ತಕಿಟ ತಕಿಟ ಧೋಂ

Friday, October 22, 2010

ಎಲ್ಲಿ ಹೋದರು ನನ್ನವರು ?





ಎಲ್ಲಿ ಹೋದರು ನನ್ನವರು?


ನನ್ನ ವೃತ್ತಿಜೀವನದ ಮೂವತ್ತೈದು ವರ್ಷಗಳಲ್ಲಿ ಕೊನೆಯ ಐದು ವರ್ಷ ಕಾಲೇಜಿನ ಪ್ರಾಂಶುಪಾಲನಾಗಿ ಕೆಲಸಮಾಡಿ ಅದೇ ಹುದ್ದೆಯಲ್ಲಿಯೇ ನಿವೃತ್ತನಾದೆ. ಸಾಧಾರಣವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥನಾದವನು ನಿವೃತ್ತಿಯಾದನಂತರ ತೀರಾ ಒಂಟಿಯಾಗಿರುತ್ತಾನೆ ಎಂದು ಕೇಳಿದ್ದೆ. ಅದು ನನ್ನ ಅನುಭವಕ್ಕೂ ಬಂದಿತು. ಈಗ ನನ್ನದೇ ಊರಿಗೆ ಮರಳಿ ಬಂದನಂತರ ನನ್ನ ಲೋಕ-ಸ್ನೇಹಲೋಕ ಇದ್ದಕ್ಕಿಂದಂತೆ ಕರಗಿ ಹೋಗಿದೆ. ನಿವೃತ್ತನಾದ ಹೊಸತರಲ್ಲಿ ಮತ್ತು ಊರಿಗೆ ಬಂದ ಪ್ರಾರಂಭದಲ್ಲಿ ಸ್ನೇಹಿತರಿಗೆ ಮೊಬೈಲಿನಲ್ಲಿ ಫೋನ್ ಮಾಡುತ್ತಿದ್ದೆ. ಆ ಕಡೆಯಿಂದ ರಿಂಗ್ ಕೇಳಿಸುತ್ತಿತ್ತು. ಕೆಲವು ಕ್ಷಣದ ನಂತರ ಸಂಪರ್ಕ ಕಡಿದು ಹಾಕಲಾಗಿದೆ ಎಂದು ಸಂದೇಶ ಬರುತ್ತಿತ್ತು. ಇವನೆಲ್ಲಿ ಶನಿ ಎಂದು ಅವರು ಅಂದುಕೊಳ್ಳುತ್ತಿದ್ದರೇನೋ. ಎರಡುಬಾರಿ ಇದು ಅನುಭವಕ್ಕೆ ಬಂದ ನಂತರ ಮತ್ತೆ ಯಾರಿಗೂ ಫೋನ್ ಮಾಡಲಿಲ್ಲ. 


ತಪ್ಪು ನನ್ನದೇ. ನಾನೇನೋ ನಿವೃತ್ತ. ಸಮಯವೆಲ್ಲ ನನ್ನದೇ. ಆದರೆ ನನ್ನ ಸ್ನೇಹಿತರಿಗೆ ಕೆಲಸವಿರುತ್ತದೆ. ಅವರಿಗೆ ಸಮಯ ಅಮೂಲ್ಯವಾಗಿರುತ್ತದೆ. ಹಾಗಾಗಿ ಯಾರಿಗೂ ತೊಂದರೆ ಕೊಡಬಾರದೆಂದು ಸುಮ್ಮನಾದೆ. ಇದರಿಂದ ಒಂದು ರೀತಿಯ ಕೀಳರಿಮೆ ಕೂಡ ನನ್ನಲ್ಲಿ ಬೆಳೆಯಲು ಪ್ರಾರಂಭವಾಯಿತು. ಯಾರಿಗಾದರೂ ಫೋನ್ ಮಾಡಬೇಕಾದರೆ ನೂರು ಬಾರಿ ಯೋಚಿಸಬೇಕಾಯಿತು. ಇದಕ್ಕಿಂತ ಮೌನವೇ ಲೇಸು ಎಂದು ಈಗ ಯಾರಿಗೂ ಫೋನ್ ಮಾಡುತ್ತಿಲ್ಲ. ಅವರ ವಿಷಯಗಳ ಬಗ್ಗೆ ಕುತೂಹಲ ತೋರಿಸುವುದಿಲ್ಲ. 


ಜನ ಏಕೆ ಹೀಗೆ ವರ್ತಿಸುತ್ತಾರೆ ಎನ್ನುವುದು ತಿಳಿಯುತ್ತಿಲ್ಲ. ನಾನೇನೂ ಅಂತಹ ದುಷ್ಟನಾಗಿರಲಿಲ್ಲ. ಸಂಪರ್ಕಕ್ಕೆ ಬಂದ ಎಲ್ಲರೊಡನೆಯೂ ಸರಿಯಾಗಿ ನಡೆದುಕೊಂಡಿದ್ದೆ. ವಿದ್ಯಾರ್ಥಿಗಳ ಜತೆಯಲ್ಲಿ, ಸಹೋದ್ಯೋಗಿಗಳ ಜತೆಯಲ್ಲಿ ಸರಿಯಾಗಿ ವರ್ತಿಸಿದ್ದೆ. ಯಾರೊಡನೆಯೂ ಜಗಳವನ್ನು ಮಾಡಿರಲಿಲ್ಲ. ನಗುತ್ತಾ, ನಗಿಸುತ್ತಾ ಇದ್ದೆ. ಆದರೂ.....?


ನಾನೀಗ ಕೊರಗುತ್ತಿಲ್ಲ. ವೃತ್ತಿಜೀವನದ ಉದ್ದಕ್ಕೂ ಸಂಗ್ರಹಿಸಿದ ಪುಸ್ತಕಗಳು ಇವೆ. ಸಂಗ್ರಹಿಸಿದ ಸಂಗೀತದ ಮುದ್ರಿಕೆಗಳಿವೆ. ಅವೆಲ್ಲವನ್ನೂ ನನ್ನ ಐಪಾಡ್‍ಗೆ ಹಾಕಿ, ದಿನವಿಡೀ ಕೇಳುತ್ತಾ, ಒಂದು ಕೈಯಲ್ಲಿ ಪುಸ್ತಕ, ಮತ್ತೊಂದರಲ್ಲಿ ಹೊಗೆಬತ್ತಿ ಹಿಡಿದುಕೊಂಡು ಲೋಕ ಮರೆಯುತ್ತಿದ್ದೇನೆ. ಮೂರು ಮತ್ತು ನಾಲ್ಕು ವರ್ಷದ ಇಬ್ಬರು ಮೊಮ್ಮಕ್ಕಳಿದ್ದಾರೆ-ಅಣ್ಣನ ಮೊಮ್ಮಕ್ಕಳು ನನ್ನವೂ ತಾನೇ. ಅವರು ಮನೆಯಿಡೀ ಓಡಾಡಿಕೊಂಡಿರುವಾಗ ಫ್ಯಾನ್ ಕೂಡ ಅಗತ್ಯವಿರುವುದಿಲ್ಲ. ಮನಸ್ಸಿಗೂ ತಂಪು.ಇಂತಹ ಸುಖದ ಸಮಯದಲ್ಲಿ  ಕೆಲವೊಮ್ಮೆ ಸ್ವರ್ಗಕ್ಕೆ ಬೆಂಕಿ ಹಚ್ಚಬೇಕೆನಿಸುತ್ತದೆ. ಆದರೂ ಮನದ ಮೂಲೆಯಲ್ಲಿ ಆಗಾಗ ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಮನುಷ್ಯರ ವರ್ತನೆಗಳು ಅಚ್ಚರಿಯನ್ನುಂಟುಮಾಡುತ್ತಿದೆ. 


ಅವಧಿ ಮುಗಿಯುತ್ತಾ ಬಂದಿದೆ ಎಂದೆನಿಸುತ್ತಿದೆ. ಸರದಿಯಲ್ಲಿ ನಿಂತಿದ್ದೇನೆ ಎಂದೂ ಭಾಸವಾಗುತ್ತಿದೆ. ಅದರ ಬಗ್ಗೆ ಭಯವೇನೂ ಕಾಡುತ್ತಿಲ್ಲ. ಹೊತ್ತು ಹೋಗುವ ಮುನ್ನ (ಬಸವಣ್ಣನವರ ಮಾತು) ಓದಿ ಮುಗಿಸಬೇಕು. ಓದಿನ ಕ್ಷಣದಲ್ಲಿ ಸಿಗುವ ಸುಖಕ್ಕಿಂತ ಮಿಗಿಲಾದ ಸುಖವನ್ನು ಕಳೆದುಕೊಂಡ ಸ್ನೇಹಿತರ ಮಾತಿನಲ್ಲಿ ನಾನು ಮತ್ತೆ ಪಡೆಯಲಾರನೇನೋ. 


ಕಳೆದವಾರ ಓದಿದ ಪುಸ್ತಕಗಳು: ಬಾನಯಾನ-ಕ್ಯಾಪ್ಟನ್ ಗೋಪಿನಾಥ್  ಮತ್ತು ಹೆಚ್.ಎಸ್.ವಿಯವರ ಅನಾತ್ಮ ಕಥನ. 

1 comment:

  1. ಸ್ವಾಮೀಜೀ :-)
    ‘ನಿವೃತ್ತಿ’ಯ ವಯಸ್ಸು ನಿರ್ಧರಿಸಿದವರು ನಿಮಗೊಂದು ‘ವೃತ್ತಿ’ ಕೊಟ್ಟವರು. (ಜೀವನ ಪ್ರಾಕೃತಿಕ ಸತ್ಯಗಳಿಗಷ್ಟೇ ಉತ್ತರದಾಯೀಂತ ಯೋಚಿಸಿದರೆ ಮೊದಲು ಅತಿ ಪ್ರೀತಿಯೂ ಬರುವುದಿಲ್ಲ ಅನಂತರ ಕಳೆದುಕೊಂಡ ದುಃಖವೂ ಇರುವುದಿಲ್ಲ ಎಂದು ನನ್ನ ಅನಿಸಿಕೆ)ಒಂದು ವೃತ್ತಿಯಲ್ಲಿ ಬೆಳೆದ ಸಂಬಂಧಗಳು ಜೀವನದುದ್ದಕ್ಕೆ ಬಾಳುತ್ತವೆ ಎಂದು ನೀವು ಭಾವಿಸಿಕೊಂಡು ಒಂದು ಮಟ್ಟಿನ ಅನಾಥಪ್ರಜ್ಞೆಯಲ್ಲಿ ಸಿಕ್ಕಿದ್ದೀರೋಂತ ನನಗೆ ಕಸಿವಿಸಿಯಾಗುತ್ತದೆ. ಈಗ ವೃತ್ತಿ ಬದಲಿದೇಂತ ಮನದಟ್ಟು ಮಾಡಿಕೊಂಡರೆ ನೀವು ಹೆಚ್ಚು ಗೆಲುವಾಗಿರಬಹುದಲ್ಲವೇ? ನನ್ನ ವೃತ್ತಿಗೆ ನಿವೃತ್ತಿ ವಯಸ್ಸು ನಿಗದಿಸಿದವರಿಲ್ಲ. ಆದರೂ ನಾನಾಗಿಯೇ ಬಹುಶಃ ಇನ್ನೊಂದೆರಡು ವರ್ಷಗಳಲ್ಲಿ ಅಂಗಡಿಯನ್ನು ಮುಚ್ಚಿ, ವನ್ಯ ಸಂರಕ್ಷಣೆಯ ಎಳೆ ಹಿಡಿದುಕೊಂಡು ಮುಂದುವರಿಯುವ ಯೋಚನೆಯಲ್ಲಿದ್ದೇನೆ. ಅದಕ್ಕೆ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ನಿಮ್ಮೀ ಬರಹ ಕಂಡು ಇಷ್ಟು ಬರೆದೆ. ಅಧ್ಯಾತ್ಮವಾದಿ ನಾನು ಖಂಡಿತಾ ಅಲ್ಲ, ಉಪದೇಶ ಚಾಪಲ್ಯ ಮೊದಲೇ ಇಲ್ಲ. ಗೆಳೆತನದಿಂದ ಇಷ್ಟು ಬರೆದೆ. ಅಂದು ನಿಮ್ಮಲ್ಲಿಗೆ ಬಂದಿದ್ದಾಗ ಹೇಳಿದ್ದೆ ಮತ್ತೀಗಲೂ ಹೇಳ್ತೇನೆ - ನೀವು ಎಂದು ದೂರವಾಣಿಸಿದರೂ ಮಿಂಚಂಚೆ ಹಾಕಿದರೂ ನನಗೆ ‘ಶನಿಮಾರಾಯಾ’ ಎಂದು ಕಾಣಿಸುವ ಪ್ರಮೇಯವಿಲ್ಲ. ನಿಜಕ್ಕೂ ನಾನು ಅನ್ಯ ಕೆಲಸಗಳ ಒತ್ತಡದಲ್ಲಿದ್ದರೆ, ಮರೆವು ಕಾಡಿದರೆ ನೇರಾನೇರಾ ಅದನ್ನು ಹೇಳಿಯೇನು, ಠಕ್ಕು ಮಾಡಲಾರೆ.

    ನನ್ನಪ್ಪ ಸಾಯುವ ಕಡೇ ಗಳಿಗೆಯವರೆಗೂ ‘ನಾನೆಲ್ಲರಿಗೂ ಬೇಕಾದವನು’ ಎಂದು ಆಚಾರದಲ್ಲೂ ವಿಚಾರದಲ್ಲೂ ನಂಬಿ, ನಡೆದು ಕುಶಿಯಲ್ಲಿದ್ದರು. ನೀವು ಇದುವರೆಗೂ ಹಾಗೇ ಆಚರಿಸಿಕೊಂಡು ಬರುತ್ತಿರುವವರು ಈಗ ವಿಚಾರದಲ್ಲಿ ಯಾಕೆ ಹಿಂದುಳಿದಂತೆ ಭಾವಿಸುವುದು ತಪ್ಪೇ ತಪ್ಪು.
    ಅ-ಶೋಕ ವರ್ಧನ

    ReplyDelete