ತಕಿಟ ತಕಿಟ ಧೋಂ

Friday, January 14, 2011

ಕಳೆದು ಹೋದ ವರುಷ

ಕಳೆದು ಹೋದ ವರುಷ

ಹೊಸ ವರುಷ ಪ್ರಾರಂಭವಾಯಿತು ಮತ್ತು ನಾವು ಮತ್ತೂ ಒಂದು ವರುಷವನ್ನು ನಮ್ಮ ಪ್ರಾಯಕ್ಕೆ ಸೇರಿಸಿಕೊಂಡೆವು. ಹೊಸ ವರುಷದ ಪ್ರಾರಂಭದಲ್ಲಿ ಹೊಸ ಪಾಪಗಳನ್ನು ಮಾಡುವುದಿಲ್ಲ ಎಂದು ಏನೇನೋ ನಿರ್ಥಾರಗಳನ್ನು ಮಾಡುತ್ತೇವೆ. ಒಂದೆರೆಡು ದಿನ ಅದರ ಅಮಲಿನಲ್ಲಿಯೇ ಇರುತ್ತೇವೆ. ದಿನ ಕಳೆದಂತೆ ಮತ್ತೆ ನಾಯಿಬಾಲ ಡೊಂಕೇ. ಹಾಗಾಗಿ ಹೊಸ ವರುಷಕ್ಕೆ ನನ್ನಿಂದ ಸಾಧ್ಯವಾಗದ ನಿರ್ಧಾರಗಳನ್ನು ಮಾಡುವುದನ್ನು ಬಿಟ್ಟಿದ್ದೇನೆ. ಇರುವಷ್ಟು ದಿನ ಅದೇ ಸಿಗರೇಟು ಮತ್ತು ಹೊಸ ಪುಸ್ತಕಗಳ ಸಂಗದಲ್ಲಿ ಕಳೆದರಾಯಿತು ಎನ್ನುವುದು ಸಧ್ಯದ ನಿರ್ಧಾರ.

ಕಳೆದ ಹೋದ ವರುಷದಲ್ಲಿ ನಾನು ಓದಿದ ಪುಸ್ತಕಗಳ ಸಮಗ್ರ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇನೆ. ಆವರಣದಲ್ಲಿರುವ ಸಂಖ್ಯೆ ಆ ಪುಸ್ತಕಗಳ ಪುಟಗಳ ಸಂಖ್ಯೆ. ಕೆಲವೆಡೆ ಆವರಣದಲ್ಲಿ "ಎ" ಎಂದು ಗುರುತು ಹಾಕಿದ್ದೇನೆ. ಅಂದರೆ ಅವು ಯಾರಿಂದಲೋ ಎರವಲು ತಂದ ಪುಸ್ತಕಗಳು. ಸ್ನೇಹಿತರು ಕೊಟ್ಟ ಪುಸ್ತಕಗಳು. ಉಳಿದೆಲ್ಲಾ ಪುಸ್ತಕಗಳು ಸ್ವಂತದ್ದು. ಮತ್ತು ದಾನ ನೀಡಲು ನಿರ್ಧಾರ ಮಾಡಿದ ಪುಸ್ತಕಗಳು. ಯಾರಿಗೆ ಬೇಕಾದರೂ ಕೊಟ್ಟು ಬಿಡುತ್ತೇನೆ . ಆದರೆ ತೆಗೆದುಕೊಳ್ಳುವರು ಮತ್ತು ಅದನ್ನು ಆಸಕ್ತಿಯಿಂದ ಓದುವವರು ಯಾರು?

ಪುಸ್ತಕಗಳ ಪಟ್ಟಿ.
೧. ತೊತ್ತೋಚಾನ್ (೧೫೪) ೨, ಕಥಾಸಮಯ -ಜೋಗಿ (೧೪೭)
೩. ಹೆಸರೇ ಬೇಡ -ಇಟ್ಟಿಗೆ ಸಿಮೆಂಟ್ ಪ್ರಕಾಶ ೪. ಜೋಗಿಮನೆ -ಜೋಗಿ (೨೨೪) ೫.ಆ ದಶಕ -ಶಾಮಣ್ಣ (೧೦೩) ೬. ಮಾಂಟೋ ಕಥೆಗಳು- ಜೆ.ಬಾಲಕೃಷ್ಣ (೧೦೭) ೭. ಮೋಹನ ಮುರಲಿ- ಎಸ್. ವಿದ್ಯಾಶಂಕರ್ (೨೮೪) ೮.ಮೃತ್ಯುಂಜಯ -ನಿರಂಜನ {೪೮೪(ಎ)} ೯. ಸಾಹಿತ್ಯಲೋಕದ ಸುತ್ತ ಮುತ್ತ -ಗಿರಡ್ಡಿ (೧೮೬) ೧೦. ಬದುಕು ಬದಲಿಸಿದ ಸ್ಕೂಟರ್ -ಗಣೇಶ್ ಅಮೀನಗಡ (೨೪೬) ೧೧ ಒಂದು ಸುಂದರ ಮನಸ್ಸು ಮತ್ತು ಇತರ ಬರಹಗಳು -ಅಲೂರು (೧೬೮) ೧೨. ಕೊಪೆನ್ ಹೇಗನ್ ಋತುಸಂಹಾರ -ನಾ.ಹೆಗಡೆ (೧೧೮) ೧೩. ಅಬಿವೃದ್ಧಿಯ ಅಂಧಯುಗ -ನಾ.ಹೆಗಡೆ (೧೫೬) ೧೪. ಟಿಪ್ಪು ಖಡ್ಗದ ನ್ಯಾನೊ ಕಾರ್ಬನ್-ನಾ.ಹೆಗಡೆ (೧೪೮) ೧೫. ನಾನು ಪಾಟೀಲ ಪುಟ್ಟಪ್ಪ (೨೬೬)-ಡಾ. ಸರಜೂ ಕಾಟ್ಕರ್ ೧೬.ಶಾಲ ಭಂಜಿಕೆ-ಗಣೇಶಯ್ಯ (೧೧೬)
೧೭. ಚಂದ್ರಗಿರಿ-ಸಾರಾಬಿನಂದನ {ಎ(೪೫೬)} ೧೮.ಕನ್ನಡದ ಅತಿ ಸಣ್ಣ ಕತೆಗಳು -ಸಂ-ಎ.ದಿವಾಕರ. (೧೯೨)
೧೯. ಧರ್ಮದ ಹೆಸರಿನಲ್ಲಿ -ಆರ್.ಬಿ.ಶ್ರೀಕುಮಾರ್/ಸಾರಾ (೮೮) ೨೦.ಝೆನ್- ಕೆ.ವಿ.ಸುಬ್ಬಣ್ಣ
೨೧. ಕೋಮುವಾದ: ಒಂದು ದರ್ಶನ-ರಾಮ್ ಪುನಿಯಾನಿ (೧೧೩)
೨೨. ಆರ್.ಕೆ.ನಾರಾಯಣ ಅವರ ಕತೆಗಳು:ಅನು.ಡಾ.ಆರ್ ಪೂರ್ಣಿಮಾ (೪೮) ೨೩. ನೆನಪುಗಳು-ಡಾ.ಪ್ರೊ.ವೈ.ಆರ್.ಮೋಹನ್ (೩೧೨)
೨೪. ಹರಿವ ನದಿ-ನಾ.ಡಿಸೋಜ {ಎ(೧೫೯)}
೨೫. ಸ್ವಾಮಿ ಮತ್ತು ಅವನ ಸ್ನೇಹಿತರು: ಅನು-ಹೆಚ್.ವೈ.ಶಾರದಾಪ್ರಸಾದ್ (೧೪೪)
೨೬. ಅರಿವಿನ ಆಡುಂಬೊಲ- ಹೆಚ್.ವೈ.ಶಾರದಾಪ್ರಸಾದ್ (೧೦೧) ೨೭, ಬೊಕಾಷಿಯೋನ ರಸಿಕತೆಗಳು- (೯೩)
೨೮. ಕರ್ವಾಲೋ-ತೇಜಸ್ವಿ. (೧೪೬) ೨೯. 11 minutes-Paulo Coelho (275)
೩೦. ಪಂಡಿತ್ ಭೀಮಸೇನ ಜೋಷಿ-ಅರವಿಂದ ಮುಳಗುಂದ (೧೫೧) ೩೨, ಉಡುಪಿಯ ಸಾಂಸ್ಕೃತಿಕ ಕಥನ- ಮುರಾರಿ ಬಲ್ಲಾಳ (೧೪೮)
೩೩. ೨೮ಹಣತೆಗಳು- ತೀರ್ಥರಾಮ ವಳಲಂಬೆ (೧೬೭) ೩೩. ೨೭ಹಣತೆಗಳು- ತೀರ್ಥರಾಮ ವಳಲಂಬೆ ೯೧೭೨)
೩೪. ಧ್ಯಾನ-ತೀರ್ಥರಾಮ ವಳಲಂಬೆ (೧೬೮) ೩೫. ದೇಶಕಾಲ ಬದುಕು ಮತ್ತು ದೇವರು-ತೀರ್ಥರಾಮ ವಳಲಂಬೆ (೧೭೨)
೩೬. ಪುನರ್ಜನ್ಮ ಮತ್ತು ಪುರುಷಾರ್ಥ -ತೀರ್ಥರಾಮ ವಳಲಂಬೆ (೧೭೬) ೩೭, ವಿಚಾರವಾದ ವಿಜ್ಞಾನ ಅಧ್ಯಾತ್ಮ -ತೀರ್ಥರಾಮ ವಳಲಂಬೆ (೧೭೨)
೩೮. ಭಾವ -೩ - ಮಾಸ್ತಿ. (೫೦೦) ೩೯ ಕೇಂದ್ರ ವೃತ್ತಾಂತ- ಯಶವಂತ ಚಿತ್ತಾಲ (೨೨೪)
೪೦. ರಕ್ಷಕ ಅನಾಥ- ವಸುದೇಂದ್ರ (೧೬೫) ೪೧. ಗೆರೆ ದಾಟಿದ ಮೇಲೆ-ಎಂ.ಎಸ್.ಪರಮಶಿವಮೂರ್ತಿ (೪೨೪)
೪೨. ಮನೆಮನಮಾತು: ನಾ ಕಾರಂತ ಪೆರಾಜೆ-(೬೪) ೪೩. ಯಶವಂತ ಚಿತ್ತಾಲ ಸಮಗ್ರ ಕಥೆಗಳು-೧
೪೪. ಯಶವಂತ ಚಿತ್ತಾಲ ಸಮಗ್ರ ಕಥೆಗಳು-೨ (೧೨೭೮) ೪೫. ಕವಲು- ಭೈರಪ್ಪ (೩೦೦)
೪೬. ಭಿತ್ತಿ-ಭೈರಪ್ಪ (೬೨೦) ೪೭. ತಂತು- ಭೈರಪ್ಪ (೯೦೮)
೪೮. ಸಾಕ್ಷಿ -ಭೈರಪ್ಪ (೪೧೪) 49. The music room- Namitha Devi Dayal {ಎ(310)}
೫೦. ಮಂದ್ರ- ಭೈರಪ್ಪ (೫೯೬) 51 ಜೀವನರಾಗ- ಸುಮಂಗಲಾ (೩೫೨)
೫೨.ದೂರ ಸರಿದರು- ಭೈರಪ್ಪ (೨೩೨) ೫೩. ತಲೆಗಳಿ- ವಿ.ಶಿ.ಶೀಗೆಹಳ್ಲಿ (೪೪೮)
೫೪. ತುಂಗಾ- ವಿ.ಗಾಯತ್ರಿ (೧೭೪) ೫೫. ಗಾಂಧೀ ಕ್ಲಾಸ್-ಕುಂ.ವೀ. (೩೯೦)
೫೬. ದೇವಕಾರು- ಸತೀಶ್ ಚಪ್ಪರಿಕೆ (೯೬) ೫೭. ಜನ್ನನ ಯಶೋಧರ ಚರಿತೆ ಪ್ರವೇಶ (೧೨೬)
೫೮. ಸೋಲಿಸಬೇಡ ಗೆಲಿಸಯ್ಯಾ- ಪ್ರೇಮಾ ಕಾರಂತ (೨೫೨) ೫೯.Haroun and the sea of sotries- Salman Rushdie (211) .೬೦ ಬಾನಯಾನ- ಕ್ಯಾ.ಗೋಪಿನಾಥ್.
೬೧ Absoulte Kushawant (186)
೬೨ ನೆನಪಿನ ಚಿತ್ರಗಳು- ಎಂ.ವೈ.ಘೋರ್ಪಡೆ. (೨೧೨)
೬೩ ಸಾರ್ಥ -ಭೈರಪ್ಪ. (೩೧೮)
೬೪ ವೆಂಡರ್ ಕಣ್ಣು -ಕೆ ಶಿವು (೧೨೩)
೬೫ ಕನ್ನಡದ ಈ ಲೋಕ- ಭವಾನಿಶಂಕರ್ (೯೪)
೬೬ ಎಣ್ಮಕಜೆ- ಮೂಲ ಅಂಬಿಕಾಸುತನ್, ಅನು: ಬಾಲಕೃಷ್ಣ. (೨೪೩)
೬೭ ಹಾವು ನಾವು- ಗುರುರಾಜ ಸನೀಲ್ (೧೯೪)
೬೮ The curious incident of the dog in the night time- Mark Haddon (272)
೬೯ Slum dog millionaire (Q &A)- Vikas Swaroop (382)
೭೦ ಮಿತ್ತಬೈಲು ಯಮುನಕ್ಕ -ಡೆ.ಕೆ.ಚೌಟ (೩೦೪)
೭೧ ಜರಾಸಂಧ-ಜೋಗಿ (೧೧೮)
೭೨ ಜೀವದನಿ- ಸರ್ಜಾಶಂಕರ ಹರಳೀಮಠ (೧೫೨)
೭೩ ಜೋಗಿಕಾಲಂ (೨೧೬)
೭೪ ಪಾಕಕ್ರಾಂತಿ -ತೇಜಸ್ವಿ (೮೯)
೭೫ ಕಾಸರಗೋಡಿನ ಸಣ್ಣಕತೆಗಳು (೩೫೩)
೭೬ ಕಾಮರಾಜ ಮಾರ್ಗ-ರವಿಬೆಳೆಗೆರೆ (೪೦೨)
೭೭ ರಥಬೀದಿ-ಶ್ರೀಧರ ಬಳೆಗಾರ (೧೫೩)
೭೮ ಗಂಗಾವತರಣ -ದಮಯಂತಿ ನರೇಗಲ್ಲ (೧೫೫)
೭೯ ನನ್ನ ಬದುಕಿನ ಹಾಡು -ಎನ್ಕೆ (೧೦೬)
೮೦ ಸತ್ಯದ ಹುಡುಕಾಟ-ಶ್ರೀಸದಾಶಿವಯೋಗಿ (೨೬೯)
೮೧ ಸಂಗೀತಸಂವಾದ-ಭಾಸ್ಕರ್ ಚಂದಾವರ್ಕರ್, ಅನು:ವೈದೇಹಿ (೨೦೨)
೮೨ ಸಂಗೀತತಪಸ್ಯಾ- ದತ್ತಾತ್ರೇಯ ಸದಾಶಿವಗರುಡ(೨೭೭)
೮೩ ಸಂಗೀತಸಮಯ -ಎಸ್.ಕೃಷ್ಣಮೂರ್ತಿ (೩೪೯)
೮೪ ಸಂಗೀತಸಾಮ್ರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮಿ -ಸಾ.ಕೃ.ರಾಮಚಂದ್ರರಾವ್ (೧೦೬)
೮೫ ನಾ ಕಂಡ ಕಲಾವಿದರು-ವಾಸುದೇವಚಾರ್ಯರು (೧೩೫)
೮೬ ನನ್ನ ರಸಯಾತ್ರೆ-ಮಲ್ಲಿಕಾರ್ಜುನ ಮನ್ಸೂರ್ (೧೧೨)
೮೭, ರಂಗಕೋಗಿಲೆ ಜುಬೇದಾಬಾಯಿ -ವೀಣಾ ಕುಲಕರ್ಣಿ (೮೬)
೮೮.ನೆನಪುಗಳು- ವಾಸುದೇವಾಚಾರ್ಯರು (೧೦೯)
೮೯. ಸಂಗೀತ ರಸನಿಮಿಷಗಳು ;ಜಿ.ಟಿ.ನಾರಾಯಣರಾವ್ (೧೭೬).

Sunday, January 9, 2011

ಜಾತ್ರೆಯ ದಿನಗಳು

ಜಾತ್ರೆಯ ದಿನಗಳು

ಜಾತ್ರೆ ಮುಗಿದು ಎರಡು ದಿನಗಳು ಕಳೆದಿವೆ. ಊರು ಇನ್ನೂ ಅದರ ಅಮಲಿನಲ್ಲಿಯೇ ಇದೆ. ಸಂಜೆಯ ಹೊತ್ತು ಜನ ಇನ್ನೂ ತಿರುಗಾಡುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ. ಇನ್ನು ಒಂದು ವಾರದಲ್ಲಿ ಸಂಕ್ರಮಣದ ರಥೋತ್ಸವವಿದೆ. ಅಲ್ಲಿಯವರೆಗೆ ಬಹುಷಃ ಇದೇ ಗುಂಗಿನಲ್ಲಿ ಜನರು ಇರಬಹುದೇನೋ. ನನ್ನೂರಿನ ಮಕ್ಕಳು ಕಾಯುವುದೆಂದರೆ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ರಾಮಮಂಟಪ ಮುಳಗಬೇಕು. ಅಂದರೆ ರಜೆ ಗ್ಯಾರಂಟಿ. ಮತ್ತು ಎಳ್ಳಾಮಾವಾಸ್ಯೆಯ ಜಾತ್ರೆಗೆ. ಎರಡೂ ಲಾಭದಾಯಕ ದಿನಗಳೇ. ಮಳೆಗಾಲದ ರಜೆ ಸಿಕ್ಕಾಗ ನೆರೆ ಬಂದಕಡೆಯಲ್ಲಿ ತಿರಬಹುದು. ನೀರು ಎಷ್ಟು ಬಂದಿದೆ ಎಂದು ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರಬಹುದು. ಇಂತಹ ದಿನವೂ ಜಾತ್ರೆಯ ದಿನವಿದ್ದಂತೆ. ಊರಿನ ಎಲ್ಲಾ ಜನರೂ ತಮ್ಮ ವಾಹನಗಳನ್ನೇರಿ ತಿರುಗಾಡುತ್ತಿರುತ್ತಾರೆ.  ನೆರೆಯಿಂದಾಗಿ ಊರಿನ ಸಂಪರ್ಕರಸ್ತೆಗಳೆಲ್ಲವೂ ಮುಚ್ಚಿಹೋದರೂ ಚಕ್ರವ್ಯೂಹದಲ್ಲಿ ತಿರುಗಿದಂತೆ ನಾವೂ ಊರು ತುಂಬಾ ತಿರುಗುತ್ತಿರುತ್ತೇವೆ. ಈ ಬಾರಿ ಮಳೆಗಾಲ ಕೈಕೊಟ್ಟಿತು. ಮಳೆ ಬಂದರೂ ರಾಮಮಂಟಪ ಮುಳಗಲೇ ಇಲ್ಲ. ಹುಡುಗರ ಬೇಸರಕ್ಕೆ ಮಿತಿಯೇ ಇರಲಿಲ್ಲ.

ಜಾತ್ರೆ ಈ ಬಾರಿ ಕೈಕೊಡಲಿಲ್ಲ. ಗಾಢವಲ್ಲದ ಆದರೆ ಹಿತವಾದ ಚಳಿಯಿತ್ತು. ಅಮಾವಾಸ್ಯೆಯದಿನ ಪವಿತ್ರ ಸ್ನಾನಕ್ಕಾಗಿ ಜನ ಸಾಲುಸಾಲಾಗಿ ನಿಂತುಕೊಂಡಿದ್ದರು. ನನ್ನೂರಿಗೆ ಒಂದು ಪೌರಾಣಿಕ ಹಿನ್ನೆಲೆಯಿದೆ. ತಂದೆಯ ಆಜ್ಞೆಯಂತೆ ತನ್ನ ತಾಯಿಯ ತಲೆಕಡಿದ ಪರುಶರಾಮನಿಗೆ ಪಾಪಪ್ರಜ್ಞೆ ಬಂದಿತಂತೆ . ಮೇಲಾಗಿ ಅವನ ಕೊಡಲಿಗೆ ಅಂಟಿಕೊಂಡಿದ್ದ ರಕ್ತ ಯಾವ ನದಿಯ ನೀರಿನಿಂದಲೂ ತೊಳೆಯಲಾಗಲಿಲ್ಲವಂತೆ. ತಿರುಗುತ್ತಾ ತಿರುಗುತ್ತಾ ಎಳ್ಳಾಮಾವಾಸ್ಯೆಯ ದಿನ ನನ್ನೂರಿಗೆ ಬಂದು ಅಲ್ಲಿ ಕೊಡಲಿಯನ್ನು ತೊಳೆದಾಗ  ಅಂಟಿಕೊಂಡಿದ್ದ ರಕ್ತವೆಲ್ಲಾ ತೊಳೆದುಹೋಗಿ ಶುಭ್ರವಾಗಿ ಹೊಳೆಯಿತಂತೆ. ಅಲ್ಲೇ ಒಂದು ಶಿವಲಿಂಗವನ್ನು ಸ್ಥಾಪಿಸಿ , ಪೂಜೆಮಾಡಿದನಂತೆ ಪರುಶರಾಮ. ಆ ಸ್ಠಳವೀಗ ರಾಮಕುಂಡವೆಂದು ಪ್ರಸಿದ್ಧವಾಗಿದೆ. ಅಲ್ಲೇ ಇರುವ ಶಿವಲಿಂಗಕ್ಕೆ ಒಂದು ಮಂಟಪ ಕಟ್ಟಲಾಗಿದೆ. ರಾಮಮಂಟಪವೆಂದು ಇದರ ಹೆಸರು. ನದಿಯ ದಡದಲ್ಲಿಯೇ ಶ್ರೀ ರಾಮೇಶ್ವರ ದೇವಸ್ಠಾನವಿದೆ. ಈ ದೇವರಿಗೆ ರಥೋತ್ಸವದ ಸಂಭ್ರಮ ಎಳ್ಳಾಮಾವಾಸ್ಯೆಯ ಮರುದಿನ.
ಅಮಾವಾಸ್ಯೆಯದಿನ ಸ್ನಾನ. ಆ ದಿನ ಅಲ್ಲಿ ಸ್ನಾನ ಮಾಡಿದರೆ ಆವರೆಗಿನ ಪಾಪಗಳೆಲ್ಲವೂ ಪರಿಹಾರವಾಗಿ ಹೊಸ ಪಾಪಗಳನ್ನು ಮಾಡಲು ಪ್ರಾರಂಭಿಸಬಹುದಂತೆ. ಮಾರನೆಯ ದಿನ ರಥೋತ್ಸವ. ಮೂರನೇಯ ದಿನ ತೆಪ್ಪೋತ್ಸವ. ಎರಡು ದೋಣಿಗಳನ್ನು ಕಟ್ಟಿ ಅದರಲ್ಲಿ ದೇವರ ಮೂರ್ತಿಯನ್ನಿಟ್ಟು ಆ ದಡಕ್ಕೆ ಏಳು ಸುತ್ತು ತಿರುಗಿ ಹೋಗುತ್ತದೆ. ಅಲ್ಲಿ ಪೂಜೆ ಸ್ವೀಕರಿಸಿ ಮತ್ತೆ ಏಳು ಸುತ್ತು ತಿರುಗಿ ಮೂಲದಡಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಎರಡೂ ದಡದ ಮೇಲಿರುವ ಗಿಡಮರಗಳಿಗೆಲ್ಲಾ ವಿದ್ಯುತ್ ದೀಪಗಳ ಅಲಂಕಾರ. ಅದರಂತೆ ಸೇತುವೆಗೂ ಕೂಡ. ಜತೆಗೆ ಸುಮಾರು ಒಂದು ಲಕ್ಷರೂಪಾಯಿಗಳಷ್ಟು ಸಿಡಿಮದ್ದುಗಳನ್ನು ಸುಡುತ್ತಾರೆ. ಇದನ್ನು ನೋಡಲು ನದಿಯ ಎರಡೂ ದಡಗಳಲ್ಲಿ ಕಾಲಿಡಲು ಸಾಧ್ಯವಿಲ್ಲದಂತೆ ಜನ ಸೇರಿರುತ್ತಾರೆ. ಊರಿನ ಜನರಷ್ಟೇ ಅಲ್ಲದೆ ಶೃಂಗೇರಿ ಶಿವಮೊಗ್ಗ ಮೊದಲಾದ ಕಡೆಗಳಿಂದ ಸಾವಿರಾರು ಜನ ಬಂದು ಸೇರುತ್ತಾರೆ. ನನ್ನ ರಥಬೀದಿ ರಾತ್ರೆ ಎರಡು ಗಂಟೆಯಾದರೂ ವಿಶ್ರಮಿಸಿಕೊಳ್ಳದೆ ಚಟುವಟಿಕೆಗಳಿಂದ ಕೂಡಿರುತ್ತದೆ.

ಊರು ಕೆಲವು ಸತ್ ಸಂಪ್ರದಾಯಗಳನ್ನು ರೂಡಿಸಿಕೊಂಡಿದೆ. ಪರಸ್ಠಳದಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಈ ಮೂರುದಿನಗಳಲ್ಲಿ ಉಚಿತ ಊಟವನ್ನು ದೇವಸ್ಥಾನದ ಬಳಿ ಒದಗಿಸುತ್ತಿದೆ. ಇದಕ್ಕೆ ಜನ ಕೈತುಂಬಾ ಧಾರಾಳವಾಗಿ ದಾನ ನೀಡುತ್ತಾರೆ. ಹೋಟೆಲಿನಲ್ಲಿ ಅಧಿಕ ಹಣಕೊಟ್ಟು ಊಟ ಮಾಡುವುದಕ್ಕಿಂತ ಈ ಊಟ ಎಷ್ಟೋ ಮೇಲಾಗಿರುತ್ತದೆ. ರಥೋತ್ಸವದ ದಿನ ಸುಮಾರು ಆರುಸಾವಿರದಷ್ಟು ಜನ ಊಟ ಮಾಡಿದ್ದಾರೆ.  ನಡು ,ಮಧ್ಯಾಹ್ನದ ಹೊತ್ತು ಅಲ್ಲಲ್ಲಿ ಉಚಿತ ಪಾನಕ ಸೇವೆಯನ್ನು ಕೆಲವರು ಏರ್ಪಡಿಸುತ್ತಾರೆ. ಶುದ್ಧವಾದ ನೀರಿನಿಂದ ಬೆಲ್ಲ, ಕಾಳಮೆಣಸು ಹಾಕಿ ಹೊಟ್ಟೆಗೆ ತಂಪಾಗುವ ಹಾಗೆ ರಸ್ತೆಯಲ್ಲಿ ಹೋಗಿಬರುವವರಿಗೆಲ್ಲರಿಗೂ ಒತ್ತಾಯ ಪೂರ್ವಕವಾಗಿ ಕುಡಿಸುತ್ತಾರೆ. ಇಂತಹ ಪಾನಕಸೇವಾ ಕೇಂದ್ರಗಳು ಈ ಬಾರಿ ಮೂರು ಇತ್ತು.

ದಾರಿಯುದ್ದಕ್ಕೂ ವ್ಯಾಪಾರಿಗಳ ಅರಚಾಟ, ಚಿಕ್ಕಮಕ್ಕಳ ಕೈಯಲ್ಲಿ ಇದ್ದ ಪೀಪಿಗಳ ಶಬ್ದಗಳಿಂದ ಕಿವಿ ಕಿವುಡಾಗಿ ಹೋಗುತ್ತದೆ. ಆದರೆ ಜಾತ್ರೆಯೆಂದರೆ ಇದೇ ಗೌಜಿ ಗದ್ದಲದ ಗೂಡಲ್ಲವೇ. ಇಂತಹ ಸಮಯದಲ್ಲಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ. ನಾನಂತೂ ಮೊಮ್ಮಗನ ಜತೆಯಲ್ಲಿ ಎಷ್ಟು ಬಾರಿ ತಿರುಗಿದ್ದೇನೆ ಎಂದು ಲೆಕ್ಕವಿಟ್ಟಿಲ್ಲ. ಈಗ ರಥ ಮೌನವಾಗಿ ಗಂಭೀರವಾಗಿ ತನ್ನ ಕೊಟ್ಟಿಗೆಯಲ್ಲಿ ನಿಂತುಕೊಂಡಿದೆ. ರಥಬೀದಿಯಲ್ಲಿ ಹರಡಿಕೊಂಡಿದ್ದ ಅಂಗಡಿಗಳು ಬೇರೆ ಊರಿಗೆ ಹೋಗಿವೆ. ಜನಸಂಚಾರ ಮೊದಲಿನ ಹಾಗೆ ಇಲ್ಲದಿದ್ದರೂ ಮಾಮೂಲಿಯಾಗಿಲ್ಲ. ಇನ್ನೂ ಇರುವ ಅಂಗಡಿಗಳಲ್ಲಿ ಜನಸೇರುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಮುತ್ತಿಕ್ಕುವ ಜನ ಇನ್ನೂ ಕಡಮೆಯಾಗಿಲ್ಲ. ಮತ್ತೆ ನನ್ನ ರಥಬೀದಿ ಮದುವಣಗಿತ್ತಿಯಂತೆ ಸಂಭ್ರಮಿಸಬೇಕಾದರೆ ಇನ್ನೂ ಹನ್ನೊಂದು ತಿಂಗಳು ಕಾಯಬೇಕು. ಈ ಬಾರಿ ಡಿಸೆಂಬರ್ ೨೫ಕ್ಕೆ ಎಳ್ಳಾಮಾವಾಸ್ಯೆ. ಅಲ್ಲಿಯವರೆಗೆ ಮೆಲಕು ಹಾಕುತ್ತಲೇ ಇರಬೇಕು ಮತ್ತು ಇನ್ನೂ ಒಂದು ರಥೋತ್ಸವಕ್ಕೆ ಕಾಯಬೇಕು. ಕಾಯವುದರಲ್ಲಿಯೇ ಸೊಗಸಿದೆ.

Saturday, January 1, 2011

ಕುವೆಂಪು -೧೦೬

ಕಳೆದ ವಾರ ೨೯ರಂದು ಕುವೆಂಪುರವರ ೧೦೬ರ ಜನ್ಮ ದಿನದ ಆಚರಣೆಯ ಸಂಭ್ರಮ ಕುಪ್ಪಳಿಯಲ್ಲಿ ನಡೆಯಿತು. ಬೆಳಿಗ್ಯೆ ಹತ್ತೂವರೆಗೆ ಕುವೆಂಪು ಸಮಾಧಿಗೆ ಪುಷ್ಪಾರ್ಚನೆಯಾದನಂತರ ಹೇಮಾಂಗಣದಲ್ಲಿ ಸಭೆ ನಡೆಯಿತು. ಚಂಪಾ, ಡಾ.ಮೋಹನ ಆಳ್ವ. ಬಾರಿ, ಕುಲಪತಿಗಳು, ಕುವೆಂಪು ವಿವಿ ಮೊದಲಾದವರು ಉಪಸ್ಥಿತರಿದ್ದರು. ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳು ಪ್ರಕಾಶ ಸ್ವಾಗತ ಮಾಡಿದರು. ಕಡಿದಾಳು ಪ್ರಕಾಶ ಮಿತಭಾಷಿ ಮತ್ತು ಜೇನ್ನೊಣದಂತೆ ಕೆಲಸಮಾಡುವವರು. ಸ್ವಾಗತವಾಗಲೀ  ಅಥವಾ ಬೇರೆ ಭಾಷಣವಾಗಲೀ ಹೆಚ್ಚು ಮಾತನಾಡುವವರಲ್ಲ. ಹಾಗಾಗಿ ಅವರ ಮಾತು ಕೇಳಲು ಹಿತವಾಗುತ್ತದೆ. ಉದ್ಘಾಟನಾ ಭಾಷಣ ಮಾಡಿದ ಚಂಪಾ ಎಂದಿನ ಶೈಲಿಯಲ್ಲಿ ವ್ಯಂಗ್ಯ ಮೊನಚುಗಳಿಂದಲೇ ಮಾತು ಪ್ರಾರಂಭಿಸಿದರು. ಅನಗತ್ಯವಾಗಿ ಲೋಕದ ಕುರಿತು ಟೀಕೆಗಳನ್ನು ಮಾಡಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ಪಡೆದವರು ಮತ್ತು ಹೊಡೆದುಕೊಂಡವರು ಎಂದು ವ್ಯಂಗ್ಯದ ಮಾತನ್ನಾಡಿದರು. ಆಳ್ವರು ಶಿಸ್ತಿನಿಂದ ಭಾಷಣವನ್ನು ಬರೆದುಕೊಂಡು ಬಂದಿದ್ದು ಅದನ್ನು ಚೆನ್ನಾಗಿಯೇ ಓದಿದರು. ಪ್ರತಿ ವರ್ಷವೂ ತನ್ನ ವಿದ್ಯಾರ್ಥಿಗಳನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ ಎಂದು ಆಶ್ವಾಸನೆ ನೀಡಿದರು. ಬಾರಿ, ಕುಲಪತಿಗಳು ಕುವೆಂಪು ವಿವಿ, ಕನ್ನಡದಲ್ಲಿ ಸ್ವಲ್ಪ ಕಷ್ಟದಿಂದ ಮಾತನಾಡಿದರು. ಆದರೆ ಹಿಂದಿನ ಕುಲಪತಿಗಳಿಗಿಂತ ಚೆನ್ನಾಗಿಯೇ ಮಾತನಾಡಿದರು. ಅವರ ಸ್ಥಾನಮಾನಕ್ಕನುಗುಣವಾಗಿ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಕುವೆಂಪುರವರ ಕುರಿತು ಫ್ರೌಡ ಪ್ರಬಂಧ ಬರೆದ ಸುಮಾರು ೧೭ ಜನರಿಗೆ ಸನ್ಮಾನ ಮಾಡಿ ಗೌರವಿಸಿದರು. ಪ್ರೊ.ಹೆಚ್.ಜೆ.ಲಕ್ಕಪ್ಪ ಗೌಡ, ಮಳಲಿ ವಸಂತ ಕುಮಾರ‍್ರಿಂದ ಪ್ರಾರಂಭಿಸಿ ಸುಮಾರು ೧೭ ಜನರಿದ್ದರು.

ಮಧ್ಯಾಹ್ನದ ಗೋಷ್ಠಿ ಮಾತ್ರ ನನಗೆ ಹಿಂಸೆಯನ್ನೇ ನೀಡಿತು. ಬಹುಶಃ ಕಳೆದ ಎರಡು ವರ್ಷಗಳಿಂದ ಇಂತಹ ಸೆಮಿ ನಾರುಗಳಿಗೆ  ನಾನು ಹಾಜರಾಗದೇ ಇರುವುದು ಕಾರಣವೇನೋ. ಮನುಶ್ಯರಿಗೆ ಅರ್ಥವಾಗುವ ಹಾಗೆ ಮಾತನಾಡದೇ, ಎಂದಿನ ಸೆಮಿನಾರ್ ಭಾಷೆಯಲ್ಲಿ ಮಾತನಾಡಿದ್ದು ಮತ್ತೂ ಒಂದು ಕಾರಣ. ಇದು ನನ್ನ ದೋಷವೂ ಇರಬಹುದು. ಸಹಜವಾಗಿ ಸರಳವಾಗಿ ಮಾತನಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲವಲ್ಲ ಎಂದು ಆಶ್ಚರ್ಯವೂ ಆಯಿತು.

ಮನಸ್ಸಿಗೆ ಬಹಳ ಸಂತೋಷವನ್ನು ನೀಡಿದ ಕಾರ್ಯಕ್ರಮವೆಂದರೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ. ಹೊಸಬಾಳೆ ಸೀತಾರಾಮರಾಯರು ಸುಮಾರು ಹದಿನೈದು ನಿಮಿಷಗಳ ಕಾಲ ರಾಮಾಯಣ ದರ್ಶನಂ ವನ್ನು ಗಮಕ ರೀತಿಯಲ್ಲಿ ಹಾಡಿ ತೋರಿಸಿದರು. ಅವರಿಗೆ ಈಗ ೮೧ರ ಪ್ರಾಯ. ನೆನಪು ಮಾತ್ರ ಗಟ್ಟಿಯಾಗಿದೆ. ಕಣ್ಣೆದುರು ಕೃತಿಯನ್ನು ಇಟ್ಟುಕೊಳ್ಳದೆ ಕೇವಲ ಸ್ಮೃತಿಯಿಂದಲೇ ಹಾಡಿದ್ದು ನನಗೆ ವಿಶೇಷವಾಗಿ ಕಂಡಿತು. ಅನಂತರ ಬೆಂಗಳೂರಿನ ಕಲಾತೀರ ಸಂಸ್ಠೆಯ ಉದಯಕುಮಾರ್ ಶೆಟ್ಟಿಯವರಿಂದ ಕುವೆಂಪು ಗೀತ ನೃತ್ಯ ಕಾರ್ಯಕ್ರಮ ನಡೆಯಿತು. ಸುಮಾರು ಎಂಟು ಹಾಡುಗಳಿಗೆ ನೃತ್ಯವನ್ನು ಅಳವಡಿಸಿದ್ದರು. ಬಹಳ ಚೆನ್ನಾಗಿ ಮೂಡಿಬಂದಿತ್ತು.

ಈಗ ಈ ವಾರ ನನ್ನ ರಥಬೀದಿಯಲ್ಲಿ ಜಾತ್ರೆಯ ಗೌಜಿ. ಕೊಟ್ಟಿಗೆಯಲ್ಲಿದ್ದ ರಥ ಹೊರಗೆ ಬಂದಿದೆ. ಅದಕ್ಕೆ ಬಾವುಟಗಳನ್ನು ಏರಿಸುತ್ತಿದ್ದಾರೆ. ರಥಬೀದಿಯ ಎರಡೂ ಬದಿಯಲ್ಲಿ ಅಂಗಡಿಗಳನ್ನು ಇಡಲು ಎಲ್ಲಿಂದಲೋ ವ್ಯಾಪಾರಿಗಳು ತುಂಬು ನಿರೀಕ್ಷೆಯನ್ನು ಇಟ್ಟುಕೊಂಡು ತಮ್ಮ ವಸ್ತುಗಳನ್ನು ಹೊಂದಿಸಿ ಇಡುತ್ತಿದ್ದಾರೆ. ಇನ್ನೆರೆಡು ದಿನಗಳಲ್ಲಿ ರಸ್ತೆಯಲ್ಲಿ ಕಾಲಿಡಲು ತೆರಪಿಲ್ಲದಂತೆ ಜನ ಸೇರುತ್ತಾರೆ. ವರ್ಷಕ್ಕೊಮ್ಮೆ ಬರುವ ಜಾತ್ರೆಯಲ್ಲಿ ನಾನೂ ನನ್ನ ಮೊಮ್ಮಗನೂ ತಿರುಗಬೇಕು. ಮಗು ಕಣ್ಣತುಂಬಾ ಆಸೆಯನ್ನಿಟ್ಟುಕೊಂಡು ಕಾಯುತ್ತಿದೆ.

ವಾರದ ಓದು:೧. ನೆನಪುಗಳು: ವಾಸುದೇವಾಚಾರ್ಯ (ಪು೧೦೯) ಮತ್ತು ಸಂಗೀತ ರಸನಿಮಿಷಗಳು -ಜಿಟಿನಾ(ಪು೧೭೫)