ತಕಿಟ ತಕಿಟ ಧೋಂ

Sunday, January 9, 2011

ಜಾತ್ರೆಯ ದಿನಗಳು

ಜಾತ್ರೆಯ ದಿನಗಳು

ಜಾತ್ರೆ ಮುಗಿದು ಎರಡು ದಿನಗಳು ಕಳೆದಿವೆ. ಊರು ಇನ್ನೂ ಅದರ ಅಮಲಿನಲ್ಲಿಯೇ ಇದೆ. ಸಂಜೆಯ ಹೊತ್ತು ಜನ ಇನ್ನೂ ತಿರುಗಾಡುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ. ಇನ್ನು ಒಂದು ವಾರದಲ್ಲಿ ಸಂಕ್ರಮಣದ ರಥೋತ್ಸವವಿದೆ. ಅಲ್ಲಿಯವರೆಗೆ ಬಹುಷಃ ಇದೇ ಗುಂಗಿನಲ್ಲಿ ಜನರು ಇರಬಹುದೇನೋ. ನನ್ನೂರಿನ ಮಕ್ಕಳು ಕಾಯುವುದೆಂದರೆ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ರಾಮಮಂಟಪ ಮುಳಗಬೇಕು. ಅಂದರೆ ರಜೆ ಗ್ಯಾರಂಟಿ. ಮತ್ತು ಎಳ್ಳಾಮಾವಾಸ್ಯೆಯ ಜಾತ್ರೆಗೆ. ಎರಡೂ ಲಾಭದಾಯಕ ದಿನಗಳೇ. ಮಳೆಗಾಲದ ರಜೆ ಸಿಕ್ಕಾಗ ನೆರೆ ಬಂದಕಡೆಯಲ್ಲಿ ತಿರಬಹುದು. ನೀರು ಎಷ್ಟು ಬಂದಿದೆ ಎಂದು ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರಬಹುದು. ಇಂತಹ ದಿನವೂ ಜಾತ್ರೆಯ ದಿನವಿದ್ದಂತೆ. ಊರಿನ ಎಲ್ಲಾ ಜನರೂ ತಮ್ಮ ವಾಹನಗಳನ್ನೇರಿ ತಿರುಗಾಡುತ್ತಿರುತ್ತಾರೆ.  ನೆರೆಯಿಂದಾಗಿ ಊರಿನ ಸಂಪರ್ಕರಸ್ತೆಗಳೆಲ್ಲವೂ ಮುಚ್ಚಿಹೋದರೂ ಚಕ್ರವ್ಯೂಹದಲ್ಲಿ ತಿರುಗಿದಂತೆ ನಾವೂ ಊರು ತುಂಬಾ ತಿರುಗುತ್ತಿರುತ್ತೇವೆ. ಈ ಬಾರಿ ಮಳೆಗಾಲ ಕೈಕೊಟ್ಟಿತು. ಮಳೆ ಬಂದರೂ ರಾಮಮಂಟಪ ಮುಳಗಲೇ ಇಲ್ಲ. ಹುಡುಗರ ಬೇಸರಕ್ಕೆ ಮಿತಿಯೇ ಇರಲಿಲ್ಲ.

ಜಾತ್ರೆ ಈ ಬಾರಿ ಕೈಕೊಡಲಿಲ್ಲ. ಗಾಢವಲ್ಲದ ಆದರೆ ಹಿತವಾದ ಚಳಿಯಿತ್ತು. ಅಮಾವಾಸ್ಯೆಯದಿನ ಪವಿತ್ರ ಸ್ನಾನಕ್ಕಾಗಿ ಜನ ಸಾಲುಸಾಲಾಗಿ ನಿಂತುಕೊಂಡಿದ್ದರು. ನನ್ನೂರಿಗೆ ಒಂದು ಪೌರಾಣಿಕ ಹಿನ್ನೆಲೆಯಿದೆ. ತಂದೆಯ ಆಜ್ಞೆಯಂತೆ ತನ್ನ ತಾಯಿಯ ತಲೆಕಡಿದ ಪರುಶರಾಮನಿಗೆ ಪಾಪಪ್ರಜ್ಞೆ ಬಂದಿತಂತೆ . ಮೇಲಾಗಿ ಅವನ ಕೊಡಲಿಗೆ ಅಂಟಿಕೊಂಡಿದ್ದ ರಕ್ತ ಯಾವ ನದಿಯ ನೀರಿನಿಂದಲೂ ತೊಳೆಯಲಾಗಲಿಲ್ಲವಂತೆ. ತಿರುಗುತ್ತಾ ತಿರುಗುತ್ತಾ ಎಳ್ಳಾಮಾವಾಸ್ಯೆಯ ದಿನ ನನ್ನೂರಿಗೆ ಬಂದು ಅಲ್ಲಿ ಕೊಡಲಿಯನ್ನು ತೊಳೆದಾಗ  ಅಂಟಿಕೊಂಡಿದ್ದ ರಕ್ತವೆಲ್ಲಾ ತೊಳೆದುಹೋಗಿ ಶುಭ್ರವಾಗಿ ಹೊಳೆಯಿತಂತೆ. ಅಲ್ಲೇ ಒಂದು ಶಿವಲಿಂಗವನ್ನು ಸ್ಥಾಪಿಸಿ , ಪೂಜೆಮಾಡಿದನಂತೆ ಪರುಶರಾಮ. ಆ ಸ್ಠಳವೀಗ ರಾಮಕುಂಡವೆಂದು ಪ್ರಸಿದ್ಧವಾಗಿದೆ. ಅಲ್ಲೇ ಇರುವ ಶಿವಲಿಂಗಕ್ಕೆ ಒಂದು ಮಂಟಪ ಕಟ್ಟಲಾಗಿದೆ. ರಾಮಮಂಟಪವೆಂದು ಇದರ ಹೆಸರು. ನದಿಯ ದಡದಲ್ಲಿಯೇ ಶ್ರೀ ರಾಮೇಶ್ವರ ದೇವಸ್ಠಾನವಿದೆ. ಈ ದೇವರಿಗೆ ರಥೋತ್ಸವದ ಸಂಭ್ರಮ ಎಳ್ಳಾಮಾವಾಸ್ಯೆಯ ಮರುದಿನ.
ಅಮಾವಾಸ್ಯೆಯದಿನ ಸ್ನಾನ. ಆ ದಿನ ಅಲ್ಲಿ ಸ್ನಾನ ಮಾಡಿದರೆ ಆವರೆಗಿನ ಪಾಪಗಳೆಲ್ಲವೂ ಪರಿಹಾರವಾಗಿ ಹೊಸ ಪಾಪಗಳನ್ನು ಮಾಡಲು ಪ್ರಾರಂಭಿಸಬಹುದಂತೆ. ಮಾರನೆಯ ದಿನ ರಥೋತ್ಸವ. ಮೂರನೇಯ ದಿನ ತೆಪ್ಪೋತ್ಸವ. ಎರಡು ದೋಣಿಗಳನ್ನು ಕಟ್ಟಿ ಅದರಲ್ಲಿ ದೇವರ ಮೂರ್ತಿಯನ್ನಿಟ್ಟು ಆ ದಡಕ್ಕೆ ಏಳು ಸುತ್ತು ತಿರುಗಿ ಹೋಗುತ್ತದೆ. ಅಲ್ಲಿ ಪೂಜೆ ಸ್ವೀಕರಿಸಿ ಮತ್ತೆ ಏಳು ಸುತ್ತು ತಿರುಗಿ ಮೂಲದಡಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಎರಡೂ ದಡದ ಮೇಲಿರುವ ಗಿಡಮರಗಳಿಗೆಲ್ಲಾ ವಿದ್ಯುತ್ ದೀಪಗಳ ಅಲಂಕಾರ. ಅದರಂತೆ ಸೇತುವೆಗೂ ಕೂಡ. ಜತೆಗೆ ಸುಮಾರು ಒಂದು ಲಕ್ಷರೂಪಾಯಿಗಳಷ್ಟು ಸಿಡಿಮದ್ದುಗಳನ್ನು ಸುಡುತ್ತಾರೆ. ಇದನ್ನು ನೋಡಲು ನದಿಯ ಎರಡೂ ದಡಗಳಲ್ಲಿ ಕಾಲಿಡಲು ಸಾಧ್ಯವಿಲ್ಲದಂತೆ ಜನ ಸೇರಿರುತ್ತಾರೆ. ಊರಿನ ಜನರಷ್ಟೇ ಅಲ್ಲದೆ ಶೃಂಗೇರಿ ಶಿವಮೊಗ್ಗ ಮೊದಲಾದ ಕಡೆಗಳಿಂದ ಸಾವಿರಾರು ಜನ ಬಂದು ಸೇರುತ್ತಾರೆ. ನನ್ನ ರಥಬೀದಿ ರಾತ್ರೆ ಎರಡು ಗಂಟೆಯಾದರೂ ವಿಶ್ರಮಿಸಿಕೊಳ್ಳದೆ ಚಟುವಟಿಕೆಗಳಿಂದ ಕೂಡಿರುತ್ತದೆ.

ಊರು ಕೆಲವು ಸತ್ ಸಂಪ್ರದಾಯಗಳನ್ನು ರೂಡಿಸಿಕೊಂಡಿದೆ. ಪರಸ್ಠಳದಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಈ ಮೂರುದಿನಗಳಲ್ಲಿ ಉಚಿತ ಊಟವನ್ನು ದೇವಸ್ಥಾನದ ಬಳಿ ಒದಗಿಸುತ್ತಿದೆ. ಇದಕ್ಕೆ ಜನ ಕೈತುಂಬಾ ಧಾರಾಳವಾಗಿ ದಾನ ನೀಡುತ್ತಾರೆ. ಹೋಟೆಲಿನಲ್ಲಿ ಅಧಿಕ ಹಣಕೊಟ್ಟು ಊಟ ಮಾಡುವುದಕ್ಕಿಂತ ಈ ಊಟ ಎಷ್ಟೋ ಮೇಲಾಗಿರುತ್ತದೆ. ರಥೋತ್ಸವದ ದಿನ ಸುಮಾರು ಆರುಸಾವಿರದಷ್ಟು ಜನ ಊಟ ಮಾಡಿದ್ದಾರೆ.  ನಡು ,ಮಧ್ಯಾಹ್ನದ ಹೊತ್ತು ಅಲ್ಲಲ್ಲಿ ಉಚಿತ ಪಾನಕ ಸೇವೆಯನ್ನು ಕೆಲವರು ಏರ್ಪಡಿಸುತ್ತಾರೆ. ಶುದ್ಧವಾದ ನೀರಿನಿಂದ ಬೆಲ್ಲ, ಕಾಳಮೆಣಸು ಹಾಕಿ ಹೊಟ್ಟೆಗೆ ತಂಪಾಗುವ ಹಾಗೆ ರಸ್ತೆಯಲ್ಲಿ ಹೋಗಿಬರುವವರಿಗೆಲ್ಲರಿಗೂ ಒತ್ತಾಯ ಪೂರ್ವಕವಾಗಿ ಕುಡಿಸುತ್ತಾರೆ. ಇಂತಹ ಪಾನಕಸೇವಾ ಕೇಂದ್ರಗಳು ಈ ಬಾರಿ ಮೂರು ಇತ್ತು.

ದಾರಿಯುದ್ದಕ್ಕೂ ವ್ಯಾಪಾರಿಗಳ ಅರಚಾಟ, ಚಿಕ್ಕಮಕ್ಕಳ ಕೈಯಲ್ಲಿ ಇದ್ದ ಪೀಪಿಗಳ ಶಬ್ದಗಳಿಂದ ಕಿವಿ ಕಿವುಡಾಗಿ ಹೋಗುತ್ತದೆ. ಆದರೆ ಜಾತ್ರೆಯೆಂದರೆ ಇದೇ ಗೌಜಿ ಗದ್ದಲದ ಗೂಡಲ್ಲವೇ. ಇಂತಹ ಸಮಯದಲ್ಲಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ. ನಾನಂತೂ ಮೊಮ್ಮಗನ ಜತೆಯಲ್ಲಿ ಎಷ್ಟು ಬಾರಿ ತಿರುಗಿದ್ದೇನೆ ಎಂದು ಲೆಕ್ಕವಿಟ್ಟಿಲ್ಲ. ಈಗ ರಥ ಮೌನವಾಗಿ ಗಂಭೀರವಾಗಿ ತನ್ನ ಕೊಟ್ಟಿಗೆಯಲ್ಲಿ ನಿಂತುಕೊಂಡಿದೆ. ರಥಬೀದಿಯಲ್ಲಿ ಹರಡಿಕೊಂಡಿದ್ದ ಅಂಗಡಿಗಳು ಬೇರೆ ಊರಿಗೆ ಹೋಗಿವೆ. ಜನಸಂಚಾರ ಮೊದಲಿನ ಹಾಗೆ ಇಲ್ಲದಿದ್ದರೂ ಮಾಮೂಲಿಯಾಗಿಲ್ಲ. ಇನ್ನೂ ಇರುವ ಅಂಗಡಿಗಳಲ್ಲಿ ಜನಸೇರುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಮುತ್ತಿಕ್ಕುವ ಜನ ಇನ್ನೂ ಕಡಮೆಯಾಗಿಲ್ಲ. ಮತ್ತೆ ನನ್ನ ರಥಬೀದಿ ಮದುವಣಗಿತ್ತಿಯಂತೆ ಸಂಭ್ರಮಿಸಬೇಕಾದರೆ ಇನ್ನೂ ಹನ್ನೊಂದು ತಿಂಗಳು ಕಾಯಬೇಕು. ಈ ಬಾರಿ ಡಿಸೆಂಬರ್ ೨೫ಕ್ಕೆ ಎಳ್ಳಾಮಾವಾಸ್ಯೆ. ಅಲ್ಲಿಯವರೆಗೆ ಮೆಲಕು ಹಾಕುತ್ತಲೇ ಇರಬೇಕು ಮತ್ತು ಇನ್ನೂ ಒಂದು ರಥೋತ್ಸವಕ್ಕೆ ಕಾಯಬೇಕು. ಕಾಯವುದರಲ್ಲಿಯೇ ಸೊಗಸಿದೆ.

No comments:

Post a Comment