ತಕಿಟ ತಕಿಟ ಧೋಂ

Saturday, December 4, 2010

ಒಮ್ಮೆ ಹಾಡಿದ ಹಾಡು ಮತ್ತೊಮ್ಮೆ

ಒಮ್ಮೆ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡದಿರಲು ನಿರ್ಧರಿಸಿದ್ದೇನೆ. ಅಂದರೆ ನಾನು ಒಬ್ಬ ಗಾಯಕನೆಂಬ ಭ್ರಮೆ ಬೇಡ. ಈ ವಾರದ ನನ್ನ ಬರವಣಿಗೆಯ ಶೀರ್ಷಿಕೆ ಇದು ಅಷ್ಟೇ. ನನ್ನ ಬಳಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕ ಪುಸ್ತಕಗಳಿವೆ.  ವೃತ್ತಿಗೆ ಸೇರಿದ ದಿನದಿಂದ ಪುಸ್ತಕ ಸಂಗ್ರಹಿಸಲು ಪ್ರಾರಂಬಿಸಿದೆ. ನನ್ನ ಗುರುಗಳಾದ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ತರಗತಿಯಲ್ಲಿ ’ ಓದಬೇಕ್ರಯ್ಯಾ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಇಷ್ಟು ಪುಸ್ತಕಗಳು ಅಚ್ಚಾಗುತ್ತಿವೆ. ಅಂದರೆ ನಿಮಿಷಕ್ಕೆ ಇಷ್ಟಾಯಿತು. ಗಂಟೆಗೆ ಇಷ್ಟಾಯಿತು. ನೀವು ಇದರಲ್ಲಿ ಎಷ್ಟು ಓದಲು ಸಾಧ್ಯ? ಆದ್ದರಿಂದ ಓದಿ . ಓದಿ ಎಂದು ಪ್ರೊತ್ಸಾಹಿಸುತ್ತಿದ್ದರು. ಯಾವುದೇ ಪಠ್ಯವನ್ನು ಮಾಡುವಾಗ ನಾನು ಅದರ ಮೂಲವನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಅದರ ಕುರಿತಾಗಿ ಬಂದಿರಬಹುದಾದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ಓದುತ್ತಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಹವ್ಯಾಸ ಇವತ್ತಿಗೂ ಹೋಗಿಲ್ಲ. ಇಲ್ಲಿ ಸಣ್ಣದಾದ ಊರಲ್ಲಿ ಕುಳಿತುಕೊಂಡರೂ ತಿಂಗಳಿಗೆ ಏಳೆಂಟುಪುಸ್ತಕಗಳನ್ನು ತರಿಸಿಕೊಳ್ಳುತ್ತಿರುತ್ತೇನೆ. ಒಂದು ಊರಿನ ಮಾನಸಿಕ ಸ್ಥಿತಿಯಲ್ಲಿ ಅಳೆಯಬೇಕಾದರೆ ಅಲ್ಲಿನ ಪುಸ್ತಕದ ಅಂಗಡಿಗೆ ಹೋಗಬೇಕು. ಎಷ್ಟೆಷ್ಟು ಪುಸ್ತಕದ ಅಂಗಡಿಗಳು ಇರುತ್ತವೆಯೋ ಅಷ್ಟು ಆರೋಗ್ಯವಂತವಾಗಿ ಆ ಊರು ಸಮಾಜ ಇದೆ ಎನ್ನುವುದು ತಿಳಿಯುತ್ತದೆ. ವ್ಯಾಪಾರವಿಲ್ಲದೆ ಆ ಅಂಗಡಿಗಳು ಸೊರಗುತ್ತಿವೆ ಎಂದಾದರೆ ಊರಿಗೆ ಗ್ರಹಣ ಹಿಡಿಯುತ್ತಿದೆ ಎಂದೇ ಅರ್ಥ ಮಾಡಿಕೊಳ್ಳಬೇಕು.  ಗ್ರಹಚಾರಕ್ಕೆ ನನ್ನೂರಿನಲ್ಲಿ ಒಳ್ಳೆಯ ಪುಸ್ತಕ ಭಂಡಾರವಿಲ್ಲ. ಹಾಗಾಗಿ ಮಂಗಳೂರಿನ ಅತ್ರಿಯಿಂದ ತಿಂಗಳಿಗೊಮ್ಮೆ ಪುಸ್ತಕ ತರಿಸಿಕೊಳ್ಳುತ್ತಿರುತ್ತೇನೆ.


ಮೂರು ತಿಂಗಳ ಹಿಂದೆ ಹೀಗಾಯಿತು. ಭೈರಪ್ಪನವರ ಕವಲು ಪ್ರಕಟವಾದಾಕ್ಷಣ ತರಿಸಿಕೊಂಡು ಓದಿದೆ. ಅದನ್ನು ಓದಿದನಂತರ ಅವರ ಹಿಂದಿನ ಕಾದಂಬರಿಗಳನ್ನು ಓದುವ ಹುಕ್ಕಿ ಬಂದಿತು. ಸರಿ . ಮತ್ತೆ ಅವರ ಹಳೆಯ ಕಾದಂಬರಿಗಳನ್ನು ಒಂದರ ನಂತರ ಒಂದರಂತೆ ಓದಲು ಪ್ರಾರಂಭಿಸಿದೆ. ಹೀಗೆ ನಾಲ್ಕು ಪುಸ್ತಕ ಓದಿದೆ. ಆಗ ನನ್ನ ಹೊಸ ಓದಿಗೆ ಅಡ್ಡಿಯಾಯಿತು. ಮತ್ತೆ ಮತ್ತೆ ಅವೇ ಎಂದೋ ಓದಿದ ಪುಸ್ತಕಗಳನ್ನು ಓದುತ್ತಿದ್ದೇನೆ. ಇದು ಸರಿಯಲ್ಲವೆಂದೆನಿಸಿತು. ಹಾಗಾಗಿ ಈಗ ಮತ್ತೆ ಹಳೆಯ ಪುಸ್ತಕಗಳನ್ನು ಓದುವುದನ್ನು ಬಿಟ್ಟಿದ್ದೇನೆ. ಒಮ್ಮೆ ಓದಿದ ಪುಸ್ತಕವನ್ನು ಇನ್ನು ಯಾವುದೇ ಕಾರಣಕ್ಕೆ ಮತ್ತೊಮ್ಮೆ ಓದಲಾರೆ ಎಂದು ನಿರ್ಧರಿಸಿದ್ದೇನೆ. ಓದಿಯಾದ ಪುಸ್ತಕಗಳನ್ನು ನಿರ್ಮೋಹದಿಂದ ಕೈಯೆತ್ತಿ ದಾನ ಮಾಡುತ್ತಿದ್ದೇನೆ.  ಇದು ನನ್ನ ಅಂತಿಮ ಓದು. ಹಾಗಾಗಿ ಪುನರಾವರ್ತನೆಯಾಗದಂತೆ ಒಮ್ಮೆ ಓದಿ ಮುಗಿಸಬೇಕು. ಒಮ್ಮೆ ಹಾಡಿದ ಹಾಡು ಮತ್ತೆ ಹಾಡಬಾರದು.  


ಈ ವಾರದ ಓದು. : ರವಿಬೆಳೆಗೆರೆಯವರ ಕಾಮರಾಜಮಾರ್ಗ (೪೦೨ಪು) ಮತ್ತು ರಥಬೀದಿ- ಶ್ರೀಧರ ಬಳೆಗಾರ (೧೫೩ಪು). 

1 comment:

  1. ಅದಲ್ಲಾ ಸರಿ. ಜೊತೆಗೇ ನೀವು ಓದಿದ ಪುಸ್ತಕಗಳ ಬಗ್ಗೆ ಅಂದಂದಿನ ನಿಮ್ಮ ಅನಿಸಿಕೆಗಳ ಒಂದೆರಡು ಸಾಲಾದರೂ ಬರೆದರೆ ನನ್ನಂಥ ಹೆಚ್ಚಾಗಿ ಪುಸ್ತಕಪಟ್ಟಿಯಷ್ಟೇ ಓದುವವನಿಗೆ, ಅಕ್ಷರಸ್ಥರಾದ ಮೇಲೆ ಪುಸ್ತಕಗಳ ಕಡೆಗೆ ಹೊರಳಿ ನೋಡದವರಿಗೆ ಅನುಕೂಲವಾಗುತ್ತಿತ್ತು. ರವಿ ಬೆಳಗೆರೆಯನ್ನು ಪತ್ರಿಕೆಯಲ್ಲಷ್ಟೇ ಓದಿದ್ದ ನಾನು ಕೆಟ್ಟಕುತೂಹಲದಿಂದ ಕಾಮರಾಜಮಾರ್ಗವನ್ನು (ಕಾದಂಬರಿ) ಜೊತೆಗೇ ಅಲಿಬಾಬ ಮತ್ತು ನಲ್ವತ್ತು ಕಳ್ಳರು (ಅನಿಲ್ ಲಾಡ್ ಕೇಂದ್ರಿತವಾದ ಗಣಿಗಳ್ಳರ ನಿಜ ವೃತ್ತಾಂತ) ಓದಿದೆ! ನಮ್ಮ ರಾಜಕಾರಣಿಗಳ ಜನಜನಿತ ಕಾಮವಿಲಾಸಗಳನ್ನು ‘ಕೊನೆಯ ಹನಿ’ ಬಿಡದಂತೆ ಚಿತ್ರಿಸಿದ ಕಾಮರಾಜಮಾರ್ಗದಲ್ಲಿ ಸುಲಭಗ್ರಹಿಕೆಗೆ ಸಿಗುವ ನಾಮಾಂತರವಷ್ಟೇ ಮಾನನಷ್ಟ ಮೊಕದ್ದಮೆಯನ್ನು ತಪ್ಪಿಸಿಕೊಳ್ಳುವ ಗುರಾಣಿಯಂತೆ ಕಾಣುತ್ತದೆ. ಇದು ಓದಿಸುವ ಹಿಕ್ಮತ್ತೋ ಲೇಖಕನ ತೀಟೆಯೋ ಭೈರಪ್ಪನವರೇ ಹೇಳಬೇಕು :-)
    ಅಶೋಕವರ್ಧನ

    ReplyDelete