ತಕಿಟ ತಕಿಟ ಧೋಂ

Tuesday, February 1, 2011

ಮೀರಿದ ಮಾತು

ಮೀರಿದ ಮಾತು.

ಕಳೆದ ವಾರ ಅನಿವಾರ್ಯವಾಗಿ ಮಂಗಳೂರಿನಲ್ಲಿ ಮೂರು ದಿನ ನಿಲ್ಲಬೇಕಾದ ಸಂದರ್ಭ ಒದಗಿಬಂದಿತು. ಈ ಹಿಂದೆ ಹಲವಾರು ಬಾರಿ ಅಲ್ಲಿಗೆ ಹೋಗಿಬಂದಿದ್ದೆನಾದರೂ ವಾಸ್ತವ್ಯ ಹೂಡದೇ ಎಂಟು ತಿಂಗಳ ಮೇಲಾಗಿತ್ತು. ಹೊರಡುವ ಮುನ್ನ ಏನೋ ಉತ್ಸಾಹ. ಬಿಟ್ಟನೆಂದರೂ ಬಿಡದ ವ್ಯಾಮೋಹ. ನನ್ನ ಕಾಲೇಜಿನ ಹಳೆಯ ವಿದ್ಯಾರ್ಥಿಸಂಘದ ಮೂವತ್ತನಾಲ್ಕನೆಯ ವಾರ್ಷಿಕ ದಿನಾಚರಣೆ. ಇಷ್ಟೂ ವರುಷ ಅವರು ಇದನ್ನು ನಡೆಸಿಕೊಂಡು ಬಂದಿದ್ದಾರೆ. ಬೆಳಿಗ್ಯೆ ಸರ್ವಸದಸ್ಯರ ಸಭೆ, ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಮತ್ತು ಆಟೋಟವಿರುತ್ತದೆ. ಸಂಜೆಯ ಸಭೆಯಲ್ಲಿ ಹಳೆಯ ವಿದ್ಯಾರ್ಥಿಯನ್ನೇ ಸಮಾರಂಭದ ಅಧ್ಯಕ್ಷನನ್ನಾಗಿಸಿ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಕೊನೆಯಲ್ಲಿ ಊಟವಿರುತ್ತದೆ. ಮತ್ತು ನಿವೃತ್ತರಾದ ಅಧ್ಯಾಪಕರಿಗೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ. ಈ ಬಾರಿ ನನ್ನ ಕಾಲೇಜಿನ ಮೊತ್ತಮೊದಲ ಬ್ಯಾಚಿನ ವಿದ್ಯಾರ್ಥಿ ಶ್ರೀ ವಸಂತ ಶೆಣೈ ನಗರ್ ಅಧ್ಯಕ್ಷನಾಗಿದ್ದ. ತುಂಬಾ ಚೆನ್ನಾಗಿಯೇ ಮಾತನಾಡಿದ. ಈ ವರುಷ ನಿವೃತ್ತರಾದ ಪ್ರೊ.ಜಿ.ಜಿ.ಪ್ರಭು ಮತ್ತು ದೈಹಿಕ ಶಿಕ್ಷಣ ಅಧ್ಯಾಪಕರಾದ ಶ್ರೀ ದಾಮೋದರ ಗೌಡರನ್ನು ಮತ್ತು ಈ ಬಾರಿ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿನ ಬೆಳಿಗ್ಯೆಯಿಂದ ರಾತ್ರಿಯವರೆಗೆ ಹಳೆಯ ವಿದ್ಯಾರ್ಥಿಗಳ ಜತೆ ಕಾಲ ಕಳೆದದ್ದು ಮನಸ್ಸಿಗೆ ತುಂಬಾ ಸಂತೋಷವನ್ನು ಕೊಟ್ಟಿತು.

ಉಳಿದ ಎರಡು ದಿನಗಳಲ್ಲಿ ಬ್ಯಾಂಕಿಗೆ, ಎಲ್ಲೈಸಿ ಆಫೀಸಿಗೆ , ಪೋಸ್ಟ ಆಫೀಸಿಗೆ ಓಡುವದರಲ್ಲಿಯೇ ಕಳೆಯಿತು. ಬಾಕಿ ಉಳಿಸಿಕೊಂಡಿದ್ದ ಕೆಲಸಗಳೆಲ್ಲವನ್ನೂ ಮಾಡಿ ಮುಗಿಸಿದೆ. ಅತ್ರಿಗೆ ಭೇಟಿ ನೀಡಿ ಒಂದಿಷ್ಟು ಪುಸ್ತಕಗಳ ಖರೀದಿ ಮಾಡಿದೆ. ಅದೃಷ್ಟವಶಾತ್ ಅಲ್ಲಿ ಗೆಳೆಯ ಶ್ರೀ ನರೇಂದ್ರ ಪೈಯವರೂ ಸಿಕ್ಕಿದ್ದರು. ಅವರೊಡನೆ ಹೆಚ್ಚು ಮಾತನಾಡಲಾಗಲಿಲ್ಲ ಎಂಬ ಕೊರಗು ಕಾಡುತ್ತಿದೆ. ಮಾತನಾಡಲಿಕ್ಕೇನೂ ಇಲ್ಲದಿದ್ದರೂ ಸುಮ್ಮನೇ ಮೌನವಾಗಿ ಕುಳಿತುಕೊಳ್ಳಬಹುದಿತ್ತು ಎಂದು ಈಗ ಅನಿಸುತ್ತಿದೆ. ಪುಸ್ತಕಪ್ರೀತಿಯನ್ನು ಅಗಾಧವಾಗಿ ಬೆಳೆಯಿಸಿಕೊಂಡಿರುವ ಅವರೊಡನೆ ಮಾತನಾಡುವುದು ಎಂದರೆ ತುಂಬಾ ಖುಷಿಯನ್ನು ಕೊಡುತ್ತದೆ. ಇಂತಹವರು ಇಂದಿನ ದಿನದಲ್ಲಿ ತುಂಬಾ ವಿರಳರಾಗಿದ್ದಾರೆ. ಮತ್ತೊಮ್ಮೆ ಅಲ್ಲಿಗೆ ಹೋದಾಗ ಅವರೊಡನೆ ತುಂಬಾ ಮಾತನಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದೇನೆ. ನಿವೃತ್ತನಾದ ಮೇಲೆ ಒಂದು ತರಹದ ಕೀಳರಿಮೆ ಬಂದಿದೆ. ಮತ್ತೊಬ್ಬರ ಮೌನವನ್ನು ಕಲಕುವ ಮನಸ್ಸು ಆಗುತ್ತಿಲ್ಲ. ಅವರು ಏನು ತಿಳಿದುಕೊಳ್ಳುತ್ತಾರೋ ಎಂಬ ಯೋಚನೆ ಬರುತ್ತದೆ. ಹಾಗಾಗಿ ಒಂದು ವಾರದಲ್ಲಿ ನನ್ನ ಪ್ರೀತಿಯ ನೋಕಿಯಾ ೮ರಿಂದ ಮಾಡುವ ಪೋನ್ ಕರೆಗಳು ಮೂರು ಅಥವಾ ನಾಲ್ಕು ಮಾತ್ರ. ನನಗೆ ಬರುವ ಕರೆಗಳು ಅಷ್ಟೇ ಸಂಖ್ಯೆಯದು ಅಥವಾ ಕೆಲವು ವಾರ ಅದೂ ಕಡಮೆ- ಒಂದು, ಎರಡು. ಹಾಗಾಗಿ ಕನಸುಗಳು -ಮತ್ತೊಬ್ಬರ ಜತೆಯಲ್ಲಿ ಕುಳಿತು ಮಾತನಾಡುವ-ಹಾಗೇ ಉಳಿದುಕೊಳ್ಳುತ್ತಿವೆ.

ಮೂರುದಿನಗಳ ನಂತರ ಊರಿಗೆ ಹೊರಟಾಗ ಉತ್ಸಾಹ. ಉಡುಪಿ ದಾಟಿ ಸೋಮೇಶ್ವರಕ್ಕೆ ಬಂದು ಘಟ್ಟದ ಒಂದೊಂದೇ ತಿರುವುಗಳನ್ನು ಏರುತ್ತಿರುವಾಗ ಊರು ಬಂದಿತು ಎಂಬ ಸಂತೋಷ. ಅಲ್ಲಿರುವಾಗ ಪಡೆದುಕೊಂಡಿರುವ ಸಂತೋಷವೇ ಬೇರೆ. ಇಲ್ಲಿ ನೆಮ್ಮದಿಯಿಂದ, ಗಲಾಟೆಯಿಲ್ಲದ ಈ ಊರಿನಲ್ಲಿ ಪಡೆಯುವ ಸಂತೋಷವೇ ಬೇರೆ. ಇದು ಮಿಗಿಲು.

ಕಳೆದ ಶುಕ್ರ ಮತ್ತು ಶನಿವಾರ ತಾಲ್ಲೂಕು ಸಾಹಿತ್ಯ ಸಮ್ಮೇಲನ ನಡೆಯಿತು. ನಿವೃತ್ತ ಪ್ರಾಧ್ಯಾಪಕರಾದ ಡಾ. ಜೆ.ಕೆ.ರಮೇಶರವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಶುಕ್ರವಾರದ ದಿನ ಕುಶಾವತಿಯ ಉದ್ಯಾನವನದಿಂದ ಸಾಂಸ್ಕೃತಿಕ ನಡಿಗೆ ಪ್ರಾರಂಭವಾಯಿತು. ಊರಿನ ಎಲ್ಲಾ ಶಾಲಾಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಒಂದಿಷ್ಟು ವೇಷಗಳು-ಎರಡು ಹುಲಿ. ಅಧ್ಯಕ್ಷರೊಡನೆ ಸಾಗಿಬಂದ ಸಮೂಹಮಾತ್ರ ತೀರಾ ಸಣ್ಣಸಂಖ್ಯೆಯದು. ಸಂಸ್ಕೃತಿಮಂದಿರದ ಬಳಿ ಮೂರು ಧ್ವಜಗಳನ್ನು ಮೂವರು ಅರಳಿಸಿದರು. ಉದ್ಘಾಟನಾಸಮಾರಂಭಕ್ಕೆ ತುಂಬಾ ಜನ ಸೇರಿದ್ದರು. ನಿಕಟಪೂರ್ವ ಸಂಮೇಲನದ ಅಧ್ಯಕ್ಷರಾದ ಪ್ರೊ.ಶ್ರೀನಿವಾಸ ಉಡುಪರೂ ಬೆಂಗಳೂರಿನಿಂದ ಭಾಗವಹಿಸಲು ಬಂದಿದ್ದರು. ಹೆಚ್ಚಿನ ಆಕರ್ಷಣೆಯೆಂದರೆ ನಮ್ಮೂರಿನವರಾದ ಯು.ಆರ್.ಅನಂತಮೂರ್ತಿ ಭಾಗವಹಿಸಿದ್ದು. ಅವರೊಡನೆ ಅವರ ಶ್ರೀಮತಿ, ಮಗಳು ಮತ್ತು ತಮ್ಮ ಗುರುರಾಜನೂ ಬಂದಿದ್ದರು. ಬಹಳಕಾಲದ ನಂತರ ಬಂದಿದ್ದ ಅವರು ತುಂಬಾ ಲಹರಿಯಲ್ಲಿದ್ದರು. ಮತ್ತು ಅವರೇ ಸಂಮೇಲನದ ಮುಖ್ಯ ಆಕರ್ಷಣೆಯಾಗಿದ್ದರು. ಮಾರನೆಯ ದಿನ ಅವರೊಡನೆ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ವೇದಿಕಮೇಲೆ ಹದಿನೈದು ಜನ. ಭಾಷಣಗಳ ಸುರಿಮಳೆ. ಅನಂತಮೂರ್ತಿಯ ಭಾಷಣವೂ ಎಂದಿನಂತೆ ಆಕರ್ಷಕವಾಗಿತ್ತು. ತೀರ್ಥಹಳ್ಳಿಯ ಸಾಂಸ್ಕೃತಿಕ ಮಹತ್ವವನ್ನು, ಅದರ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದ ಹಿರಿಯರನ್ನು ಸ್ಮರಿಸಿಕೊಂಡರು. ಮರೆತೇಹೋಗಿದ್ದ ಅವರೆಲ್ಲರನ್ನೂ ತೀರ್ಥಹಳ್ಳಿಯ ಜನ ಮತ್ತೊಮ್ಮೆ ನೆನಪಿಸಿಕೊಂಡಂತೆ ಆಯಿತು.
ಮಧ್ಯಾಹ್ನದ ಊಟವಾದ ನಂತರ ಗೋಷ್ಟಿಗಳು ಪ್ರಾರಂಭವಾದವು. ಆದರೆ ಯಾವುದೂ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಲಿಲ್ಲ ಮತ್ತು ಕೊನೆಗೊಳ್ಳಲಿಲ್ಲ. ಎಂಸಿಗಳು ಮಾತುಗಳಂತೂ ಘನಘೋರವಾಗಿದ್ದವು. ಭಾಷಣಕಾರರು ತೆಗೆದುಕೊಂಡ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ಆವರು ತೆಗೆದುಕೊಂಡದ್ದೂ ಉಂಟು. ಸ್ವಾಗತ ಭಾಷಣ ಎರೆಡು ಬಾರಿ ನಡೆಯುತ್ತಿತ್ತು. ಒಮ್ಮೆ ಎಂಸಿ, ಮತ್ತೊಮ್ಮೆ ಸ್ವಾಗತ ಭಾಷಣಕಾರರಿಂದ. ಸಮಯ ವ್ಯರ್ಥವಾಯಿತಲ್ಲದೇ, ಪ್ರಧಾನ ಭಾಷಣಕಾರರಿಗೆ ಸಮಯ ಕಡಮೆಯಾಗುತ್ತಿತ್ತು. ಮೇಲಾಗಿ ಎರಡು ಕಡೆ ಗೋಷ್ಠಿಗಳು ನಡೆಯುತ್ತಿದ್ದವು. ಕೊನೆಕೊನೆಗೆ ಅಲ್ಲೂ ಜನವಿಲ್ಲ. ಇಲ್ಲೂ ಜನವಿಲ್ಲ. ಹಾಗಾಯಿತು.
ಕಾರ್ಯಕರ್ತರ ಪಡೆಯೇ ಇರಲಿಲ್ಲ. ಬಂದ ಅತಿಥಿಗಳನ್ನು ಗುರುತಿಸುವುದಾಗಲೀ , ಅವರಿಗೆ ಮಾರ್ಗದರ್ಶನ ಮಾಡುವರಾಗಲೀ ಯಾರೂ ಕಾಣುತ್ತಿರಲಿಲ್ಲ. ನನ್ನ ಗುರುಗಳಾದ ಪ್ರೊ.ಶ್ರೀನಿವಾಸ ಉಡುಪರು ಉದ್ಘಾಟನಾ ಸಮಾರಂಭವಾದನಂತರ ತೀರಾ ಒಂಟಿಯಾಗಿ ಬಿಟ್ಟಿದ್ದರು. ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವ ಅಗತ್ಯ ಯಾರಿಗೂ ಕಂಡುಬರಲಿಲ್ಲ. ಅವರನ್ನು ನಾನು ಕರೆದುಕೊಂಡು ಹೋಗಿದ್ದೆ. ಆಕ್ಸಿಡೆಂಟ್ ಆಗಿ ನಡೆಯಲು ಶ್ರಮ ಪಡುತ್ತಿದ್ದ ಅವರನ್ನು ಸರಿಯಾಗಿ ಯಾರೂ ನಡೆಸಿಕೊಳ್ಳಲಿಲ್ಲವೆಂದೇ ನನ್ನ ಭಾವನೆ. ಊಟ ಮಾತ್ರ ತುಂಬಾ ರುಚಿಕಟ್ಟಾಗಿ ಮಾಡಿದ್ದರು. ಇದಕ್ಕೆ ಕಾರಣ ನಮ್ಮ ಕಡಿದಾಳು ಪ್ರಕಾಶ್. ತನಗೆ ವಹಿಸಿದ ಹೊಣೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ ಅವರು ಎರಡೂ ದಿನ ತಮ್ಮ ಅಡುಗೆಕೋಣೆಯನ್ನು ಬಿಟ್ಟು ಹೊರಬರಲಿಲ್ಲ. ಯಾವ ಕೆಲಸಕೊಟ್ಟರೂ ಅತ್ಯಂತ ಪ್ರಾಮಾಣಿಕವಾಗಿ ಮಾಡುವ ಕಡಿದಾಳು ಪ್ರಕಾಶರನ್ನು ಎಷ್ಟು ಜನ ಗುರುತಿಸಿದ್ದಾರೊ ತಿಳಿಯಲಿಲ್ಲ.
ಎರಡನೆಯ ದಿನದ ಕಾರ್ಯಕ್ರಮಗಳಂತೂ ಅಧ್ವಾನದ ಸಂತೆ. ಎರಡೂ ವೇದಿಕೆಯಲ್ಲಿ ನಡೆಯಬೇಕಾಗಿದ್ದ ಗೋಷ್ಠಿಗಳು ಒಂದು ಗಂಟೆ ತಡವಾಗಿ ಪ್ರಾರಂಭವಾದವು. ಪ್ರಧಾನ ವೇದಿಕೆಯಲ್ಲಿ (ವಿಶ್ವಮಾನವ ವೇದಿಕೆ) ಕವಿಗೋಷ್ಠಿ. ೩೯ ಜನ ಕವಿಗಳು. ಉಪವೇದಿಕೆಯಲ್ಲಿ (ಕಡಿದಾಳು ಮಂಜಪ್ಪ ವೇದಿಕೆ) ಎರಡು ಗೋಷ್ಟಿ- ನಮ್ಮ ಹಿರಿಯರ ಸಾಹಿತ್ಯ ಮತ್ತು ಅನಂತ ಸಂವಾದ. ನಾನು ಕವಿಗೋಷ್ಠಿಯ ಕೊರತಕ್ಕೆ ಹೆದರಿ ಇತ್ತ ಹಾಜರಾದೆ. ಕುವೆಂಪು ಮತ್ತು ಹಾಮಾನರ ಬಗ್ಗೆ ಪ್ರೊ.ಎಲ್.ಸಿ.ಸುಮಿತ್ರಾ ತುಂಬಾ ಚೆನ್ನಾಗಿಯೇ ಮಾತನಾಡಿದರು. ಆದರೆ ಅವರಿಗೆ ಕೊಟ್ಟ ಅವಧಿ ಮಾತ್ರ ತೀರಾ ಕಡಮೆಯಾಯಿತು ಎಂದೆನಿಸಿತು. ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗವಹಿಸಿದ್ದರು. ಆದರೂ ತಮಗೆ ಕೊಟ್ಟ ಅವಧಿಯಲ್ಲಿಯೇ ಸುಮಿತ್ರಾ ಚೆಂದವಾಗಿ ಈ ಹಿರಿಯರ ಪರಿಚಯವನ್ನು ಮಾಡಿಕೊಟ್ಟರು. ಅನಂತಮೂರ್ತಿ ಮತ್ತು ತೇಜಸ್ವಿಯಬಗ್ಗೆ ಡಾ. ಎಚ್.ಟಿ.ಕೃಷ್ಣಮೂರ್ತಿ ತುಂಬಾ ಚೆಂದವಾಗಿ ಮಾತನಾಡಿದರು. ಇಬ್ಬರಿಗೂ ಇರುವ ವ್ಯತ್ಯಾಸ ಮತ್ತು ಇವರಿಬ್ಬರೂ ಮಾಡಿದ ಸಾಧನೆಯನ್ನು ವಿವರಿಸಿದರು. ಎಂಕೆ.ಇಂದಿರಾ ಮತ್ತು ಎಸ್.ವಿ.ಪರಮೇಶ್ವರ ಭಟ್ಟರ ಬಗ್ಗೆ ಪ್ರೊ.ಕೆ.ಟಿ.ಪಾರ್ವತಮ್ಮ ಮಾತ್ರ ನೀರಸವಾಗಿ, ಪ್ರಬಂಧವನ್ನು ಮಂಡಿಸಿದರು. ಅವರ ಪ್ರಬಂಧ ಯಾರಮೇಲೂ ಪ್ರಭಾವ ಬೀರಲಿಲ್ಲ. ಎಂಸಿಯ ಹಾವಳಿಯಂತೂ ತೀರಾ ಇತ್ತು ಇಲ್ಲಿ.
ನಂತರ ಹನ್ನೆರೆಡೂ ಮುಕ್ಕಾಲಿಗೆ (ತೊಂಭತ್ತು ನಿಮಿಷ ತಡವಾಗಿ) ಅನಂತ ಸಂವಾದ ನಡೆಯಿತು. ಸುಮಾರು ಇಪ್ಪತ್ತು ಜನರನ್ನು ಅವರಿಗೆ ಪ್ರಶ್ನೆ ಮಾಡಲು ಆಹ್ವಾನಿಸಿದ್ದರು. ಅವರೆಲ್ಲರನ್ನೂ ಪರಿಚಯಿಸಿ, ಕುಳ್ಳಿರಿಸಿದಮೇಲೆ ಪ್ರಶ್ನೆಗಳು ಪ್ರಾರಂಭವಾದವು. ಒಂದು ಪ್ರಶ್ನೆಗೆ ಹದಿನೈದು ನಿಮಿಷಗಳ ಉತ್ತರ. ಅನಂತಮೂರ್ತಿಯವರ ಮಾತಿನಲ್ಲಿ ಹೊಸತೇನೂ ಇರಲಿಲ್ಲ. ಅವರ ಎಂದಿನ ಲೇಖನಗಳ ಸಾರಾಂಶವೇ ಅಡಕವಾಗಿರುತ್ತಿತ್ತು. ಅವರ ಮಾತುಗಳನ್ನು ಒಮ್ಮೆ ಕೇಳಿದವರಿಗೆ ಹೊಸತೇನೂ ಇರಲಿಲ್ಲ. ಊರಿನ ಜನ ಮಾತ್ರ ಅಭಿಮಾನದಿಂದ, ಆಸಕ್ತಿಯಿಂದ ಅವರನ್ನು ಆರಾಧನಾಭಾವದಿಂದ ನೋಡುತ್ತಿದ್ದರು.
ಮಧ್ಯಾಹ್ನ ವಿಶ್ವಮಾನವವೇದಿಕೆಯಲ್ಲಿ ನಡೆದ ಗೋಷ್ಠಿ ಗೊಂದಲದಿಂದ ಕೊನೆಗೊಂಡಿತು. ಸಮಕಾಲೀನ ಸವಾಲುಗಳು ಎಂಬ ವಿಷಯದ ಮೇಲೆ ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಪ್ರೊ.ವಿ.ಎಸ್.ಶ್ರೀಧರರ ಮಾತು ಮುಗಿದನಂತರ ನವವಸಾಹತುಶಾಹಿ ಮತ್ತು ದುಡಿವವರ್ಗವೆನ್ನುವ ವಿಷಯದಮೇಲೆ ಡಾ.ಎಂ.ವಿ.ವಸುರವರು ಪ್ರಾರಂಭದಲ್ಲಿಯೇ ಬಿಜೆಪಿ ಮತ್ತು ನರೇಂದ್ರಮೋದಿಯವರ ಪ್ರಸ್ತಾವವನ್ನು ಅನಗತ್ಯವಾಗಿ ಮಾಡುತ್ತಾ ಟೀಕೆಯನ್ನು ಪ್ರಾರಂಭಿಸಿದಾಗ ಸಭೆಯಲ್ಲಿ ಕುಳಿತಿದ್ದ ಮಾಜಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಸರಿಯಾಗಿ ಗದರಿಸಿದರು. ವಿಷಯವನ್ನು ಬಿಟ್ಟು ಮಾತನಾಡಬೇಡಿ ಎಂದರು. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಉತ್ತರ ಬಂದಿತು. ಅವರ ಪರವಾಗಿ ಕೆಲವರು ಸಂಯೋಜಕರೂ ಸೇರಿದಾಗ ಸಭೆಯಲ್ಲಿದ್ದವರೆಲ್ಲರೂ ಅದನ್ನು ವಿರೋಧಿಸಿದರು. ಆಗ ಹಾಲಿ ಶಾಸಕರಾದ ಕಿಮ್ಮನೆಯವರು ಮಧ್ಯೆ ಪ್ರವೇಶಿಸಿ ಇಲ್ಲೀಗ ವಿಷಯಾಂತರವಾಗಿದೆ ಎಂದು ಒಪ್ಪಿಕೊಂಡು ಎಲ್ಲರ ಕ್ಷಮೆಯಾಚಿಸಿ ಗೊಂದಲವನ್ನು ತಿಳಿಯಾಗಿಸಿದರು. ವಸುರವರ ಮಾತು ಇಲ್ಲಿಗೇ ನಿಂತಿತು.
ಒಂದು ರೀತಿಯಲ್ಲಿ ಇಲ್ಲಿ ನಡೆದ ಸಾಹಿತ್ಯ ಸಂಮೇಲನ ಬಂಡಾಯ ಸಂಮೇಲನದ ಹಾಗೆ ಕಾಣಿಸಿತು. ಸಾಹಿತ್ಯದ ಕುರಿತಾಗಿರುವ ವಿಷಯಗಳಿಗೆ ಪ್ರಾಧಾನ್ಯ ಕೊಡುವುದಕ್ಕಿಂತ ಬೇರೆ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟಿರುವ ಹಾಗೆ ಅನಿಸುತ್ತಿತ್ತು. ;ಶಿಕ್ಷಣ, ಚಳುವಳಿಗಳು, ಕೃಷಿ, ಧರ್ಮ, ರಾಜಕಾರಣ ಹೀಗೆ ಇಂತಹ ವಿಷಯಗಳ ಕುರಿತು ಭಾಷಣಗಳು ನಡೆದಿವೆ. ಸಾಹಿತ್ಯಕ್ಕೂ ಇವುಗಳಿಗೂ ಇರುವ ಸಂಬಂಧವೇನು ನನಗೆ ತಿಳಿಯಲಿಲ್ಲ. ಸಾಹಿತ್ಯದ ಆಸಕ್ತಿಯನ್ನು ಮೂಡಿಸುವ , ಅಭಿರುಚಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳೇ ನಡೆದಿಲ್ಲ. ಭಾಷಣಕಾರರೆಲ್ಲಾ ಒಂದು ರೀತಿಯ ಫೈರ್ ಬ್ರಾಂಡ್‍ಗಳೇ. ಮಾತುಗಳೆಲ್ಲವೂ ಪ್ರಸ್ತುತ ರಾಜಕಾರಣದತ್ತ, ಬಿಜೆಪಿಯನ್ನು ನಿಂದಿಸುವತ್ತ ಗಿರಕಿಹೊಡೆಯುತ್ತಿದ್ದವು(ಬಿಜೆಪಿಯ ಕುರಿತು ನನಗೆ ಯಾವ ರೀತಿಯ ಅನುಕಂಪವೂ ಇಲ್ಲ). ಶುದ್ಧ ಸಾಹಿತ್ಯದತ್ತ , ಇತ್ತೀಚೆಗೆ ಬರುತ್ತಿರುವ ಪುಸ್ತಕಗಳ ಕುರಿತು ಮಾತುಗಳಿದ್ದರೆ ಚೆಂದವಿರುತ್ತಿತ್ತು ಎನ್ನುವ ಭಾವನೆ ನನ್ನ ಒಬ್ಬನದೇ ಅಲ್ಲ. ಹಲವರಿದ್ದಿತ್ತು.

ಶನಿವಾರ ಮತ್ತು ಭಾನುವಾರ ಊರಿನ ಸಂಗೀತ ಶಾಲೆಯ -ಸುಮುಖ ಸಂಗೀತಶಾಲೆಯ ವಾರ್ಷಿಕೋತ್ಸವದ ಕಾರಣ ರಾಮಮಂದಿರದಲ್ಲಿ, ದೇವಸ್ಥಾನದ ಅಂಗಳದಲ್ಲಿ ಮಕ್ಕಳ ಮತ್ತು ಹಿರಿಯರ ಸಂಗೀತ ಕಚೇರಿ ಇತ್ತು. ಪುದುಕೋಟೆ ರಾಮನಾಥನ್ ರವರ ಪೀಟಿಲು ವಾದನ ಮನಸ್ಸನ್ನು ತೃಪ್ತಿಪಡಿಸಿತು. ಒಳ್ಳೆಯ ಸಂಗೀತಕ್ಕಾಗಿ ಹಪಹಪಿಸುತ್ತಿದ್ದ ಕಿವಿಗಳು ಈ ಕಾರ್ಯಕ್ರಮದಿಂದ ತುಂಬಾ ಖುಷಿಪಟ್ಟವು.

ವಾರದ ಓದು. ೧. ಟಿಕ್ ಟಕ್ ಪೆನ್ನು-ನರೇಂದ್ರ ಪೈ (೧೧೦), ಹಿರಿಯರು ಹೇಳಿದ ಕೆಲವು ಕಥೆಗಳು(೧೧೯), ಈಸೋಫನ ಕಥೆಗಲು(೧೪೯) ಮತ್ತು ಅಕ್ಬರ್ ಬೀರಬಲರ ಕಥೆಗಳು (೨೦೬)- ಮೂರು ಪುಸ್ತಕಗಳ ಲೇಖಕರು-ಪ್ರೊ.ಎನ್.ಗೋಪಾಲಕೃಷ್ಣ ಉಡುಪ,

2 comments:

  1. ಇಂದು ಪ್ರತಿಯೊಂದು ರಂಗದಲ್ಲೂ ಫಯರ್ ಬ್ರಾಂಡ್ ಗಳಿಗೆ ಸಾಕಷ್ಟು ತಿನಿಸುಗಳು ಇರುವಾಗ ಸಾಹಿತ್ಯ ಸಮ್ಮೇಲನದಲ್ಲಿ ರಾಜಕೀಯವನ್ನು ಎಳೆದು ತರಬೇಕಾಗಿರಲಿಲ್ಲ ಎಂಬ ನಿಮ್ಮ ಮಾತು ತುಂಬ ಸರಿಯಾದದ್ದು. ತಮಾಷೆ ಎಂದರೆ ನಮ್ಮ ಎಷ್ಟೋ ಸಾಹಿತಿಗಳಿಗೆ ರಾಜಕೀಯವೇ ಬಂಡವಾಳ: ಸಾಹಿತ್ಯವಲ್ಲ!
    ಅಶೋಕವರ್ಧನ

    ReplyDelete