ್ತು ಹೆಚ್.ಎಸ್.ವಿಯವರ ಅನಾತ್ಮ ಕಥನ. 

Thursday, October 14, 2010

ರಾಘವ-ಓದಿನ ಮನೆ: ಒಡೆದು ಹೋದ ಕನಸು.

"ರಾಘವ-ಓದಿನ ಮನೆ"- ಒಡೆದುಹೋದ ಕನಸು.


ನಾನು ನಿವೃತ್ತಿಯಾದ ನಂತರ ಊರಿಗೆ ಮರಳಲು ಸಿದ್ಧನಾಗುವಾಗ ನನ್ನೆಲ್ಲಾ ಪುಸ್ತಕಗಳನ್ನು ಊರಿಗೆ ತಂದು ಒಂದು ಮುಕ್ತ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿದ್ದೆ. ಆ ವೇಳೆಗೆ ನನ್ನಣ್ಣ ತೀರಿಹೋಗಿದ್ದರು. ಅವರಿಗೂ ಹೊಸ ಪುಸ್ತಕಗಳ ಹುಚ್ಚು ಇದ್ದಕಾರಣ ಅವರ ಹೆಸರಿನಲ್ಲಿಯೇ ಒಂದು ಊರವರಿಗಾಗಿ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿ "ರಾಘವ-ಓದಿನ ಮನೆ" ಎಂದು ನಾಮಕರಣವನ್ನೂ ಮಾಡಿದ್ದೆ. ನನ್ನ ಗೃಹಪ್ರವೇಶದ ದಿನ ಅದರ ಉದ್ಘಾಟನೆ ಮಾಡುವುದು ಎಂದೂ ನಿಶ್ಚಯವಾಗಿತ್ತು. ಅಣ್ಣ ಮನೆಯ ಅಂಗಳದಲ್ಲಿ ಒಂದು ಸಣ್ಣ ಕೊಠಡಿಯನ್ನು ಕಟ್ಟಿಕೊಂಡಿದ್ದರು. ಅವರ ದುರಾದೃಷ್ಟದಿಂದ ಅಲ್ಲಿ ಅವರು ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಕಾಲ ಅವರಿಗೆ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ನಾನು ಅದಕ್ಕೆ ಸುಣ್ಣ ಬಣ್ಣವನ್ನು ಹೊಡೆಯಿಸಿ, ವಿದ್ಯುಚ್ಛಕ್ತಿ ಸಂಪರ್ಕವನ್ನು ಸರಿಪಡಿಸಿ, ಹಳೆಯ ಮನೆಯ ಎರಡು ದೊಡ್ಡ ಬೀರುಗಳನ್ನು ತಂದು ಅದರ ತುಂಬಾ ಪುಸ್ತಕಗಳನ್ನು ತುಂಬಿಸಿದ್ದೆ. ನನ್ನ ಬಳಿಯಲ್ಲಿ ಹಿರಿಯ ಲೇಖಕರ (ಅನಕೃ, ತರಾಸು ಮೊದಲಾದವರ) ಪುಸ್ತಕಗಳು ಇಲ್ಲದಿದ್ದರೂ , ಹೊಸ ಲೇಖಕರ(ಕಾಯ್ಕಿಣಿ, ರವಿ ಬೆಳೆಗೆರೆ, ಜೋಗಿ, ಛಂದ ಪ್ರಕಟನೆಗಳು) ಪುಸ್ತಕಗಳು ತುಂಬಾ ಇದ್ದವು. 
ಗೃಹ ಪ್ರವೇಶದ ದಿನ ನಾನು ಬಹಳ ವಾಗಿ ಮೆಚ್ಚಿಕೊಳ್ಳುವ ಹಿರಿಯರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಂದ ಅದರ ಉದ್ಘಾಟನೆಯನ್ನೂ ಮಾಡಿದೆ ಮತ್ತು ಊರವರಿಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಆಹ್ವಾನವನ್ನೂ ನೀಡಿದೆ. ಸದಸ್ಯ ಶುಲ್ಕವೆಂದು ಹಣ ವಸೂಲಿಯಿರಲಿಲ್ಲ. ತೆಗೆದುಕೊಂಡು ಹೋದ ಪುಸ್ತಕಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದರೆ ಸಾಕು ಎಂದು ಹೇಳಿದ್ದೆ. ಸದಸ್ಯರ ಪರಿಚಯವನ್ನು ತಿಳಿಸುವ ಒಂದು ಪರಿಚಯ ಪತ್ರವನ್ನು ಅಚ್ಚುಮಾಡಿಸಿ ಇಟ್ಟುಕೊಂಡಿದ್ದೆ. ನನ್ನ ಗ್ರಹಚಾರವೆನ್ನುವಂತೆ ಅದನ್ನು ಕೇಳಿಕೊಂಡು ಯಾರೂ ಬರಲಿಲ್ಲ. ಈಗ ಎರಡು ವರ್ಷಗಳಾಗುತ್ತಾ ಬಂದಿದೆ.  ಪ್ರತಿವಾರವೂ ಎನ್ನುವಂತೆ ನನ್ನ ಸಂಬಂಧಿಕರಿಬ್ಬರು ಮಾತ್ರ ನಿಯಮಿತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿರುತ್ತಾರೆ. ಇಬ್ಬರಿಗೂ ಪ್ರಾಯ ಎಪ್ಪತ್ತೆರೆಡು ಆಗಿದೆ. ಪುಸ್ತಕದ ಹುಚ್ಚು ಅತಿಯಾಗಿದೆ ಅವರಿಗೆ. ಹೊಸಪುಸ್ತಕಗಳನ್ನು ಓದುವುದೇ ಸುಖವೆಂದು ಖುಷಿಯಲ್ಲಿದ್ದಾರೆ. ನಿನ್ನಿಂದಾಗಿ ಈ ಲೇಖಕರನ್ನು ಓದಿದಂತಾಯಿತು ಎಂದು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಇವರು ಬಿಟ್ಟರೆ ಮೂರನೆಯವರು ಕಾಣುತ್ತಿಲ್ಲ. 

ಏಕೆ ಹೀಗೆ? ಓದುಗರು ಎಲ್ಲರೂ ಎಲ್ಲಿ ಹೋದರು. ಅರ್ಥವಾಗುತ್ತಿಲ್ಲ. ನನ್ನೂರು ಸಂಸ್ಕೃತಿ ಸಂಪನ್ನವಾದ ಊರು ಎಂದೇ ಪ್ರಸಿದ್ಧವಾಗಿತ್ತು. ಪುಸ್ತಕದ ಹುಚ್ಚು ಇರುವವರು ತುಂಬಾ ಜನರಿದ್ದರು. ಈಗ ಯಾರಿಗೂ ಪುಸ್ತಕಗಳು ಬೇಡವಾದವೆ? ಒಂದೂ ತಿಳಿಯುತ್ತಿಲ್ಲ. ಹೊಸ ಹೊಸ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದೇನೆ. ನಾವು ಮೂರು ಜನ ಮಾತ್ರ ಓದುತ್ತಿದ್ದೇವೆ. ಈಗ ನನಗೆ ಸಮಸ್ಯೆ ಬಂದಿರುವುದು ನನ್ನ ಬಳಿ ಇರುವ ಪುಸ್ತಕಗಳ ರಾಶಿಯನ್ನು ಏನು ಮಾಡುವುದು ಎನ್ನುವುದು. ಹಾಗಾಗಿ ನಿಧಾನವಾಗಿ ಆಸಕ್ತರಿಗೆ ನನ್ನ ಬಳಿ ಇರುವ  ಮತ್ತು ಓದಿಯಾದ ಪುಸ್ತಕಗಳನ್ನು ನಿರ್ಮೋಹಿಯಾಗಿ ದಾನ ಮಾಡುತ್ತಿದ್ದೇನೆ. ಇನ್ನೈದು ವರ್ಷಗಳಲ್ಲಿ ನನ್ನ ಬಳಿಯಿರುವ ಪುಸ್ತಕಗಳನ್ನೆಲ್ಲವನ್ನೂ ಹೀಗೆ ಕರಗಿಸಬೇಕು ಎಂದು ನಿರ್ಧರಿಸಿದ್ದೇನೆ.  

ನನ್ನ ಓದಿನ ಮನೆಯ ಕನಸು ಒಡೆದುಹೋಗಿದೆ. ಕಾಲ ಸರಿಯುತ್ತಿದೆ. ಪ್ರಾಯವಾಗುತ್ತಿದೆ. ಪುಸ್ತಕಗಳನ್ನು ಆದಷ್ಟು ಬೇಗ ಓದಿ ಕರಗಿಸಬೇಕು.  

Saturday, October 9, 2010

ಬದಲಾದ ಗತಿ

*ನನ್ನ ಹಿರಿ ಕಿರಿ ಗೆಳೆಯರು ಬ್ಲಾಗ್‍ನ್ನು ಪ್ರಾರಂಭಿಸಿದನ್ನು ನೋಡಿ ನಾನೂ ಈ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಕವಿ ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದು ಅಲ್ಲ.ಪ್ರಾರಂಭವೇನೋ ಮಾಡಿದ್ದೇನೆ. ಆದರೆ ಬರೆಯುವುದು ಏನನ್ನು? ಈ ಬೇತಾಳ ಬೆನ್ನ ಮೇಲೆ ಏರಿ ಕುಳಿತಿದ್ದಾನೆ. 




*ಬ್ಲಾಗ್ ಎಂದರೆ ದಿನಚರಿ ತಾನೆ? ಅಥವಾ ನಾನು ಹಾಗೆ ತಿಳಿದುಕೊಂಡಿದ್ದೇನೆ. ಖಾಸಗಿಯಾದ ವಿಷಯಗಳನ್ನು ಬೇರೆಯವರೆಲ್ಲರೂ ಓದುವಂತೆ ಇದು ಸಹಾಯ ಮಾಡುತ್ತದೆ. ಆರವತ್ತು ದಾಟಿದ ನನ್ನ ಮನಸ್ಸಿನ ನೆನಪುಗಳು ಪೂರ್ಣ ಅಳಿದು ಹೋಗುವ ಮುನ್ನ ದಾಖಲಿಸಬೇಕು ಎಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.




ಬದಲಾದ ಗತಿ




ಸುಮಾರು ಮೂವತ್ತೈದು ವರ್ಷಗಳ ಕಾಲ ಕನ್ನಡ ಪಾಠವನ್ನು ಹೇಳಿಕೊಡುವ ಮಾಸ್ಟ್ರಾಗಿದ್ದೆ. ವೃತ್ತಿಯ ಕೊನೆಯ ಐದು ವರುಷ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡಿ ನಿವೃತ್ತನಾದೆ. ಕೊನೆಕೊನೆಯಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ನನಗೆ ಬದುಕನ್ನು , ವೃತ್ತಿಯನ್ನು ನೀಡಿದ್ದ ನನ್ನ ದಕ್ಷಿಣ ಕನ್ನಡ ನಿಧಾನವಾಗಿ ಬೇಸರವನ್ನುಂಟುಮಾಡಲು ಪ್ರಾರಂಭಿಸಿತ್ತ್ತು. ಈ ಊರೇ ಬೇಡ. ಹುಟ್ಟೂರಿಗೆ ಹೋಗೋಣವೆಂದೆನಿಸಲು ಅನ್ನಿಸಿತ್ತು. ಈ ಯೋಚನೆ ಆಗಲೇ ಬಂದದ್ದಲ್ಲ. ನಿವೃತ್ತನಾಗಲು ಮೂರು ವರ್ಷವಿದೆ ಎನ್ನುವಾಗಲೇ ಈ ಯೋಚನೆ ಬರಲು ಪ್ರಾರಂಭಿಸಿತ್ತು.  ಹುಟ್ಟೂರಿನ ಸೆಳೆತ ಬಲವಾಗುವುದಕ್ಕೆ ಇನ್ನೂ ಎರಡು ಕಾರಣಗಳಿವೆ.


೨೦೦೪ರಲ್ಲಿ ನನ್ನ ತಾಯಿ ತೀರಿಹೋದಾಗ ಅವರ ಅಪರಕರ್ಮವನ್ನು ಮಾಡಲು ಊರಿಗೆ ಬಂದಿದ್ದೆ. ಸಂಪ್ರದಾಯದಂತೆ ಮೀಸೆ ಮತ್ತು ತಲೆಯ ಕೂದಲುಗಳನ್ನು ತೆಗೆಯಿಸಿಕೊಂಡು ಯಾರಿಗೂ ಗುರುತೇ ಸಿಗದಂತೆ ರೂಪ ಬದಲಾಯಿಸಿಕೊಂಡಿದ್ದೆ. ಒಂದು ದಿನ ನನ್ನಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ನನ್ನ ಸಹಪಾಠಿಯಾಗಿದ್ದ ದಿ.ರವೀಂದ್ರ ಶೆಟ್ಟಿಯ ತಮ್ಮ      ಶೆಟ್ಟಿ ಸಿಕ್ಕಿದ್ದ. ನನ್ನ ಮುಖವನ್ನೇ ನೋಡುತ್ತಾ ’ಏಯ್ ,ನಾಗರಾಜ ಅಲ್ವೇನೋ !, ಏನಾಯಿತೋ’ ಎಂದು ವಿಚಾರಿಸಿದ.  ವಿಷಯ ತಿಳಿದಾಗ ಸಂತಾಪ ವ್ಯಕ್ತಪಡಿಸಿ, ನನ್ನ ಕೈ ಯನ್ನು ಬಲವಾಗಿ ಹಿಡಿದು ’ ಇನ್ನು ಎಷ್ಟು ವರುಷ ಸರ್ವೀಸ್ ಇದೆ’ ಎಂದು ಕೇಳಿದ. ಮೂರು ವರ್ಷವೆಂದು ನಾನು ಹೇಳಿದಾಗ ಹಿಡಿದ ಕೈ ಯನ್ನು ಬಿಡದೇ, ಇನ್ನೂ ಬಿಗಿಯಾಗಿ ಹಿಡಿದುಕೊಂಡು ’ನಾಗರಾಜಾ, ನಿವೃತ್ತನಾದ ಮೇಲೆ ಊರಿಗೇ ಬಾ. ಒಟ್ಟಿಗೇ ಸಾಯೋಣ’ ಎಂದು ಹೇಳಿದ. ನಾನು ನಕ್ಕು ಹಾಗೇ ಆಗಲಿ ಎಂದು ಹೇಳಿದೆ. ಆಗ ಅವನ ಮಾತು ನನ್ನ ಮನಸ್ಸಿನ ಆಳದಲ್ಲಿ ಇಳಿದಿರಲಿಲ್ಲ. ದಿನ ಕಳೆದಂತೆ ಅವನಾಡಿದ ಮಾತಿನರ್ಥ ಸ್ವಷ್ಟವಾಗಲು ಪ್ರಾರಂಭವಾಯಿತು. ಗೆಳೆಯರೆಂದರೆ ಹೀಗೆ ಇರುತ್ತಾರೆ. ಒಟ್ಟಿಗೆ ಸಾಯಲು ಕಾಯುತ್ತಿರುತ್ತಾರೆ. ಸಾಯಬೇಕಾದರೂ ಸರಿಯೇ. ಸರಿಯಾದ ಸ್ಠಳದಲ್ಲಿಯೇ ಸಾಯಬೇಕು. ಗೆಳೆಯರು ಇದ್ದ ಊರಿನಲ್ಲಿ, ಬಂಧುಗಳು ಇರುವ ಊರಿನಲ್ಲಿ. ಹುಟ್ಟೂರಿನಲ್ಲಿ.  ಈಗ ನಾನಿರುವ ಊರು ನನ್ನದಲ್ಲ. ಅಲ್ಲದೆ ನನ್ನ ಬರವಿಗೆ ಕಾಯುತ್ತಿರುವವರು ಹುಟ್ಟೂರಿನಲ್ಲಿದ್ದಾರೆ. ಆದ್ದರಿಂದ ಮತ್ತೆ ಅಲ್ಲಿಗೆ ಹೋಗಬೇಕು ಎಂದು ಬಲವಾಗಿ ಅನ್ನಿಸಲು ಪ್ರಾರಂಭಿಸಿತು. 


ನಾನಿದ್ದ ಊರಿನ ಬಗ್ಗೆ ಮೋಹ ಕಡಮೆಯಾಗಲು ಮತ್ತು ಮರಳಿ ಮಣ್ಣಿಗೆ ತೆರಳುವ ನನ್ನ ನಿರ್ಧಾರ ಗಟ್ಟಿಯಾಗಲು ಇನ್ನೂ ಒಂದು ಘಟನೆ ನಡೆಯಿತು. ನಾನು ನಿವೃತ್ತನಾಗಲು ಎಂಟು ತಿಂಗಳು ಇತ್ತು. ನನ್ನ ಉತ್ತರಾಧಿಕಾರಿಯಾಗಿ ನಿಯುಕ್ತರಾಗಿದ್ದ ನನ್ನ ಸಹೋದ್ಯೋಗಿಯೊಬ್ಬರು ದಿನನಿತ್ಯ ನಡೆದಾಡುವ ರಸ್ತೆಯಲ್ಲಿ ನಿತ್ಯದಂತೆ ನಡೆದುಕೊಂಡು ಹೋಗುತ್ತಿರುವಾಗ ಅವರಿಗೆ ತಲೆ ಸುತ್ತು ಬಂದು ರಸ್ತೆಯಲ್ಲಿಯೇ ಬಿದ್ದು ಬಿಟ್ಟರು. ಸ್ಮೃತಿ ಕಳೆದುಕೊಂಡರು. ಆ ರಸ್ತೆ ಅಪರಿಚಿತವಾದುದೇನೂ ಅಲ್ಲ. ಸುಮಾರು ಹದಿನೆಂಟು ವರುಷಗಳಿಂದ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತಿರುತ್ತೇವೆ. ಅಲ್ಲಿ ಅಕ್ಕಪಕ್ಕದಲ್ಲಿರುವ ಅಂಗಡಿಗಳವರಿಗೆ ನಾವು ಯಾರು ಎನ್ನುವುದು ಸರಿಯಾಗಿ ತಿಳಿದಿದೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಎಂದು ಹತ್ತಿರಕ್ಕೆ ಬರಲಿಲ್ಲ. ಒಂದು ಅಂಗಡಿಯವರು ಹತ್ತಿರಕ್ಕೆ ಬಂದು ಸ್ಮೃತಿ ಕಳೆದುಕೊಂಡು ಬಿದ್ದಿದ್ದ ನನ್ನ ಗೆಳೆಯರ ಕೈಯಲ್ಲಿದ್ದ ಚೀಲವನ್ನು ಮಾತ್ರ ಸುರಕ್ಷಿತವಾಗಿ ತೆಗೆದಿರಿಸಲು ಅದನ್ನು ಎತ್ತಿಕೊಂಡು ಅವರ ಅಂಗಡಿಗೆ ಹೋದರು. ಶಿವಾಯ್ ಅವರ ಸಹಾಯಕ್ಕೆ ಯಾರೂ ಹತ್ತಿರಕ್ಕೆ ಸುಳಿಯಲಿಲ್ಲ. ಆ ವೇಳೆಯಲ್ಲಿ ಆಪದ್ಭಾಂಧವನಂತೆ ಸಹಾಯಕ್ಕೆ ಬಂದವರು ಒಬ್ಬರು ಸಾಮಾನ್ಯ ಜನವೆಂದು ನಾವು ಗುರುತಿಸುವ ಗ್ಯಾರೇಜಿನಲ್ಲಿ ಕೆಲಸ ಮಾಡುವ ಒಬ್ಬ ಸಹೃದಯಿ. ಅವರು ರಿಕ್ಷಾವನ್ನು ನಿಲ್ಲಿಸಿ ಆಸ್ಪತ್ರೆಗೆ ಅವರನ್ನು ಸೇರಿಸಿದರು. ವಿಷಯ ತಿಳಿದು ನಾವೆಲ್ಲ ಆಸ್ಪತ್ರೆಗೆ ಧಾವಿಸಿದಾಗ ಆ ವ್ಯಕ್ತಿ ಇನ್ನೂ ಅಲ್ಲಿಯೇ ಇದ್ದರು. ಅವರು ನಮ್ಮನ್ನು ನೋಡಿ ’ ಎಂತಹ ಊರು ಸ್ವಾಮಿ ಇದು. ಮಾಸ್ಟ್ರು ಎಚ್ಚರ ತಪ್ಪಿ ಬಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಗುರುತೇ ಇಲ್ಲದವರ ಹಾಗೇ ಎಲ್ಲರೂ ನಡೆದು ಕೊಂಡರು. ಇಂತಹ ಊರಿನಲ್ಲಿ ಬದುಕುವುದು ಕಷ್ಟ’ ಎಂದು ಉದ್ಗರಿಸಿದರು. ಕೇಳಿದ ನಮಗೂ ಇದು ಹೃದಯಹೀನ ಊರು, ಆತ್ಮವಿಲ್ಲದ ಊರು ಎಂದೆನಿಸಿತು. ಅಲ್ಲಿದ್ದ ಅಂಗಡಿಯವರಿಗೆ ನಾವು ಅಪರಿಚಿತರೇನೂ ಅಲ್ಲ. ರಸ್ತೆ ದಾಟಿದರೆ ನಮ್ಮ ಕಾಲೇಜು ಇದೆ. ಅಲ್ಲಿ ಸಾಲಾಗಿ ಇರುವ ಅಂಗಡಿಗಳಲ್ಲಿ ನಾವು ಎಷ್ಟೋ ಬಾರಿ ವ್ಯಾಪಾರವನ್ನು ಮಾಡಿದ್ದೇವೆ. ಹೀಗೆ ಇದ್ದೂ ಇಂತಹ ಪರಿಸ್ಠಿತಿ ಬಂದಿತೆಂದರೆ ಈ ಊರೇ ಬೇಡವೆಂಬ ಹೇವರಿಕೆ ಬಲವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿತು.


ಅದಕ್ಕಾಗಿ ನೆಮ್ಮದಿಯನ್ನು ಅರಸಿಕೊಂಡು , ಸಾಯಲು ಒಳ್ಳೆಯ ಸ್ಠಳವೆಂದು , ಗೆಳೆಯರೊಡನೆ ನಗೆಯಾಡುತ್ತಾ ಕೊನೆಯ ದಿನಗಳನ್ನು ಕಳೆಯಲು ಹುಟ್ಟೂರಿಗೆ ಬಂದಿದ್ದೇನೆ. ನಿಜವಾಗಲೂ ನೆಮ್ಮದಿಯಿಂದ ಇದ್ದೇನೆ.