ತಕಿಟ ತಕಿಟ ಧೋಂ

Thursday, October 14, 2010

ರಾಘವ-ಓದಿನ ಮನೆ: ಒಡೆದು ಹೋದ ಕನಸು.

"ರಾಘವ-ಓದಿನ ಮನೆ"- ಒಡೆದುಹೋದ ಕನಸು.


ನಾನು ನಿವೃತ್ತಿಯಾದ ನಂತರ ಊರಿಗೆ ಮರಳಲು ಸಿದ್ಧನಾಗುವಾಗ ನನ್ನೆಲ್ಲಾ ಪುಸ್ತಕಗಳನ್ನು ಊರಿಗೆ ತಂದು ಒಂದು ಮುಕ್ತ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿದ್ದೆ. ಆ ವೇಳೆಗೆ ನನ್ನಣ್ಣ ತೀರಿಹೋಗಿದ್ದರು. ಅವರಿಗೂ ಹೊಸ ಪುಸ್ತಕಗಳ ಹುಚ್ಚು ಇದ್ದಕಾರಣ ಅವರ ಹೆಸರಿನಲ್ಲಿಯೇ ಒಂದು ಊರವರಿಗಾಗಿ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿ "ರಾಘವ-ಓದಿನ ಮನೆ" ಎಂದು ನಾಮಕರಣವನ್ನೂ ಮಾಡಿದ್ದೆ. ನನ್ನ ಗೃಹಪ್ರವೇಶದ ದಿನ ಅದರ ಉದ್ಘಾಟನೆ ಮಾಡುವುದು ಎಂದೂ ನಿಶ್ಚಯವಾಗಿತ್ತು. ಅಣ್ಣ ಮನೆಯ ಅಂಗಳದಲ್ಲಿ ಒಂದು ಸಣ್ಣ ಕೊಠಡಿಯನ್ನು ಕಟ್ಟಿಕೊಂಡಿದ್ದರು. ಅವರ ದುರಾದೃಷ್ಟದಿಂದ ಅಲ್ಲಿ ಅವರು ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಕಾಲ ಅವರಿಗೆ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ನಾನು ಅದಕ್ಕೆ ಸುಣ್ಣ ಬಣ್ಣವನ್ನು ಹೊಡೆಯಿಸಿ, ವಿದ್ಯುಚ್ಛಕ್ತಿ ಸಂಪರ್ಕವನ್ನು ಸರಿಪಡಿಸಿ, ಹಳೆಯ ಮನೆಯ ಎರಡು ದೊಡ್ಡ ಬೀರುಗಳನ್ನು ತಂದು ಅದರ ತುಂಬಾ ಪುಸ್ತಕಗಳನ್ನು ತುಂಬಿಸಿದ್ದೆ. ನನ್ನ ಬಳಿಯಲ್ಲಿ ಹಿರಿಯ ಲೇಖಕರ (ಅನಕೃ, ತರಾಸು ಮೊದಲಾದವರ) ಪುಸ್ತಕಗಳು ಇಲ್ಲದಿದ್ದರೂ , ಹೊಸ ಲೇಖಕರ(ಕಾಯ್ಕಿಣಿ, ರವಿ ಬೆಳೆಗೆರೆ, ಜೋಗಿ, ಛಂದ ಪ್ರಕಟನೆಗಳು) ಪುಸ್ತಕಗಳು ತುಂಬಾ ಇದ್ದವು. 
ಗೃಹ ಪ್ರವೇಶದ ದಿನ ನಾನು ಬಹಳ ವಾಗಿ ಮೆಚ್ಚಿಕೊಳ್ಳುವ ಹಿರಿಯರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಂದ ಅದರ ಉದ್ಘಾಟನೆಯನ್ನೂ ಮಾಡಿದೆ ಮತ್ತು ಊರವರಿಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಆಹ್ವಾನವನ್ನೂ ನೀಡಿದೆ. ಸದಸ್ಯ ಶುಲ್ಕವೆಂದು ಹಣ ವಸೂಲಿಯಿರಲಿಲ್ಲ. ತೆಗೆದುಕೊಂಡು ಹೋದ ಪುಸ್ತಕಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದರೆ ಸಾಕು ಎಂದು ಹೇಳಿದ್ದೆ. ಸದಸ್ಯರ ಪರಿಚಯವನ್ನು ತಿಳಿಸುವ ಒಂದು ಪರಿಚಯ ಪತ್ರವನ್ನು ಅಚ್ಚುಮಾಡಿಸಿ ಇಟ್ಟುಕೊಂಡಿದ್ದೆ. ನನ್ನ ಗ್ರಹಚಾರವೆನ್ನುವಂತೆ ಅದನ್ನು ಕೇಳಿಕೊಂಡು ಯಾರೂ ಬರಲಿಲ್ಲ. ಈಗ ಎರಡು ವರ್ಷಗಳಾಗುತ್ತಾ ಬಂದಿದೆ.  ಪ್ರತಿವಾರವೂ ಎನ್ನುವಂತೆ ನನ್ನ ಸಂಬಂಧಿಕರಿಬ್ಬರು ಮಾತ್ರ ನಿಯಮಿತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿರುತ್ತಾರೆ. ಇಬ್ಬರಿಗೂ ಪ್ರಾಯ ಎಪ್ಪತ್ತೆರೆಡು ಆಗಿದೆ. ಪುಸ್ತಕದ ಹುಚ್ಚು ಅತಿಯಾಗಿದೆ ಅವರಿಗೆ. ಹೊಸಪುಸ್ತಕಗಳನ್ನು ಓದುವುದೇ ಸುಖವೆಂದು ಖುಷಿಯಲ್ಲಿದ್ದಾರೆ. ನಿನ್ನಿಂದಾಗಿ ಈ ಲೇಖಕರನ್ನು ಓದಿದಂತಾಯಿತು ಎಂದು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಇವರು ಬಿಟ್ಟರೆ ಮೂರನೆಯವರು ಕಾಣುತ್ತಿಲ್ಲ. 

ಏಕೆ ಹೀಗೆ? ಓದುಗರು ಎಲ್ಲರೂ ಎಲ್ಲಿ ಹೋದರು. ಅರ್ಥವಾಗುತ್ತಿಲ್ಲ. ನನ್ನೂರು ಸಂಸ್ಕೃತಿ ಸಂಪನ್ನವಾದ ಊರು ಎಂದೇ ಪ್ರಸಿದ್ಧವಾಗಿತ್ತು. ಪುಸ್ತಕದ ಹುಚ್ಚು ಇರುವವರು ತುಂಬಾ ಜನರಿದ್ದರು. ಈಗ ಯಾರಿಗೂ ಪುಸ್ತಕಗಳು ಬೇಡವಾದವೆ? ಒಂದೂ ತಿಳಿಯುತ್ತಿಲ್ಲ. ಹೊಸ ಹೊಸ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದೇನೆ. ನಾವು ಮೂರು ಜನ ಮಾತ್ರ ಓದುತ್ತಿದ್ದೇವೆ. ಈಗ ನನಗೆ ಸಮಸ್ಯೆ ಬಂದಿರುವುದು ನನ್ನ ಬಳಿ ಇರುವ ಪುಸ್ತಕಗಳ ರಾಶಿಯನ್ನು ಏನು ಮಾಡುವುದು ಎನ್ನುವುದು. ಹಾಗಾಗಿ ನಿಧಾನವಾಗಿ ಆಸಕ್ತರಿಗೆ ನನ್ನ ಬಳಿ ಇರುವ  ಮತ್ತು ಓದಿಯಾದ ಪುಸ್ತಕಗಳನ್ನು ನಿರ್ಮೋಹಿಯಾಗಿ ದಾನ ಮಾಡುತ್ತಿದ್ದೇನೆ. ಇನ್ನೈದು ವರ್ಷಗಳಲ್ಲಿ ನನ್ನ ಬಳಿಯಿರುವ ಪುಸ್ತಕಗಳನ್ನೆಲ್ಲವನ್ನೂ ಹೀಗೆ ಕರಗಿಸಬೇಕು ಎಂದು ನಿರ್ಧರಿಸಿದ್ದೇನೆ.  

ನನ್ನ ಓದಿನ ಮನೆಯ ಕನಸು ಒಡೆದುಹೋಗಿದೆ. ಕಾಲ ಸರಿಯುತ್ತಿದೆ. ಪ್ರಾಯವಾಗುತ್ತಿದೆ. ಪುಸ್ತಕಗಳನ್ನು ಆದಷ್ಟು ಬೇಗ ಓದಿ ಕರಗಿಸಬೇಕು.  

1 comment:

  1. ಯ್ಯೋ ಯ್ಯೋ
    ನಾನು ನಿಮ್ಮ ಪುಟಗಳಲ್ಲಿ ಹಿಂದೆ ಹಿಂದೆ ಹೋಗುತ್ತಿದ್ದೇನೆ. ಅಂದು ನಿಮ್ಮಲ್ಲಿಗೆ ಬಂದಾಗ, ನಿಮ್ಮ ಸಾರ್ವಜನಿಕ ಗ್ರಂಥಾಲಯ ನೋಡಬೇಕು ಎನ್ನುವುದು ಭಾವದ ತುದಿಯಲ್ಲಿತ್ತು. ಆದರೆ ಎಲ್ಲಿ ನಿಮಗೆ ತೊಂದರೆಯಾಗುತ್ತೋಂತ ಸುಮ್ಮನಿದ್ದೆ, ನೀವು ತೋರಿಸಿದ್ದನ್ನಷ್ಟೇ ನೋಡಿ ಬಂದಿದ್ದೆ. ಆಗ ಈ ಪುಟ ನೋಡಿದ್ದರೆ ನನ್ನ ಪುಕ್ಕಟೆ ಅಭಿಪ್ರಾಯ (ನಿಮಗೆ ಸಲಹೆ ಅಲ್ಲ)ಕೊಡುತ್ತಿದ್ದೆ. ಪಠ್ಯ, ಗೈಡ್, ಗ್ರಂಥಾಲಯದ ಅನುದಾನಗಳ ದಾರಿ ಹಿಡಿದು ವಶೀಲಿ, ಸಗಟು ಖರೀದಿ ಇತ್ಯಾದಿ ಯಾವುದೂ ನೆಚ್ಚದೇ ಕೇಳಿ ಬರುವವರಿಗೆ ಒಳ್ಳೇ ಸಾಹಿತ್ಯ ಕೊಡಬೇಕು, ಸುಲಭ ಬೆಲೆಯಲ್ಲಿ ಪ್ರಕಟಿಸಬೇಕು ಎಂದೇ ತೊಡಗಿದವನು, ನಡೆದವನು ನಾನು. (ನೀವು ಬಿಡಿ, ಒಬ್ಬೇ ಒಬ್ಬ ಮೇಷ್ಟ್ರು ಹೇಳಲಿ, ‘ಅತ್ರಿಯವ ಲೈಬ್ರೆರಿಗೆ ಹಾಕ್ಸಿ’ ಎಂದಾಂತ)ಪ್ರಕಾಶನ ಮುಚ್ಚಿದ ಕಥೆ ನೋಡಿದ್ದೀರಿ, ಈಗ ಮಾರುವುದೂ ಅದೇ ದಾರಿ ಹಿಡಿದಿರುವುದಕ್ಕೆ ನಾನು ‘ವೃತ್ತಿ’ ಬದಲಾವಣೆಯ ಮಾತು ಯೋಚಿಸಿದ್ದು. ಕನ್ನಡದಲ್ಲಿ ಹೊಸ ಪುಸ್ತಕ ಏನು ತರಿಸಿದರೂ ಎರಡು ಪ್ರತಿಗಿಂತ ಹೆಚ್ಚಿಗೆ ಇದ್ದರೆ ಅನಿವಾರ್ಯವಾಗಿ ಯಾವುದಾದರೂ ಗ್ರಂಥಾಲಯ ಅನಿವಾರ್ಯವಾಗಿ ತುಂಬಿಕೊಳ್ಳುವುದನ್ನು ಕಾದು ಕೂರುವ ಸ್ಥಿತಿ ಇಂದಿನದು! ಹಾಗಾಗಿ (ನಿಮಗೆ ಹೇಳಿರಲಿಲ್ಲ) ನೀವು ನಿರೀಕ್ಷಿಸಿದ ಎಷ್ಟೋ ಪುಸ್ತಕಗಳನ್ನು ತರಿಸುವುದರಲ್ಲೇ ನಾನು ನಿಧಾನಿಯಾಗಿದ್ದೇನೆ, ಎಷ್ಟೋ ಬಿಟ್ಟು ಬಿಡುತ್ತಲೂ ಇದ್ದೇನೆ. ಉದಾ: ಶಿವಪ್ರಕಾಶ್ ಸಮಗ್ರ ಕವನ ನೋಡಿ - ಪ್ರಕಾಶಕ ಮಾರಾಟಗಾರನಿಗೆ ಕೊಡುವ ರಿಯಾಯ್ತಿ ದರದಲ್ಲಿ ಪ್ರಕಟಣ ಪೂರ್ವ ಎಂದು ಇರುವ ನಾಲ್ಕು ಮಂದಿಗೆ ನೇರ ಹೊತ್ತು ಹಾಕಿದ. (ಕೊಂಡ ಮಾಲಿಂಗರದೋ ನಿಮ್ಮದೋ ಖಂಡಿತಾ ತಪ್ಪಿಲ್ಲ) ಮತ್ತೆ ನನಗೆ "ಸಾರ್, ಭಾರೀ ಬೇಡಿಕೆ ಉಂಟೂ. ಐದು ಕಳಿಸ್ಲಾ ಹತ್ತೂ..." ಅಂತ ದುಂಬಾಲು ಬಿದ್ದ. ನಾನು ನೈಜಾಸಕ್ತಿಯನವನೊಬ್ಬ ಕೇಳಿದರೂ ತರಿಸಿಕೊಳ್ತೇನೆ ಎಂದೆ, ಇಂದಿನವರೆಗೆ ಯಾರೂ ಬಂದಿಲ್ಲ. ಹಾಗೆ ತರಿಸಿಟ್ಟಿದ್ದರೆ ಯಾವುದೋ ಗ್ರಂಥಾಲಯ ಅನುದಾನಕ್ಕೆ ಅವಶ್ಯ ಹೋಗುತ್ತಿತ್ತು; ಆದರೆ ಈಗಾಗಲೇ ನನ್ನಲ್ಲಿರುವ ಇನ್ನೊಂದು ಪುಸ್ತಕದ ಬದಲು ಹೋಗುತ್ತಿತ್ತು ಅಷ್ಟೇ! ವ್ಯಾಪಾರಿಯಾಗಿ ನಾನು ಇರುವುದನ್ನು ಅಡಿಗರ ವಿರೋಧಿ - ಇರುವುದ ಬಿಟ್ಟು ಇಲ್ಲದುದರೆಡೆಗೆ ತುಡಿಯಲಾರೆ :-)
    ಬಿಡಿ, ಊರವರಿಗೆ ಬೇಡವಾದರೆ ಸಾಯ್ಲಿ. ನಿಮ್ಮಾಸಕ್ತಿಯನ್ನು ಯಾಕೆ ಹಳಕೊಳ್ತೀರಿ, ಪ್ರಾಯ ಯಾಕೆ ಎಣಿಸ್ತೀರಿ.
    ಅಶೋಕವರ್ಧನ

    ReplyDelete