ಕಾಣದಂತೆ ಮಾಯವಾಯಿತು- ಚಳಿ.
ಈಗ ಹತ್ತು ಹನ್ನೆರೆಡು ದಿನಗಳಿಂದ ನನ್ನೂರಿಗೆ ಮಳೆಯಿಂದ ಮುಕ್ತಿ ಸಿಕ್ಕಿದೆ. ಕೃಷಿಕರೆಲ್ಲರೂ ನೆಮ್ಮದಿಯಿಂದ ತಮ್ಮ ಅಡಿಕೆ ಮತ್ತು ಗದ್ದೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಚಳಿಗಾಲದ ಆರಂಭದ ದಿನಗಳಲ್ಲಿ ಬೆಳಿಗ್ಗೆ ಎಂಟರವರೆಗೆ ಊರನ್ನು ಆವರಿಸಿಕೊಂಡಿದ್ದ ಚಳಿ ಮಾತ್ರ ಈಗ ಎರಡು ದಿನಗಳಿಂದ ಕಾಣೆಯಾಗಿದೆ. ಬೆಳಿಗ್ಗೆ ಆರರವರೆಗೆ ಮಾತ್ರ ಸ್ವಲ್ಪ ಇಬ್ಬನಿ ಕಾಣಿಸಿಕೊಂಡರೂ ನಂತರ ಪೂರ್ಣವಾಗಿ ಮಾಯವಾಗಿ ಹೋಗಿಬಿಡುತ್ತದೆ. ಚಳಿ ಕಡಮೆಯಾದರೆ , ಇಬ್ಬನಿ ಸುರಿಯುವುದು ಕಡಮೆಯಾದರೆ ಮುಂದಿನ ವರ್ಷ ಮಳೆ ಕಡಮೆ ಎಂಬ ನಂಬಿಕೆ ಇಲ್ಲಿಯವರದು. ಕಳೆದ ವರ್ಷ ಚಳಿಗಾಲವೇ ಇರಲಿಲ್ಲ. ಕೇವಲ ಐದು ದಿನ ಮಾತ್ರ ಚಳಿ ಕಾಡಿತ್ತು. ಜಾತ್ರೆಯ ಸಮಯ ಕಂಬಳಿಯ ರಾಶಿ ಹೊತ್ತು ಕೊಂಡು ಬಂದವರು ನಿರಾಶರಾಗಿ ಹಾಗೆಯೇ ಆ ರಾಶಿಯನ್ನು ಹೊತ್ತುಕೊಂಡು ಮರಳಿ ತಮ್ಮೂರಿಗೆ ಹೋಗಿದ್ದರು. ಈ ಬಾರಿಯೂ ಹೀಗೇ ಆಗಬಹುದು ಎಂಬ ನಿರೀಕ್ಷೆ ಎಲ್ಲರದೂ.
ಜಾತ್ರೆ ಬರುತ್ತಿದೆ. ಎಳ್ಳಮಾವಸ್ಯೆಯ ಸ್ನಾನ ಮಾಡಲು ಎಲ್ಲಾ ಪಾಪಿಗಳೂ ಸಿದ್ಧರಾಗುತ್ತಿದ್ದಾರೆ. ಆ ದಿನ ರಾಮಕುಂಡದಲ್ಲಿ ಮುಳುಗಿದರೆ ಸರ್ವ ಪಾಪವೂ ಪರಿಹಾರವಾಗುತ್ತದೆ ಎಂಬ ವಿಶ್ವಾಸ ಊರಜನರಲ್ಲಿದೆ. ಹಾಗಾಗಿ ಬೆಳಿಗ್ಯೆ ಎಲ್ಲರೂ ಸರದಿಯಲ್ಲಿ ಒಂದು ಮುಳುಗು ಹಾಕಲು ನಿಂತಿರುತ್ತಾರೆ. ಒಂದೇ ಮುಳುಗು ಮಾತ್ರ. ಏಕೆಂದರೆ ಉಳಿದ ಪಾಪಿಗಳಿಗೂ ಅವಕಾಶ ಸಿಗಬೇಕಲ್ಲ. ಪೋಲಿಸ್ ಆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಇತ್ತ ಹರಿಯುವ ನದಿಯಲ್ಲಿ ನೀವು ಎಷ್ಟು ಹೊತ್ತು ಈಜಾಡಿದರೂ ಚಿಂತಿಲ್ಲ. ಆದರೆ ರಾಮಕುಂಡದಲ್ಲಿ ಆ ದಿನ ಒಂದೇ ಮುಳುಗು. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ನಾನೂ ಕಾಯುತ್ತಿದ್ದೇನೆ -ಮನೆಯ ಚಿಕ್ಕ ಮಕ್ಕಳ ಜತೆಯಲ್ಲಿ ಸೇರಿ ಬೀದಿ ತುಂಬಾ ತಿರುಗಬೇಕು. ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರು ಈಗಲೇ ತಮ್ಮ ತಮ್ಮ ವ್ಯಾಪಾರದ ಸ್ಥಳಗಳನ್ನು ಗುರುತಿಸಿಕೊಂಡು ಗಡಿ ನಿರ್ಧರಿಸಿ ತಮ್ಮ ಪತಾಕೆಯಂತೆ ಒಂದು ಹಗ್ಗವನ್ನು ಕಟ್ಟಿ ಹೋಗಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ತಮ್ಮ ವಸ್ತುಗಳನ್ನು ತಂದು ಅಲ್ಲಿ ಹರಡಿ ಬಾಯಿಗೆ ಕೆಲಸಕೊಡುತ್ತಾರೆ. ಅವರ ಅಂಗಡಿಗೆ ವ್ಯಾಪಾರಕ್ಕೆ ಬರುವ ಹಳ್ಳಿಗರ ಚೌಕಾಶಿ ನೋಡಲು ಬಹಳ ಖುಷಿಯಾಗುತ್ತದೆ. ವ್ಯಾಪಾರಿ ಹೇಳಿದ ಬೆಲೆಯನ್ನು ಯಾರೂ ಕೊಡುವುದೇ ಇಲ್ಲ. ಹಾಗೆ ಕೊಟ್ಟರೆ ಅವನು ಮಂಗ . ಅವನು ಹೇಳಿದ್ದಕ್ಕಿಂತ ಕಡಮೆ ಕೊಟ್ಟರೆ ಮಾತ್ರ ಅವನು ಬುದ್ಧಿವಂತನೆನಿಸಿಕೊಳ್ಳುತ್ತಾನೆ.
ಕಳೆದ ವರ್ಷ ಹೀಗಾಯಿತು. ನನ್ನ ಗೆಳೆಯರೊಬ್ಬರ ಅಂಗಡಿಯ ಎದುರು ಒಬ್ಬ ವ್ಯಾಪಾರಿ ದೊಡ್ಡದೊಡ್ಡ ಪೋಸ್ಟರ‍್ಗಳನ್ನು ಹರಡಿಕೊಂಡು ಕುಳಿತುಕೊಂಡಿದ್ದ. ಅವನ ವ್ಯಾಪಾರದ ರೀತಿಯನ್ನು ನೋಡುತ್ತಾ ನಾನೂ ಅಲ್ಲಿ ನನ್ನ ಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಸಂಜೆಯ ವೇಳೆ ಕಾಲೇಜು ಹುಡುಗಿಯರ ದಂಡು ಒಂದು ಬಂದಿತು. ಆ ಪೋಸ್ಟರ‍್ಗಳನ್ನು ನೋಡುತ್ತಲೇ ಅಯ್ಯೋ ಹೃತಿಕ್, ಶಾರೂಕ್ ಎಂದು ಸಂಭ್ರಮಿಸಿತ್ತಿರುವಾಗಲೇ ರಾಮಚಂದ್ರಾಪುರ ಮಠದ ಇಬ್ಬರು ಮಾಣಿಗಳೂ ಅಲ್ಲಿಗೆ ಬಂದರು. ಆದರೆ ಅವರು ಅಪ್ಪಿ ತಪ್ಪಿಯೂ ಸಿನಿಮಾನಟರ ಪೋಸ್ಟರ‍್ಗಳನ್ನು ನೋಡಲೇ ಇಲ್ಲ. ಐಶ್ವರ್ಯಾ, ಕರೀನಾ ಪೋಸ್ಟರ್ ಅವರನ್ನು ಸೆಳೆಯಲೇ ಇಲ್ಲ. ಅಲ್ಲಿದ್ದ ದೇವರ ಪೋಸ್ಟರ‍್ಗಳ ಮೇಲೆಯೇ ಅವರ ಗಮನ. ಅದರಲ್ಲಿ ಎರಡು ಪೋಸ್ಟರ‍್ಗಳನ್ನು ಆರಿಸಿ ದುಡ್ಡುಕೊಟ್ಟು ಹೊರಟುಹೋದರು. ಒಂದು ಲೋಕಕ್ಕೆ ಪೂರ್ಣ ಕುರುಡರಾದ ಇವರ ವರ್ತನೆ ಕಂಡ ನನಗೆ ಅನಿಸಿದ್ದು- ಹೀಗೂ ಉಂಟೇ? ಇಂತಹ ಜಾತ್ರೆ ಜನವರಿ ೪ ರಂದು. ನಾನೂ ನನ್ನ ಮೊಮ್ಮಕ್ಕಳೂ ಕಾದು ಕುಳಿತಿದ್ದೇವೆ.
ಕಳೆದವಾರ ಊರಿನ ನಟಮಿತ್ರರು ಕಾರ್ನಾಡರ ಯಯಾತಿಯನ್ನು ಪ್ರದರ್ಶಿಸಿದರು. ಸಾಗರದ ಎಸ್. ಮಾಲತಿಯ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ತೃಪ್ತಿಕರವಾಗಿತ್ತು. ಮುಖ್ಯಪಾತ್ರಗಳಲ್ಲಿ ಸಂದೇಶ್ ಜವಳಿ ಮತ್ತು ನಿಲೇಶ್ ಜವಳಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದರು ಎಂದೇ ಹೇಳಬೇಕು. ಇಬ್ಬರ ಅಭಿನಯ ಪ್ರೇಕ್ಷಕರ ಕರತಾಡನವನ್ನು ಗಳಿಸಿತು. ಆದರೆ ಸ್ತ್ರೀಪಾತ್ರಗಳು ಸೋತು ಹೋದವು. ಒಳ್ಳೆಯ ನಟಿಯರ ಅಭಾವದಿಂದಾಗಿ ನಿರ್ದೇಶಕರು ಕಾಲೇಜಿನ ಎಳೆಯ ವಿದ್ಯಾರ್ಥಿನಿಯರನ್ನು ಆರಿಸಿಕೊಂಡಿದ್ದರು. ಅವರ ಪಾತ್ರಕ್ಕೂ ಪ್ರಾಯಕ್ಕೂ ಹೊಂದಾಣಿಕೆಯಾಗದೇ ಹೋಯಿತು.
ವಾರದ ಓದು: ಶ್ರೀ ಸದಾಶಿವ ಯೋಗಿಗಳ "ಸತ್ಯದ ಹುಡುಕಾಟ(೨೬೯ಪು) ಮತ್ತು ಸಂಗೀತ ಸಂವಾದ-ಭಾಸ್ಕರ್ ಚಂದಾವರ್ಕರ್ (೨೦೨ಪು).
No comments:
Post a Comment