ತಕಿಟ ತಕಿಟ ಧೋಂ

Thursday, December 30, 2010

ತಕಿಟ ತಕಿಟ ಧೋಂ 


ಕಳೆದ ವಾರ ಹೀಗೆ ಸುಮ್ಮನೇ ಕರಗಿಹೋಗಿಲ್ಲವೆನ್ನುವುದೇ ಒಂದು ಸಮಾಧಾನ. ಇಲ್ಲಿ ನನ್ನೂರಿನಲ್ಲಿ ಅಂತಹ ಹೇಳಿಕೊಳ್ಳುವ ಕಾರ್ಯಕ್ರಮಗಳು ನಡೆಯುವುದೇ ವಿರಳ. ಚಾತಕ ಪಕ್ಷಿಯಂತೆ ಎಲ್ಲಿಯಾದರೂ ಯಾವುದಾದರೂ ಒಳ್ಳೆಯ ಕಾರ್ಯಕ್ರಮಗಳು ನಡೆಯಬಹುದೇ ಎಂದು ಕಣ್ಣು ಕಿವಿಗಳು ಹಪಹಪಿಸುತ್ತಿರುತ್ತವೆ. ಏನೂ ಇಲ್ಲದೆಯೂ ಬದುಕಬಹುದು ಎನ್ನುವುದು ಸತ್ಯ. ಆದರೂ ಮನಸ್ಸಿಗೆ ಕೆಲವೊಮ್ಮೆ ಬೇಸರ ಕವಿದುಕೊಂಡಾಗ , ಈ ಮಬ್ಬನ್ನು ಕಳೆಯುವ ಯಾವುದಾದರೂ ಒಂದು ಏನಾದರೂ  ಒಂದರ ಅಗತ್ಯವಿರುತ್ತದೆ. ಈ ವಾರ ಅಂತಹದೊಂದು ಅವಕಾಶ ಒದಗಿ ಬಂದಿತು. 


ಓಡಿಹೋದ ಚಳಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಂತೆ ಅಲ್ಲ  .ಮೈಯನ್ನು ಗಡಗಡ ನಡುಗಿಸುವ ಚಳಿ ಕಾಣಿಸಿಕೊಂಡಿಲ್ಲ. ಆದರೆ ಇದೆ. ಸಂಜೆಯಾಗುತ್ತಲೇ ದೇಹವಿಡೀ ತಂಪಾಗುವ ಹಾಗೆ., ಮನೆಯ ನೆಲವೆಲ್ಲಾ ತಣ್ಣಗಾಗುವ ಹಾಗೆ, ಚಳಿ ಕಾಣಿಸಿಕೊಂಡಿದೆ. ಕಂಬಳಿ ಹೊದ್ದು ಮಲಗುವ ಅಭ್ಯಾಸವೇ ಇಲ್ಲದ ನಾನು ಈಗ ಅದನ್ನು ದಿನನಿತ್ಯ ಹೊದ್ದು ಮಲಗಬೇಕಾಗಿದೆ. ಇಬ್ಬನಿ ಮಾತ್ರ ಕಾಣಿಸುತ್ತಿಲ್ಲ. ಇಬ್ಬನಿ ಇಲ್ಲದಿದ್ದರೆ ಮುಂದಿನ ವರುಷ ಮಳೆ ಕಡಮೆಯಾಗುವುದಂತೆ. 


ಮೊನ್ನೆ ಬುಧವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮ ನಡೆಯಿತು. ಇಲ್ಲಿನ ಏಕತಾನತೆಗೆ ಬೇಸತ್ತು ಗೆಳೆಯರೊಡನೆ ಕಾರಿನಲ್ಲಿ ಅಲ್ಲಿಗೆ ಹೊರಟೆವು. ಸುಮಾರು ಇಪ್ಪತ್ತೆರೆಡು ತಬಲಾ ವಾದಕರು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡುವ ಕಾರ್ಯಕ್ರಮ "ತಬಲಾ ಫೀಲಿಯಾ". ಸದ್ಯಕ್ಕೆ ಅಮೆರಿಕಾದಲ್ಲಿರುವ ಸಮೀರ್ ಚಟರ್ಜಿ ತಮ್ಮ ಎಲ್ಲಾ ಶಿಷ್ಯರನ್ನು ಕರೆದುಕೊಂಡು ಬಂದು ಈ ಕಾರ್ಯಕ್ರಮ ನೀಡಿದ್ದರು. ಇವರಲ್ಲಿ ಎಂಟು ಜನ ವಿದೇಶಿಯರು, ಎಂಟು ಜನ ಪಶ್ಚಿಮ ಬಂಗಾಳದವರು ಮತ್ತು ಉಳಿದ ಆರು ಜನ ನಮ್ಮ ಕನ್ನಡಿಗರು. ಮೂರು ಸಾಲಿನಲ್ಲಿ ಕುಳಿತು ವಿಶಿಷ್ಟವಾದ ಸಂಗೀತ ಸಂಯೋಜನೆಯಿಂದ ಅದ್ಭುತವಾದ ಕಾರ್ಯಕ್ರಮ ನೀಡಿದರು. ಪ್ರಾರಂಭದಲ್ಲಿ ಶ್ರೀ ಅಶೋಕ ಹುಗ್ಗಣ್ಣವರ‍್ರವರ ಮತ್ತು ಶ್ರೀಮತಿ ಪಿಯು ಚಟರ್ಜಿಯವರ ಸಂಗೀತ ಕಾರ್ಯಕ್ರಮವಿತ್ತು. ನಂತರ ಒಂದು ಗಂಟೆಯ ಕಾಲ ತಬಲಾ ವಾದನ. ಮನುಷ್ಯನ ಬದುಕಿನ ನಾಲ್ಕು ಅವಸ್ಥೆಗಳಾದ -ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವೆಂಬ ಈ ನಾಲ್ಕು ಅವಸ್ಥೆಗಳನ್ನು ಸಂಗೀತದಲ್ಲಿ ಅಳವಡಿಸಿಕೊಂಡು ವಿಭಿನ್ನ ಸ್ವರಗಳಿಂದ ಅದನ್ನು ಮನದಟ್ಟಾಗುವಂತೆ ಕಾರ್ಯಕ್ರಮವನ್ನು ರೂಪಿಸಿದ್ದರು. ಆಶ್ಚರ್ಯವೆಂದರೆ ಪ್ರತಿಯೊಬ್ಬರ ಬಳಿಯಿದ್ದ ಒಂದೊಂದು ತಬಲಾವೂ ಒಂದೊಂದು ರೀತಿಯ ನಾದವನ್ನು ಹೊರಡಿಸುತ್ತಿತ್ತು. ಹಿನ್ನಲೆಯಲ್ಲಿ ಇಬ್ಬರು ಗಾಯಕಿಯರು ಮತ್ತು ಇಬ್ಬರು ಗಾಯಕರು ಸಹಕರಿಸಿದ್ದರು. ಉಪನಿಷತ್ತಿನ ಕೆಲವು ಶ್ಲೋಕಗಳನ್ನು  ಮತ್ತು ಆಲಾಪನೆಯನ್ನು  ಹಿತವಾಗಿ ಹಾಡುತ್ತಿದ್ದರು.   ಅಲ್ಲಿ ಕಳೆದ ಮೂರುಗಂಟೆ ವ್ಯರ್ಥವಾಗಲಿಲ್ಲವೆಂದೆನಿಸಿತು.  


ಮುಂದಿನ ವಾರ ನಮ್ಮ ಕುಪ್ಪಳ್ಳಿಗೆ ಹೋಗಬೇಕು.  ಕುವೆಂಪು ಹಬ್ಬವಿದೆ. (ಡಿ.೨೯ ಮತ್ತು ೩೦)


ಕಳೆದವಾರದ ಓದು. :೧. ಸಂಗೀತ ಜೀವನ ತಪಸ್ಯಾ: ದ.ಸ.ಗರುಡ .(೨೭೭ಪು). ೨. ಸಂಗೀತ ಸಮಯ : ಎಸ್.ಕೃಷ್ಣಮೂರ್ತಿ. (೩೪೯ಪು) . ೩. ಸಂಗೀತ ಸಾಮ್ರಾಜ್ಞಿ ಎಂ.ಎಸ್-ಸಾಕೃರಾಮಚಂದ್ರರಾವ್ (೧೦೬) ೪, ನಾ ಕಂಡ ಕಲಾವಿದರು-ವಾಸುದೇವಾಚಾರ್ಯ (೧೩೫ಪು) ೫, ನನ್ನ ರಸಯಾತ್ರೆ- ಮಲ್ಲಿಕಾರ್ಜುನ್ ಮನ್ಸೂರ್ (೧೧೨ಪು)

Friday, December 17, 2010

ಕಾಣದಂತೆ ಮಾಯವಾಯಿತು- ಚಳಿ

ಕಾಣದಂತೆ ಮಾಯವಾಯಿತು- ಚಳಿ.


ಈಗ ಹತ್ತು ಹನ್ನೆರೆಡು ದಿನಗಳಿಂದ ನನ್ನೂರಿಗೆ ಮಳೆಯಿಂದ ಮುಕ್ತಿ ಸಿಕ್ಕಿದೆ. ಕೃಷಿಕರೆಲ್ಲರೂ ನೆಮ್ಮದಿಯಿಂದ ತಮ್ಮ ಅಡಿಕೆ ಮತ್ತು ಗದ್ದೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಚಳಿಗಾಲದ ಆರಂಭದ ದಿನಗಳಲ್ಲಿ ಬೆಳಿಗ್ಗೆ ಎಂಟರವರೆಗೆ ಊರನ್ನು ಆವರಿಸಿಕೊಂಡಿದ್ದ ಚಳಿ ಮಾತ್ರ ಈಗ ಎರಡು ದಿನಗಳಿಂದ ಕಾಣೆಯಾಗಿದೆ. ಬೆಳಿಗ್ಗೆ ಆರರವರೆಗೆ ಮಾತ್ರ ಸ್ವಲ್ಪ ಇಬ್ಬನಿ ಕಾಣಿಸಿಕೊಂಡರೂ ನಂತರ ಪೂರ್ಣವಾಗಿ ಮಾಯವಾಗಿ ಹೋಗಿಬಿಡುತ್ತದೆ. ಚಳಿ ಕಡಮೆಯಾದರೆ , ಇಬ್ಬನಿ ಸುರಿಯುವುದು ಕಡಮೆಯಾದರೆ ಮುಂದಿನ ವರ್ಷ ಮಳೆ ಕಡಮೆ ಎಂಬ ನಂಬಿಕೆ ಇಲ್ಲಿಯವರದು. ಕಳೆದ ವರ್ಷ ಚಳಿಗಾಲವೇ ಇರಲಿಲ್ಲ. ಕೇವಲ ಐದು ದಿನ ಮಾತ್ರ ಚಳಿ ಕಾಡಿತ್ತು. ಜಾತ್ರೆಯ ಸಮಯ ಕಂಬಳಿಯ ರಾಶಿ ಹೊತ್ತು ಕೊಂಡು ಬಂದವರು ನಿರಾಶರಾಗಿ ಹಾಗೆಯೇ ಆ ರಾಶಿಯನ್ನು ಹೊತ್ತುಕೊಂಡು ಮರಳಿ ತಮ್ಮೂರಿಗೆ ಹೋಗಿದ್ದರು. ಈ ಬಾರಿಯೂ ಹೀಗೇ ಆಗಬಹುದು ಎಂಬ ನಿರೀಕ್ಷೆ ಎಲ್ಲರದೂ. 


ಜಾತ್ರೆ ಬರುತ್ತಿದೆ. ಎಳ್ಳಮಾವಸ್ಯೆಯ ಸ್ನಾನ ಮಾಡಲು ಎಲ್ಲಾ ಪಾಪಿಗಳೂ ಸಿದ್ಧರಾಗುತ್ತಿದ್ದಾರೆ. ಆ ದಿನ ರಾಮಕುಂಡದಲ್ಲಿ ಮುಳುಗಿದರೆ ಸರ್ವ ಪಾಪವೂ ಪರಿಹಾರವಾಗುತ್ತದೆ ಎಂಬ ವಿಶ್ವಾಸ ಊರಜನರಲ್ಲಿದೆ. ಹಾಗಾಗಿ ಬೆಳಿಗ್ಯೆ ಎಲ್ಲರೂ ಸರದಿಯಲ್ಲಿ ಒಂದು ಮುಳುಗು ಹಾಕಲು ನಿಂತಿರುತ್ತಾರೆ. ಒಂದೇ ಮುಳುಗು ಮಾತ್ರ. ಏಕೆಂದರೆ ಉಳಿದ ಪಾಪಿಗಳಿಗೂ ಅವಕಾಶ ಸಿಗಬೇಕಲ್ಲ. ಪೋಲಿಸ್ ಆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಇತ್ತ ಹರಿಯುವ ನದಿಯಲ್ಲಿ ನೀವು ಎಷ್ಟು ಹೊತ್ತು ಈಜಾಡಿದರೂ ಚಿಂತಿಲ್ಲ. ಆದರೆ ರಾಮಕುಂಡದಲ್ಲಿ ಆ ದಿನ ಒಂದೇ ಮುಳುಗು.  ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ನಾನೂ ಕಾಯುತ್ತಿದ್ದೇನೆ -ಮನೆಯ ಚಿಕ್ಕ ಮಕ್ಕಳ ಜತೆಯಲ್ಲಿ ಸೇರಿ ಬೀದಿ ತುಂಬಾ ತಿರುಗಬೇಕು. ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರು ಈಗಲೇ ತಮ್ಮ ತಮ್ಮ ವ್ಯಾಪಾರದ ಸ್ಥಳಗಳನ್ನು ಗುರುತಿಸಿಕೊಂಡು ಗಡಿ ನಿರ್ಧರಿಸಿ ತಮ್ಮ ಪತಾಕೆಯಂತೆ ಒಂದು ಹಗ್ಗವನ್ನು ಕಟ್ಟಿ ಹೋಗಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ತಮ್ಮ ವಸ್ತುಗಳನ್ನು ತಂದು ಅಲ್ಲಿ ಹರಡಿ ಬಾಯಿಗೆ ಕೆಲಸಕೊಡುತ್ತಾರೆ. ಅವರ ಅಂಗಡಿಗೆ ವ್ಯಾಪಾರಕ್ಕೆ ಬರುವ ಹಳ್ಳಿಗರ ಚೌಕಾಶಿ ನೋಡಲು ಬಹಳ ಖುಷಿಯಾಗುತ್ತದೆ. ವ್ಯಾಪಾರಿ ಹೇಳಿದ ಬೆಲೆಯನ್ನು ಯಾರೂ ಕೊಡುವುದೇ ಇಲ್ಲ. ಹಾಗೆ ಕೊಟ್ಟರೆ ಅವನು ಮಂಗ . ಅವನು ಹೇಳಿದ್ದಕ್ಕಿಂತ ಕಡಮೆ ಕೊಟ್ಟರೆ ಮಾತ್ರ ಅವನು ಬುದ್ಧಿವಂತನೆನಿಸಿಕೊಳ್ಳುತ್ತಾನೆ. 


ಕಳೆದ ವರ್ಷ ಹೀಗಾಯಿತು. ನನ್ನ ಗೆಳೆಯರೊಬ್ಬರ ಅಂಗಡಿಯ ಎದುರು ಒಬ್ಬ ವ್ಯಾಪಾರಿ ದೊಡ್ಡದೊಡ್ಡ ಪೋಸ್ಟರ‍್ಗಳನ್ನು ಹರಡಿಕೊಂಡು ಕುಳಿತುಕೊಂಡಿದ್ದ. ಅವನ ವ್ಯಾಪಾರದ ರೀತಿಯನ್ನು ನೋಡುತ್ತಾ ನಾನೂ ಅಲ್ಲಿ ನನ್ನ ಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಸಂಜೆಯ ವೇಳೆ ಕಾಲೇಜು ಹುಡುಗಿಯರ ದಂಡು ಒಂದು ಬಂದಿತು. ಆ ಪೋಸ್ಟರ‍್ಗಳನ್ನು ನೋಡುತ್ತಲೇ ಅಯ್ಯೋ ಹೃತಿಕ್, ಶಾರೂಕ್ ಎಂದು ಸಂಭ್ರಮಿಸಿತ್ತಿರುವಾಗಲೇ ರಾಮಚಂದ್ರಾಪುರ ಮಠದ ಇಬ್ಬರು ಮಾಣಿಗಳೂ ಅಲ್ಲಿಗೆ ಬಂದರು. ಆದರೆ ಅವರು ಅಪ್ಪಿ ತಪ್ಪಿಯೂ ಸಿನಿಮಾನಟರ ಪೋಸ್ಟರ‍್ಗಳನ್ನು ನೋಡಲೇ ಇಲ್ಲ. ಐಶ್ವರ್ಯಾ, ಕರೀನಾ ಪೋಸ್ಟರ್ ಅವರನ್ನು ಸೆಳೆಯಲೇ ಇಲ್ಲ. ಅಲ್ಲಿದ್ದ ದೇವರ ಪೋಸ್ಟರ‍್ಗಳ ಮೇಲೆಯೇ ಅವರ ಗಮನ. ಅದರಲ್ಲಿ ಎರಡು ಪೋಸ್ಟರ‍್ಗಳನ್ನು ಆರಿಸಿ ದುಡ್ಡುಕೊಟ್ಟು ಹೊರಟುಹೋದರು. ಒಂದು ಲೋಕಕ್ಕೆ ಪೂರ್ಣ ಕುರುಡರಾದ ಇವರ ವರ್ತನೆ ಕಂಡ ನನಗೆ ಅನಿಸಿದ್ದು- ಹೀಗೂ ಉಂಟೇ? ಇಂತಹ ಜಾತ್ರೆ ಜನವರಿ ೪ ರಂದು. ನಾನೂ ನನ್ನ ಮೊಮ್ಮಕ್ಕಳೂ ಕಾದು ಕುಳಿತಿದ್ದೇವೆ. 


ಕಳೆದವಾರ ಊರಿನ ನಟಮಿತ್ರರು ಕಾರ್ನಾಡರ ಯಯಾತಿಯನ್ನು ಪ್ರದರ್ಶಿಸಿದರು. ಸಾಗರದ ಎಸ್. ಮಾಲತಿಯ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ತೃಪ್ತಿಕರವಾಗಿತ್ತು. ಮುಖ್ಯಪಾತ್ರಗಳಲ್ಲಿ ಸಂದೇಶ್ ಜವಳಿ ಮತ್ತು ನಿಲೇಶ್ ಜವಳಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದರು ಎಂದೇ ಹೇಳಬೇಕು. ಇಬ್ಬರ ಅಭಿನಯ ಪ್ರೇಕ್ಷಕರ ಕರತಾಡನವನ್ನು ಗಳಿಸಿತು. ಆದರೆ ಸ್ತ್ರೀಪಾತ್ರಗಳು ಸೋತು ಹೋದವು. ಒಳ್ಳೆಯ ನಟಿಯರ ಅಭಾವದಿಂದಾಗಿ ನಿರ್ದೇಶಕರು ಕಾಲೇಜಿನ ಎಳೆಯ ವಿದ್ಯಾರ್ಥಿನಿಯರನ್ನು ಆರಿಸಿಕೊಂಡಿದ್ದರು. ಅವರ ಪಾತ್ರಕ್ಕೂ ಪ್ರಾಯಕ್ಕೂ ಹೊಂದಾಣಿಕೆಯಾಗದೇ ಹೋಯಿತು. 


ವಾರದ ಓದು: ಶ್ರೀ ಸದಾಶಿವ ಯೋಗಿಗಳ "ಸತ್ಯದ ಹುಡುಕಾಟ(೨೬೯ಪು) ಮತ್ತು ಸಂಗೀತ ಸಂವಾದ-ಭಾಸ್ಕರ್ ಚಂದಾವರ್ಕರ್ (೨೦೨ಪು).    

Friday, December 10, 2010

ಬಿಟ್ಟೆನೆಂದರೂ ಬಿಡದ ಈ ಮಾಯೆ

ಬಿಟ್ಟೆನೆಂದರೂ ಬಿಡದ ಈ ಮಾಯೆ 


ನಿನ್ನೆ ಶುಕ್ರವಾರ ಅನಿವಾರ್ಯವಾಗಿ ಮತ್ತೆ ಮಂಗಳೂರಿಗೆ ಹೋಗಬೇಕಾಯಿತು. ೨೦೦೬ರಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರು ಮಾಡಿ ಮಾರುತ್ತಿದ್ದ ಒಂದು ಗುಂಪನ್ನು ಮಂಗಳೂರು ಪೋಲಿಸರು ಬಂಧಿಸಿದ್ದರು. ಅದರಲ್ಲಿ ನಮ್ಮ ಕಾಲೇಜಿನ ಮುದ್ರೆಯಿರುವ ಒಂದು ಅಂಕಪಟ್ಟಿಯೂ ಇತ್ತು. ಅದರ ಮಹಜರಿಗಾಗಿ ಬಂದ ಪೋಲಿಸರಿಗೆ ಅದು ನಕಲಿ ಎಂದು ಹೇಳಿಕೆ ಕೊಟ್ಟಿದ್ದೆ. ನಾಲ್ಕು ವರುಷದ ನಂತರ ಈಗ ಈ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದರ ಸಾಕ್ಷಿ ಹೇಳಲು ನಾನು ನ್ಯಾಯಾಲಯಕ್ಕೆ ಹೋಗಬೇಕಾಗಿ ಬಂತು. ಬಹು ಕಾಲದ ನಂತರ ಮತ್ತೆ ಮಂಗಳೂರು ಭೇಟಿ ಹೀಗೆ ಆಯಿತು.


ಮಂಗಳೂರು ಪ್ರವೇಶಿಸುತ್ತಲೇ ಏನೋ ಒಂದು ತರದ ಅನುಭವ. ಮೂವತ್ತೇಳು ವರುಷಗಳ ಕಾಲ ಇದ್ದ ಈ ಊರನ್ನು ಬಿಟ್ಟು ಈಗ ಹುಟ್ಟೂರಿಗೆ ಹೋಗಿ ನೆಲೆನಿಂತರೂ, ಮತ್ತೆ ಮಂಗಳೂರು ನನ್ನ ಮೇಲೆ ಮೋಡಿ ಮಾಡಿತು. ಒಂದು ಕ್ಷಣ ನಾನು ಈ ಊರನ್ನು ಬಿಟ್ಟು ತಪ್ಪು ಮಾಡಿದೇನೋ ಎಂದೆನಿಸಿತು. ಅಗಾಧವಾಗಿ ದಿನದಿಂದ ದಿನಕ್ಕೆ ಗುರುತೇ ಸಿಗದಂತೆ ಬದಲಾಗುತ್ತಿರುವ ಮಂಗಳೂರಿನ ಮಾಯೆಯೇ ಅಂತಹದು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಮೌಲ್ಯಮಾಪನ ಈಗ ನಡೆಯುತ್ತಿದೆ. ಈ ಕಾರಣದಿಂದ ನನ್ನ ಕನ್ನಡ ಅಧ್ಯಾಪಕರನ್ನು ಹುಡುಕಿ ಎಸ್‍ಡಿಎಂ ಕಾಲೇಜಿಗೆ ಹೋಗಿ ಮೂರು ಮಾಳಿಗೆಯನ್ನು ಏರಿ ಏದುಸಿರು ಬಿಡುತ್ತಾ ನನ್ನವರನ್ನು ನೋಡುತ್ತಾ ನಿಂತಾಗ  ಹತ್ತಿ ಬಂದ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಪರಿಹಾರವಾಗಿತ್ತು. ಎಲ್ಲರೂ ನನ್ನವರೇ. ಬಾಯಿತುಂಬಾ ಮಾತನಾಡಿಸುವವರು. ಅವರನ್ನೆಲ್ಲಾ ನೋಡಿ ಮಾತನಾಡಿಸಿದಾಗ ನನ್ನ ಊರಿನ ಒಂಟಿತನ ನೆನಪಿಗೆ ಬಂದಿತು. ಇಲ್ಲಿಯೇ ಇದ್ದಿದ್ದರೆ ಇವರೆನ್ನೆಲ್ಲಾ ಆಗಾಗ ನೋಡುತ್ತಾ ಇರಬಹುದಿತ್ತಲ್ಲ ಎಂದೆನಿಸಿತು. 


ಮಂಗಳೂರಿನ ಮತ್ತೊಂದು ಆಕರ್ಷಣೆಯೆಂದರೆ ನಮ್ಮ ಅಶೋಕರ ಅತ್ರಿ ಪುಸ್ತಕ ಮಳಿಗೆ. ಮಂಗಳೂರಿಗೆ ಹೋದಾಗಲೆಲ್ಲಾ ಅಲ್ಲಿಗೆ ಹೋಗದಿದ್ದರೆ ನನ್ನ ಮಂಗಳೂರು ದರ್ಶನ ಅಪೂರ್ಣವಾಗಿರುತ್ತದೆ. ವ್ರತದಂತೆ ಅಲ್ಲಿಗೆ ಹೋಗಿಯೇ ಹೋಗುತ್ತಿರುತ್ತೇನೆ. ಅವರ ಮಳಿಗೆಯಲ್ಲಿರುವ ಪುಸ್ತಕಗಳ ರಾಶಿ ನೋಡಿದಾಗ ಮಾಲಿಗೆ ಹೋಗಿ ಕಕ್ಕಾಬಿಕ್ಕಿಯಾಗುವ ಮಗುವಿನಂತೆ ನನ್ನ ಮನಸ್ಸು ಗೊಂದಲಕ್ಕೀಡಾಗುತ್ತದೆ. ಯಾವ ಪುಸ್ತಕ ಆರಿಸುವುದು ಎಂಬ ಸಮಸ್ಯೆ ಕಾಡುತ್ತದೆ. ಎಲ್ಲವೂ ಬೇಕೆನಿಸುತ್ತದೆ.  ನಿನ್ನೆಯೂ ಅಲ್ಲಿಗೆ ಹೋಗಿ ಹೊಸಪುಸ್ತಕಗಳನ್ನು ಕೊಂಡು ಬಂದೆ. ಮತ್ತೆ ಒಂದು ತಿಂಗಳು ಚಿಂತೆಯಿಲ್ಲ ಎಂಬ ಸಮಾಧಾನ ಈಗ. 


 ಮಂಗಳೂರಿಗೆ ಬಂದಾಕ್ಷಣ  ಮನಸ್ಸಿನಲ್ಲಿ ಆವರಿಸಿಕೊಂಡ ಮಾಯೆ  ಊರಿನತ್ತ ಹೊರಟಾಗ  ನಿಧಾನವಾಗಿ ಕರಗಲಾರಂಭಿಸಿತು. ಮತ್ತೆ ನನ್ನೂರೇ ಒಳ್ಳೆಯದು. ಏನಿದ್ದರೂ ಇದೇ ಸ್ವರ್ಗವೆಂದೆನಿಸಿತು. ಅಲ್ಲಿಗೆ ಬಂದಾಗಲೆಲ್ಲಾ ವಿಶ್ವಾಮಿತ್ರನ ಮುಂದೆ ಕುಣಿದ ಮೇನಕೆಯಂತೆ ಈ ಮಾಯೆ ನನ್ನನ್ನು ಆವರಿಸಿಕೊಳ್ಳುತ್ತಿರುತ್ತದೆ. ಅದರಿಂದ ಪಾರಾಗಿ ಬಂದ ನಂತರ ನನ್ನೂರು ಹೊಸತಾದ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ..  


ಈಗ ನಿನ್ನೆಯ ನೆನಪುಗಳು ಉಳಿದುಕೊಂಡಿವೆ. ಕೈಯಲ್ಲಿ ನಿನ್ನೆ ಕೊಂಡು ತಂದ ಹೊಸ ಪುಸ್ತಕಗಳಿವೆ. ಮನಸ್ಸು ತಳಮಳವನ್ನು ಮೆಟ್ಟಿನಿಂತಿದೆ. ಏನೋ ಲವಲವಿಕೆ ಮೂಡಿದೆ. ಈ ದಿನ ಆಗಸದಲ್ಲಿ ಮೋಡ ಆವರಿಸಿಕೊಂಡು ಹಗಲಿನಲ್ಲಿ ಮಬ್ಬುಗತ್ತಲೆ ತುಂಬಿಕೊಂಡರೂ ಖುಷಿಯಲ್ಲಿದ್ದೇನೆ.


ವಾರದ ಓದು.
ಗಾನಗಂಗೆಯಾದ ಗಂಗೂಬಾಯಿ ಹಾನಗಲ್‍ರವರ ಕುರಿತಾದ ಎರಡು ಪುಸ್ತಕಗಳನ್ನು ಓದಿದೆ. ೧, ನನ್ನ ಬದುಕಿನ ಹಾಡು-ಎನ್ಕೆ (೧೦೬) ಮತ್ತು ೨. ಗಂಗಾವತರಣ- ದಮಯಂತಿ ನರೇಗಲ್ಲ. (೧೫೫). ಎರಡೂ ಪುಸ್ತಕಗಳನ್ನು ಸಂಗೀತ ಪ್ರೇಮಿಯಾದ ನನ್ನ ಆತ್ಮೀಯರಾದ ಶ್ರೀ ಮಹಾಲಿಂಗಭಟ್ಟರಿಗೆ ದಾನ ಮಾಡಿದೆ. ಸತ್ಪಾತ್ರರಿಗೆ ಕೊಟ್ಟ ಸಮಾಧಾನ ನನಗೆ. 

Saturday, December 4, 2010

ಒಮ್ಮೆ ಹಾಡಿದ ಹಾಡು ಮತ್ತೊಮ್ಮೆ

ಒಮ್ಮೆ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡದಿರಲು ನಿರ್ಧರಿಸಿದ್ದೇನೆ. ಅಂದರೆ ನಾನು ಒಬ್ಬ ಗಾಯಕನೆಂಬ ಭ್ರಮೆ ಬೇಡ. ಈ ವಾರದ ನನ್ನ ಬರವಣಿಗೆಯ ಶೀರ್ಷಿಕೆ ಇದು ಅಷ್ಟೇ. ನನ್ನ ಬಳಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕ ಪುಸ್ತಕಗಳಿವೆ.  ವೃತ್ತಿಗೆ ಸೇರಿದ ದಿನದಿಂದ ಪುಸ್ತಕ ಸಂಗ್ರಹಿಸಲು ಪ್ರಾರಂಬಿಸಿದೆ. ನನ್ನ ಗುರುಗಳಾದ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ತರಗತಿಯಲ್ಲಿ ’ ಓದಬೇಕ್ರಯ್ಯಾ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಇಷ್ಟು ಪುಸ್ತಕಗಳು ಅಚ್ಚಾಗುತ್ತಿವೆ. ಅಂದರೆ ನಿಮಿಷಕ್ಕೆ ಇಷ್ಟಾಯಿತು. ಗಂಟೆಗೆ ಇಷ್ಟಾಯಿತು. ನೀವು ಇದರಲ್ಲಿ ಎಷ್ಟು ಓದಲು ಸಾಧ್ಯ? ಆದ್ದರಿಂದ ಓದಿ . ಓದಿ ಎಂದು ಪ್ರೊತ್ಸಾಹಿಸುತ್ತಿದ್ದರು. ಯಾವುದೇ ಪಠ್ಯವನ್ನು ಮಾಡುವಾಗ ನಾನು ಅದರ ಮೂಲವನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಅದರ ಕುರಿತಾಗಿ ಬಂದಿರಬಹುದಾದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ಓದುತ್ತಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಹವ್ಯಾಸ ಇವತ್ತಿಗೂ ಹೋಗಿಲ್ಲ. ಇಲ್ಲಿ ಸಣ್ಣದಾದ ಊರಲ್ಲಿ ಕುಳಿತುಕೊಂಡರೂ ತಿಂಗಳಿಗೆ ಏಳೆಂಟುಪುಸ್ತಕಗಳನ್ನು ತರಿಸಿಕೊಳ್ಳುತ್ತಿರುತ್ತೇನೆ. ಒಂದು ಊರಿನ ಮಾನಸಿಕ ಸ್ಥಿತಿಯಲ್ಲಿ ಅಳೆಯಬೇಕಾದರೆ ಅಲ್ಲಿನ ಪುಸ್ತಕದ ಅಂಗಡಿಗೆ ಹೋಗಬೇಕು. ಎಷ್ಟೆಷ್ಟು ಪುಸ್ತಕದ ಅಂಗಡಿಗಳು ಇರುತ್ತವೆಯೋ ಅಷ್ಟು ಆರೋಗ್ಯವಂತವಾಗಿ ಆ ಊರು ಸಮಾಜ ಇದೆ ಎನ್ನುವುದು ತಿಳಿಯುತ್ತದೆ. ವ್ಯಾಪಾರವಿಲ್ಲದೆ ಆ ಅಂಗಡಿಗಳು ಸೊರಗುತ್ತಿವೆ ಎಂದಾದರೆ ಊರಿಗೆ ಗ್ರಹಣ ಹಿಡಿಯುತ್ತಿದೆ ಎಂದೇ ಅರ್ಥ ಮಾಡಿಕೊಳ್ಳಬೇಕು.  ಗ್ರಹಚಾರಕ್ಕೆ ನನ್ನೂರಿನಲ್ಲಿ ಒಳ್ಳೆಯ ಪುಸ್ತಕ ಭಂಡಾರವಿಲ್ಲ. ಹಾಗಾಗಿ ಮಂಗಳೂರಿನ ಅತ್ರಿಯಿಂದ ತಿಂಗಳಿಗೊಮ್ಮೆ ಪುಸ್ತಕ ತರಿಸಿಕೊಳ್ಳುತ್ತಿರುತ್ತೇನೆ.


ಮೂರು ತಿಂಗಳ ಹಿಂದೆ ಹೀಗಾಯಿತು. ಭೈರಪ್ಪನವರ ಕವಲು ಪ್ರಕಟವಾದಾಕ್ಷಣ ತರಿಸಿಕೊಂಡು ಓದಿದೆ. ಅದನ್ನು ಓದಿದನಂತರ ಅವರ ಹಿಂದಿನ ಕಾದಂಬರಿಗಳನ್ನು ಓದುವ ಹುಕ್ಕಿ ಬಂದಿತು. ಸರಿ . ಮತ್ತೆ ಅವರ ಹಳೆಯ ಕಾದಂಬರಿಗಳನ್ನು ಒಂದರ ನಂತರ ಒಂದರಂತೆ ಓದಲು ಪ್ರಾರಂಭಿಸಿದೆ. ಹೀಗೆ ನಾಲ್ಕು ಪುಸ್ತಕ ಓದಿದೆ. ಆಗ ನನ್ನ ಹೊಸ ಓದಿಗೆ ಅಡ್ಡಿಯಾಯಿತು. ಮತ್ತೆ ಮತ್ತೆ ಅವೇ ಎಂದೋ ಓದಿದ ಪುಸ್ತಕಗಳನ್ನು ಓದುತ್ತಿದ್ದೇನೆ. ಇದು ಸರಿಯಲ್ಲವೆಂದೆನಿಸಿತು. ಹಾಗಾಗಿ ಈಗ ಮತ್ತೆ ಹಳೆಯ ಪುಸ್ತಕಗಳನ್ನು ಓದುವುದನ್ನು ಬಿಟ್ಟಿದ್ದೇನೆ. ಒಮ್ಮೆ ಓದಿದ ಪುಸ್ತಕವನ್ನು ಇನ್ನು ಯಾವುದೇ ಕಾರಣಕ್ಕೆ ಮತ್ತೊಮ್ಮೆ ಓದಲಾರೆ ಎಂದು ನಿರ್ಧರಿಸಿದ್ದೇನೆ. ಓದಿಯಾದ ಪುಸ್ತಕಗಳನ್ನು ನಿರ್ಮೋಹದಿಂದ ಕೈಯೆತ್ತಿ ದಾನ ಮಾಡುತ್ತಿದ್ದೇನೆ.  ಇದು ನನ್ನ ಅಂತಿಮ ಓದು. ಹಾಗಾಗಿ ಪುನರಾವರ್ತನೆಯಾಗದಂತೆ ಒಮ್ಮೆ ಓದಿ ಮುಗಿಸಬೇಕು. ಒಮ್ಮೆ ಹಾಡಿದ ಹಾಡು ಮತ್ತೆ ಹಾಡಬಾರದು.  


ಈ ವಾರದ ಓದು. : ರವಿಬೆಳೆಗೆರೆಯವರ ಕಾಮರಾಜಮಾರ್ಗ (೪೦೨ಪು) ಮತ್ತು ರಥಬೀದಿ- ಶ್ರೀಧರ ಬಳೆಗಾರ (೧೫೩ಪು).