ತಕಿಟ ತಕಿಟ ಧೋಂ

Tuesday, February 22, 2011

ಕೋರ್ಟಿನಲ್ಲಿ ಕಾಫ್ಕನ ನೆನಪು

ಕೋರ್ಟಿನಲ್ಲಿ ಕಾಫ್ಕನ ನೆನಪು

ಇತ್ತೀಚಿನ ದಿನಗಳಲ್ಲಿ ಮಂಗಳೂರಿನತ್ತ ನನ್ನ ಪ್ರಯಾಣ ಹೆಚ್ಚಾಗುತ್ತಿದೆ. ಈ ಬಾರಿ ಮತ್ತೊಮ್ಮೆ ಅಲ್ಲಿಗೆ ಮನಸ್ಸಿಲ್ಲದಿದ್ದರೂ ಹೋಗಬೇಕಾಯಿತು. ನಕಲಿ ಅಂಕಪಟ್ಟಿ ತಯಾರಕರನ್ನು ೨೦೦೬ರಲ್ಲಿ ಪೋಲಿಸರು ಹಿಡಿದಿದ್ದರು. ಆ ನಕಲಿ ಅಂಕಪಟ್ಟಿಯಲ್ಲಿ ಮಂಗಳೂರಿನ ಎಲ್ಲಾ ಕಾಲೇಜಿನ ಮುದ್ರೆಗಳೂ ಇದ್ದವು. ಆ ಕುರಿತು ತನಿಖೆಗಾಗಿ ನನ್ನ ಕಾಲೇಜಿಗೆ ಬಂದಾಗ ನಾನು ಅದು ಹೇಗೆ ನಕಲಿ ಎಂದು ವಿವರಿಸಿ ಲಿಖಿತ ಹೇಳಿಕೆ ಕೊಟ್ಟಿದ್ದೆ. ಐದು ವರುಷಗಳ ನಂತರ ಆರೋಪಿಗಳೂ, ಹೇಳಿಕೆ ಕೊಟ್ಟ ನಾವು ಕೋರ್ಟಿಗೆ ಹಾಜರಾಗಬೇಕಾಗಿದೆ. ಈ ಸಂದರ್ಭದಲ್ಲಿ ಕಾಪ್ಕನ ನೆನಪು ತುಂಬಾ ಆಗುತ್ತದೆ. ಅವನ ಕಾದಂಬರಿಯ ನಾಯಕನೊಬ್ಬನಿಗೆ ಬೆಳಿಗ್ಯೆ ಅಕಾರಣವಾಗಿ ಪೋಲಿಸ್ ಸ್ಟೇಶನ್ ಗೆ ಕರೆಯಿಸಿ ಅಲ್ಲಿಯೇ ಕುಳ್ಳಿರಿಸುತ್ತಾರೆ. ಅವನ ಅಪರಾಧವನ್ನಾಗಲೀ, ಕರೆಯಿಸಿದ ಕಾರಣವನ್ನಾಗಲೀ ತಿಳಿಸುವುದೇ ಇಲ್ಲ. ಸಂಜೆಯವರೆಗೆ ಆತ ನರಕ ಯಾತನೆಯನ್ನು ಅನುಭವಿಸುತ್ತಾನೆ. ಅದನ್ನು ಓದುತ್ತಿರುವಾಗ ಕಥಾನಾಯಕನ ತೊಳಲಾಟ ಅರ್ಥವಾಗಿರಲಿಲ್ಲ. ಈಗ ಅನುಭವಕ್ಕೆ ಬಂದಿತು. ಹತ್ತೂವರೆಗೆ ಹಾಜರಾಗಬೇಕು-ಸರ್ಕಾರಿ ವಕೀಲರ ಬಳಿ. ಹನ್ನೊಂದು ಘಂಟೆಗೆ ಕೋರ್ಟ್ ಪ್ರಾರಂಭವಾದಾಗ ನಮ್ಮ ಹೆಸರನ್ನು ಕರೆದಾಗ ಹಾಜರಾತಿ ನೀಡಬೇಕು. ಮತ್ತೆ ಕಾಯಬೇಕು, ಕಾಯಬೇಕು. ಮೇರಾ ನಂಬರ್ ಕಬ್ ಆಯೇಗಾರೇ ಎಂದು. ಅದು ಘಂಟೆ ಒಂದೂ ಆಗಬಹುದು, ಎರಡೂ ಆಗಬಹುದು. ಈ ಬಾರಿ ಅದು ಹಾಗೆಯೇ ಆಯಿತು. ಈ ಬಾರಿಯೂ ಹೇಳಿಕೆ ನೀಡಲಾಗಲಿಲ್ಲ. ಮತ್ತೊಮ್ಮೆ ಕರೆಯಿಸಿಕೊಳ್ಳುತ್ತಾರಂತೆ. ಮೇಯಲ್ಲಿ. ಪ್ರಾಮಾಣಿಕವಾಗಿ ಹೇಳಿಕೆ ಕೊಟ್ಟು ಈಗ ಇದು ನನಗೆ ಬೇಕಾಗಿತ್ತಾ ಎಂದು ಪರಿತಪಿಸುತ್ತಿದ್ದೇನೆ.

ಕಳೆದ ಶನಿವಾರ ತುಂಬಾ ದಿನಗಳಿಂದ ಕಾಯುತ್ತಿದ್ದ ದಿನ ಬಂದಿತು. ತುಂಗಾ ಮಹೋತ್ಸವ. ತೀರ್ಥಹಳ್ಳಿಯವನಾದ ಶ್ರೀ ಉದಯಕುಮಾರ್ ಶೆಟ್ಟಿ ಈಗ ಬೆಂಗಳೂರಿನಲ್ಲಿ ಕಲಾತೀರ ಎಂಬ ನಾಟ್ಯಾಲಯವನ್ನು ಸ್ಥಾಪಿಸಿ ನೃತ್ಯವನ್ನು ಕಲಿಸಿಕೊಡುತ್ತಿದ್ದಾನೆ. ದಿ.ಪ್ರೊತಿಮಾ ಬೇಡಿಯ ಶಿಷ್ಯನೀತ. ಊರಿನ ಬಗ್ಗೆ ಅತಿಯಾದ ಮೋಹ. ಹಾಗಾಗಿ ಎರಡು ವರ್ಷಕ್ಕೊಮ್ಮೆ ಊರಿನ ನದೀತೀರದಲ್ಲಿ ರಾತ್ರಿ ೭ರಿಂದ ಬೆಳಿಗ್ಯೆ ಆರರವರೆಗೆ ಸಂಗೀತ ನೃತ್ಯ ಕಾರ್ಯಕ್ರಮವನ್ನು ತುಂಗಾ ಮಹೋತ್ಸವವೆಂಬ ಹೆಸರಿನಲ್ಲಿ ನಡೆಸುತ್ತಿದ್ದಾನೆ. ಈ ಬಾರಿ ತುಂಗಾ ಕಾಲೇಜಿನಲ್ಲಿ ಒಂದು ವಿಚಾರ ಗೋಷ್ಟಿಯನ್ನೂ ಏರ್ಪಡಿಸಿದ್ದ. ಚರ್ಮವಾದ್ಯಗಳು ಮತ್ತು ಈಗ ಪ್ಲಾಸ್ಟಿಕ್ ವಾದ್ಯಗಳು, ನೃತ್ಯದ ಸಂಪ್ರದಾಯಿಕ ಶೈಲಿ ಮೊದಲಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಇತ್ತು. ಶ್ರೀ. ಎಸ್.ಎಸ್.ಚಂದ್ರಶೇಖರ್, ಪ್ರೊ.ಕೆ.ರಾಮಮೂರ್ತಿರಾವ್, ಶ್ರೀಮತಿ ಪೂರ್ಣಿಮಾ ಗುರುರಾಜ್, ಮೊದಲಾದವರು ಭಾಗವಹಿಸಿದ್ದರು. ಶ್ರೀ ಸುಬ್ರಾಯ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯೂ ಇತ್ತು. ಸಮಾರಂಭ ಗಂಟೆಯಷ್ಟು ತಡವಾಗಿ ಪ್ರಾರಂಭವಾದುದ್ದರಿಂದ ರೈಲು ಹಳಿತಪ್ಪಿದಂತಾಗಿತ್ತು. ಕಾರ್ಯಕ್ರಮಗಳಿಗೆ ವಿರಾಮ ನೀಡದೇ ಮೂರರವರೆಗೆ ನಡೆಸಿದರು. ಸಭೆಯಲ್ಲಿ ಜನರೂ ಕಡಮೆಯಿದ್ದರು. ಕಾಲೇಜಿನ ಮಕ್ಕಳೂ ರಜೆಯನ್ನು ಚೆನ್ನಾಗಿಯೇ ಅನುಭವಿಸಿದರು. ಈ ಹಿರಿಯರ ಮಾತುಗಳನ್ನು ಕೇಳುವ ಅವಕಾಶವನ್ನು ಕಳೆದುಕೊಂಡರು.

ಸಂಜೆಯೆನ್ನುವಾಗ ನಮ್ಮ ರಥಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಬೀದಿಯೆಲ್ಲಾ ಗಲಗಲ. ಜನರ ಓಡಾಟ, ಸಂಭ್ರಮ. ರಾತ್ರಿಯಾಗುತ್ತಲೇ ಎಲ್ಲರ ಗಮನ ನದೀತೀರದತ್ತ. ಯಾರ ಮುಖ ನೋಡಿದರೂ ಗುರುತು ಸಿಗುತ್ತಿರಲಿಲ್ಲ. ರಾತ್ರಿಯ ಚಳಿಯನ್ನು ಎದುರಿಸಲು ಮೈತುಂಬಾ ಬಟ್ಟೆಗಳು, ಮಂಕಿಕ್ಯಾಪ್, ಇತ್ಯಾದಿ. ಮಂಗಳೂರಿನಿಂದ ನನ್ನ ಗೆಳೆಯರಾದ ಮಹಾಲಿಂಗಭಟ್ಟರು, ಅವರ ಗೆಳೆಯರಾದ ಶ್ರೀ ರೋಷನ್, ಮಹಾಲಿಂಗರ ಮಗ ಚಕಿತ ಬಂದಿದ್ದರು. ಕಳಸದಿಂದ ನನ್ನ ಶಿಷ್ಯ ಅರವಿಂದ ಬಂದಿದ್ದ. . ಮಾತುಕತೆಗೆ ಸುಬ್ರಾಯ ಚೊಕ್ಕಾಡಿಯವರೂ ಸಿಕ್ಕಿದ್ದರು, ಮನೆಯಲ್ಲಿ ಒಂದಿಷ್ಟು ಮಾತಾದ ನಂತರ, ಹೋಟೆಲಿನಲ್ಲಿ ಜತೆಯಲ್ಲಿ ಊಟ. ಒಟ್ಟಾಗಿ ಊಟಮಾಡಿದ ನಂತರ ರಾತ್ರಿಯ ಚಳಿಯನ್ನು ಎದುರಿಸಲು ಸರ್ವಸನ್ನದ್ಧರಾಗಿ ನದೀತೀರದತ್ತ ನಡೆದವು. ಬೀದಿತುಂಬಾ ಜನ. ಮರಳುಗುಡ್ಡೆಯಲ್ಲಿ ಕಿಕ್ಕಿರಿದ ಜನ. ಜಾತ್ರೆಯ ಹಾಗೆ ಅಲ್ಲಲ್ಲಿ ತಿಂಡಿತಿನಿಸುಗಳ ಅಂಗಡಿಗಳು. ತಂಪಾಗಿ ಬಹಳ ಸಂಭ್ರಮದಿಂದ ನದಿ ಹರಿಯುತ್ತಿತ್ತು ತನ್ನ ಪಾಡಿಗೆ. ಬಣ್ಣದ ಕಾಗದದ ದೋಣಿಗಳು ನದಿಯ ಮೇಲೆ ತೇಲುತ್ತಿದ್ದವು. ದಡದ ಎರಡೂ ಕಡೆಗಳಲ್ಲಿರುವ ಮರಗಿಡಗಳಿಗೆಲ್ಲಾ ಸೀರಿಯಲ್ ಲೈಟಿನ ಅಲಂಕಾರ. ಸೇತುವೆಯ ಕಮಾನುಗಳ ಮೇಲೂ ಅಲಂಕಾರ. ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾದಾಗ ಜನರ ಮಾತುಕತೆಯಿಂದಾಗಿ ಸಂಗೀತ ಕೇಳಲು ಕಷ್ಟವಾಗುತ್ತಿತ್ತು. ನಾವು ನಿಧಾನವಾಗಿ ರಂಗಸ್ಠಳದ ಹಿಂದೆ ಇರುವ ಬಂಡೆಯನ್ನು ಆಶ್ರಯಿಸಿದೆವು. ಅಲ್ಲಿಯೇ ಹಾಕಿದ್ದ ದೊಡ್ದ ಎಲ್ಸಿಡಿ ಸ್ಕ್ರೀನ್ ನಿಂದ ಎಲ್ಲವೂ ನೋಡಲು ಸಾಧ್ಯವಾಗುತ್ತಿತ್ತು.
ಕಲಾತೀರದ ವಿದ್ಯಾರ್ಥಿಗಳಿಂದ ಓಡಿಸಿ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ವೆಂಕಟೇಶ್ ಕುಮಾರ್ ರಿಂದ ಸುಗಮ ಸಂಗೀತ. ಹೊಸತೇನೂ ಇರಲಿಲ್ಲ. ಕೇಳಿದ ಹಾಡುಗಳೇ. ಪ್ರತಿಯೊಂದು ತಂಡಕ್ಕೂ ಸುಮಾರು ಅರ್ಧಗಂಟೆಯ ಕಾಲಾವಕಾಶ ದೊರೆಯುತ್ತಿತ್ತು. ಶ್ರೀಲಂಕಾ, ನೇಪಾಳದ ನೃತ್ಯ ಕಾರ್ಯಕ್ರಮವಿತ್ತು. ಇದರಲ್ಲೂ ವಿಶೇಷತೆ ಇರಲಿಲ್ಲ. ಅವರವರ ಭಾಷೆಗಳಲ್ಲಿ ಹಾಡುಗಳಿದ್ದವು. ಹೊರತು ನೃತ್ಯದ ಗತಿ ನಮ್ಮ ಹಾಗೆ. ನಮ್ಮ ಹುಡುಗರೂ ನೃತ್ಯ ಮಾಡಬಹುದು. ಮಂಗಳೂರಿನ ಉಲ್ಲಾಳ ಮೋಹನ್ ರವರ ತಂಡದವರ ಸಪ್ತ ಮಾತೃಕೆ ನೃತ್ಯ ರೂಪಕ ಚೆನ್ನಾಗಿಯೇ ಮೂಡಿಬಂದಿತು. ನಿಜವಾದ ರಂಗು ಏರಿದ್ದು ಗಂಟೆ ಒಂದರ ನಂತರ. ಆ ವೇಳೆಯಲ್ಲಿ ಚಳಿಯನ್ನು ಎದುರಿಸಲಾರದೇ ಊರಿನ ಜನ ಮನೆಗೆ ತೆರಳಿದ್ದ ಕಾರಣ ಮುಂದಿನ ಕುರ್ಚಿಗಳೆಲ್ಲಾ ಖಾಲಿ ಖಾಲಿ. ಮರಗಳ ಹತ್ತಿರ ಹೋದರೆ ಮಳೆಯ ಹಾಗೆ ತಲೆಯ ಮೇಲೆ ಬೀಳುವ ಇಬ್ಬನಿಯ ಹನಿಗಳು. ಕುರ್ಚಿಯ ಮೇಲೆ ನೀರು ಚೆಲ್ಲಿದಂತೆ ಇದ್ದ ಇಬ್ಬನಿಯ ನೀರು, ತಂಪಾಗಿ ಬೀಸುವ ಗಾಳಿ . ನಮಗೂ ಆ ಚಳಿಯನ್ನು ಎದುರಿಸಲು ಕಷ್ಟವಾಗುತ್ತಿತ್ತು. ಒಟ್ಟು ನಾಲ್ಕು ಬಾರಿ ಬಿಸಿ ಚಹಾ ಕುಡಿದು ಹಠಹಿಡಿದು ಕುಳಿತುಕೊಂಡಿದ್ದೆವು. ಬೆಂಗಳೂರಿನ ಮುದ್ದುಮೋಹನರ ಹಿಂದೂಸ್ತಾನಿ ಸಂಗೀತ, ಉನ್ನಿಕೃಷ್ಣನ್ ರ ಸಂಗೀತ ಬಹಳವಾಗಿ ಮನಸ್ಸಿಗೆ ಖುಶಿಯನ್ನು ತಂದುಕೊಟ್ಟಿತು. ಉನ್ನಿ ಹಾಡಲು ಕುಳಿತಾಗ ಗಂಟೆ ಮೂರು, ಚಳಿಯೂ ಜೋರು, ಮೂರು ಹಾಡನ್ನು ಹಾಡಿದ ಬಳಿಕ, ಮಪ್ಲರನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದರೂ ಸಹ, ನಾಲ್ಕನೆಯ ಹಾಡು ಹೇಳುವಾಗ, ಚಳಿಗಾಳಿಯನ್ನು ಕುಡಿದ ಉನ್ನಿಗೆ ಹಾಡು ಹೇಳಲು ಕಷ್ಟವಾಯಿತು. ಹೇಗೋ ಮುಗಿಸಿದರು. ಚೆನ್ನೈನ ಉಮಾಶಂಕರರ ಘಟವಾದ್ಯ ಮೇಳ ಮಾತ್ರ ಎಲ್ಲರನ್ನು ಬಡಿದೆಬ್ಬಿಸಿತು. ಈ ಮನುಷ್ಯನಿಗೆ ಮಾತ್ರ ಚಳಿ ತಾಗಲೇ ಇಲ್ಲ. ಘಟವನ್ನು ಎತ್ತಿ ಹಾರಿಸಿ, ಕುಟ್ಟಿ ಕುಟ್ಟಿ ಹೊಡೆಯುತ್ತಿದ್ದ ಈತ ಮುಂದಿನ ಸಾಲಿನ ಹುಡುಗರಿಗೆ ಕುಣಿಯುವಂತೆ ಮಾಡಿಬಿಟ್ಟ. ಒರಿಸ್ಸಾದ ಗೋಟ್ಟೀಪೋವಾ ನೃತ್ಯವೂ ಹೀಗೆ ಮನಸ್ಸನ್ನು ರಂಜಿಸುತ್ತಿತ್ತು. ಈ ನೃತ್ಯದ ವಿಶೇಷತೆ ಎಂದರೆ ನೃತ್ಯಮಾಡುವವರೆಲ್ಲರೂ ಹುಡುಗರೇ. ರಾತ್ರೆ ನಾಲ್ಕರವೇಳೆ ಕೂಚುಪುಡಿ ಯಕ್ಷಗಾನ ಪ್ರಾರಂಭವಾಯಿತು. ಭಾಷೆ ತೆಲಗುವಾದದ್ದರಿಂದ ಅರ್ಧ ಅರ್ಥವಾಗುತ್ತಿತ್ತು. ಸುಮ್ಮನೇ ನೃತ್ಯವನ್ನು ನೋಡುತ್ತಾ ಕುಳಿತೆವು. ಕೊನೆಯದಾಗಿ ಬೆಂಗಳೂರಿನ ಕೃಪಾಫಡ್ಕೆಯವರಿಂದ ವಂದೇ ಮಾತರಂ ರೂಪಕ. ಅದು ಮುಗಿಯುವಾಗ ಬೆಳಿಗ್ಯೆ ಆರೂ ಹತ್ತು. ನಿಧಾನವಾಗಿ ಬೆಳಕು ಮೂಡಲು ಪ್ರಾರಂಭವಾಗಿತು. ಕೊನೆಯ ಚಹಾವನ್ನು ಕುಡಿದು ನಿಧಾನವಾಗಿ ಮನೆಯತ್ತ ಹೊರಟೆವು. ನಾನು ಮತ್ತು ಶಿಷ್ಯ ಅರವಿಂದ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ನಮ್ಮ ಮಹಾಲಿಂಗ ಮತ್ತು ಚಕಿತ ಬಂಡೆಯಮೇಲೆ ಒಂದುಗಂಟೆ ಮಲಗಿಕೊಂಡಿದ್ದರು. ಆದರೂ ಆಯಾಸವಿರಲಿಲ್ಲ.

ಊರಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ಬಹಳ ವಿರಳ. ಆದ್ದರಿಂದ ಊರಿನ ಅಂಗಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣವಾಗಿ ದಕ್ಕಿಸಿಕೊಳ್ಳಬೇಕು ಎಂಬ ಹಟವಿದೆ ನನಗೆ. ಮೊನ್ನೆ ದಿನಾಂಕ ೧೪ರಂದು ಮಾರಿಗುಡಿಯ ಅಂಗಳದಲ್ಲಿ ಗದಾಯುದ್ಧವೆಂಬ ಯಕ್ಷಗಾನ ಪ್ರಸಂಗವಿತ್ತು. ಸಂಜೆ ಏಳಕ್ಕೆ ಎಂದು ಘೋಷಿಸಿದ್ದರೂ ಕೂಡ ಊರಿನ ಸಂಪ್ರದಾಯದಂತೆ ಒಂದು ಗಂಟೆ ಇಪ್ಪತ್ತು ನಿಮಿಷದಷ್ಟೇ ತಡವಾಗಿ ಪ್ರಾರಂಭವಾಯಿತು. ನಾವು ಶಿಸ್ತಾಗಿ ಏಳು ಗಂಟೆಗೆ ಸಭೆಯಲ್ಲಿ ಕುಳಿತಿದ್ದೆವು. ಯಕ್ಷಗಾನವೇನೊ ಚೆಂದವಾಗಿ ಬಂದಿತು. ಆದರೆ ಹೆಚ್ಚುಹೊತ್ತು ಕುಳಿತುಕೊಳ್ಳಲಾಗಲಿಲ್ಲ. ಇಂತಹದೇ ಅನುಭವ ಮೊನ್ನೆ ತಾ.೧೯ರಂದು ಆಯಿತು. ಉತ್ತರ ಕರ್ನಾಟಕದ ಲೇಖಕಿಯರ ಮತ್ತು ವಾಚಕಿಯರ ಸಂಘದವರು ತಮ್ಮ ಸಂಘದ ರಜತೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಅದರಂತೆ ಅವರು ಅಂದು ಕುಪ್ಪಳ್ಳಿಗೆ ಬಂದಿದ್ದರು. ಆದಿನ ಮಧ್ಯಾಹ್ನ ಕಾವ್ಯದ ಕುರಿತು ಚರ್ಚೆಯನ್ನು ಇಟ್ಟುಕೊಂಡಿದ್ದರು. ಶಿವಮೊಗ್ಗದಿಂದ ತೀ.ನಂ.ಶಂಕರನಾರಾಯಣರು ಮತ್ತು ಕುಮಾರ ಚಲ್ಯರೂ ಹನ್ನೊಂದು ಘಂಟೆಗೆ ಕುಪ್ಪಳಿಗೆ ಬಂದಿದ್ದರು. ನನಗೆ ಪ್ರೊ.ಎಲ್.ಸಿ.ಸುಮಿತ್ರಾ ಒತ್ತಾಯಪೂರ್ವಕ ಆಹ್ವಾನ ನೀಡಿದ್ದರಿಂದ ನಾನೂ ಅಲ್ಲಿಗೆ ಎರಡು ಗಂಟೆಗೆ ಹೋಗಿದ್ದೆ. ಆದರೆ ಧಾರವಾಡದಿಂದ ಹೊರಟ ಬಸ್ಸು ಮಾತ್ರ ಬಂದೇ ಇರಲಿಲ್ಲ. ಅವರಿಗೆ ಯಾರಿಗೆ ಫೋನ್ ಮಾಡಿದ್ದರೂ ಎಲ್ಲರೂ ಔಟ್ ಆಫ್ ರೀಚ್ ಎಂದೇ ಸಂದೇಶ ಬರುತ್ತಿತ್ತು. ಕೊನೆಗೆ ಅವರು ಬಂದಾಗ ಘಂಟೆ ನಾಲ್ಕು. ಅಂತೂ ಇಂತೂ ನಾಲ್ಕೂವರೆಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪಂಚಾಕ್ಷರಿ ಹಿರೇಮಠ, ಮಾಲತಿ ಪಟ್ಟಣ ಶೆಟ್ಟಿ, ಸುನಂದ ಕಡಮೆ, ಗೀತಾ ನಾಗಭೂಷಣ, ಸುಮಿತ್ರಾ ಹಲವಾಯಿ ಮೊದಲಾದವರು ಬಂದಿದ್ದರು. ಯಾರ ಮಾತೂ ಕೇಳಲು ಸಾಧ್ಯವಾಗಲಿಲ್ಲ. ವಿಶೇಷ ಆಹ್ವಾನಿತರಾಗಿ ಬಂದಿದ್ದ ಪ್ರೊ.ತೀನಂಶಂಕರನಾರಯಣರು ಪ್ರಾರಂಭದಲ್ಲಿ ಮಾಡಿದ ಉಪನ್ಯಾಸ ಬಹಳ ದೀರ್ಘವಾಯಿತು. ಪಂಪನಿಂದ ಕುವೆಂಪುವರೆಗಿನ ಕಾವ್ಯದ ಕುರಿತು ಮಾತನಾಡುತ್ತಿದ್ದಂತೆ ಘಂಟೆ ಆರಾಗಿತ್ತು. ನಾನು ಅಲ್ಲಿಂದ ಹೊರಟೆ. ಮಾರನೇಯ ದಿನ ಕವಿಗೋಷ್ಠಿ ಇದ್ದರೂ ಹೋಗಲಿಲ್ಲ.

ಮತ್ತೆ ಊರು ತಣ್ಣಗಾಗಿದೆ. ಎಡೆಬಿಡದೆ ನಡೆದ ಕಾರ್ಯಕ್ರಮಗಳಿಗೆ ಬಿಡವು ಸಿಕ್ಕಿದೆ. ಮತ್ತೆ ಯಾವ ಹೊಸ ಕಾರ್ಯಕ್ರಮನಡೆಯಬಹುದು ಎಂದು ಕಾಯುತ್ತಾ ಕುಳಿತಿದ್ದೇನೆ. ಮೈ ಕೊರೆಯುತ್ತಿದ್ದ ಚಳಿ ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಕಡಮೆಯಾಗುತ್ತಿದೆ ಅಂದರೆ ತಡೆದುಕೊಳ್ಳಬಹುದಾದ ಚಳಿ ಇದೆ.

ವಾರದ ಓದು:೧. ರಾಗ ವೈಭವ:ವಾಸುದೇವ ಮೂರ್ತಿ, ಅನು: ಲಲಿತಾ ಶಾಸ್ತ್ರಿ ಮತ್ತು ಸಾವಿತ್ರಿ ಭಾಸ್ಕರ್ (೧೦೮). ೨ ಕಿಲಿಮಂಜರೋ-ತಾಜಾ ತಾನ್ಜಾನಿಯಾ-ಪ್ರಶಾಂತ್ ಬೀಚಿ(೮೦), ೩. ಒಂದೊಂದು ಮುಖದ ಒಂದೊಂದು ಮುಖ- ನಾದಾ (೧೦೯), ೪. ತಂಪು ನೆಳಲು-ಛಾಯಾಪತಿ (೧೬೯).

1 comment:

  1. ಜವಳಿಯವರೆ,
    ನಿಮ್ಮ ಲೇಖನ ಇಷ್ಟವಾಯಿತು. ಕಾಫ್ಕಾನ ನೆನಪನ್ನು ಮಾಡಿ ಕೊಡುವ ನ್ಯಾಯಾಲಯಗಳಿಗೆ ನಾವು ಕೃತಜ್ಞರಾಗಿರಬೇಕಲ್ಲವೆ!

    ReplyDelete