ತಕಿಟ ತಕಿಟ ಧೋಂ

Saturday, October 9, 2010

ಬದಲಾದ ಗತಿ

*ನನ್ನ ಹಿರಿ ಕಿರಿ ಗೆಳೆಯರು ಬ್ಲಾಗ್‍ನ್ನು ಪ್ರಾರಂಭಿಸಿದನ್ನು ನೋಡಿ ನಾನೂ ಈ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಕವಿ ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದು ಅಲ್ಲ.ಪ್ರಾರಂಭವೇನೋ ಮಾಡಿದ್ದೇನೆ. ಆದರೆ ಬರೆಯುವುದು ಏನನ್ನು? ಈ ಬೇತಾಳ ಬೆನ್ನ ಮೇಲೆ ಏರಿ ಕುಳಿತಿದ್ದಾನೆ. 




*ಬ್ಲಾಗ್ ಎಂದರೆ ದಿನಚರಿ ತಾನೆ? ಅಥವಾ ನಾನು ಹಾಗೆ ತಿಳಿದುಕೊಂಡಿದ್ದೇನೆ. ಖಾಸಗಿಯಾದ ವಿಷಯಗಳನ್ನು ಬೇರೆಯವರೆಲ್ಲರೂ ಓದುವಂತೆ ಇದು ಸಹಾಯ ಮಾಡುತ್ತದೆ. ಆರವತ್ತು ದಾಟಿದ ನನ್ನ ಮನಸ್ಸಿನ ನೆನಪುಗಳು ಪೂರ್ಣ ಅಳಿದು ಹೋಗುವ ಮುನ್ನ ದಾಖಲಿಸಬೇಕು ಎಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.




ಬದಲಾದ ಗತಿ




ಸುಮಾರು ಮೂವತ್ತೈದು ವರ್ಷಗಳ ಕಾಲ ಕನ್ನಡ ಪಾಠವನ್ನು ಹೇಳಿಕೊಡುವ ಮಾಸ್ಟ್ರಾಗಿದ್ದೆ. ವೃತ್ತಿಯ ಕೊನೆಯ ಐದು ವರುಷ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡಿ ನಿವೃತ್ತನಾದೆ. ಕೊನೆಕೊನೆಯಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ನನಗೆ ಬದುಕನ್ನು , ವೃತ್ತಿಯನ್ನು ನೀಡಿದ್ದ ನನ್ನ ದಕ್ಷಿಣ ಕನ್ನಡ ನಿಧಾನವಾಗಿ ಬೇಸರವನ್ನುಂಟುಮಾಡಲು ಪ್ರಾರಂಭಿಸಿತ್ತ್ತು. ಈ ಊರೇ ಬೇಡ. ಹುಟ್ಟೂರಿಗೆ ಹೋಗೋಣವೆಂದೆನಿಸಲು ಅನ್ನಿಸಿತ್ತು. ಈ ಯೋಚನೆ ಆಗಲೇ ಬಂದದ್ದಲ್ಲ. ನಿವೃತ್ತನಾಗಲು ಮೂರು ವರ್ಷವಿದೆ ಎನ್ನುವಾಗಲೇ ಈ ಯೋಚನೆ ಬರಲು ಪ್ರಾರಂಭಿಸಿತ್ತು.  ಹುಟ್ಟೂರಿನ ಸೆಳೆತ ಬಲವಾಗುವುದಕ್ಕೆ ಇನ್ನೂ ಎರಡು ಕಾರಣಗಳಿವೆ.


೨೦೦೪ರಲ್ಲಿ ನನ್ನ ತಾಯಿ ತೀರಿಹೋದಾಗ ಅವರ ಅಪರಕರ್ಮವನ್ನು ಮಾಡಲು ಊರಿಗೆ ಬಂದಿದ್ದೆ. ಸಂಪ್ರದಾಯದಂತೆ ಮೀಸೆ ಮತ್ತು ತಲೆಯ ಕೂದಲುಗಳನ್ನು ತೆಗೆಯಿಸಿಕೊಂಡು ಯಾರಿಗೂ ಗುರುತೇ ಸಿಗದಂತೆ ರೂಪ ಬದಲಾಯಿಸಿಕೊಂಡಿದ್ದೆ. ಒಂದು ದಿನ ನನ್ನಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ನನ್ನ ಸಹಪಾಠಿಯಾಗಿದ್ದ ದಿ.ರವೀಂದ್ರ ಶೆಟ್ಟಿಯ ತಮ್ಮ      ಶೆಟ್ಟಿ ಸಿಕ್ಕಿದ್ದ. ನನ್ನ ಮುಖವನ್ನೇ ನೋಡುತ್ತಾ ’ಏಯ್ ,ನಾಗರಾಜ ಅಲ್ವೇನೋ !, ಏನಾಯಿತೋ’ ಎಂದು ವಿಚಾರಿಸಿದ.  ವಿಷಯ ತಿಳಿದಾಗ ಸಂತಾಪ ವ್ಯಕ್ತಪಡಿಸಿ, ನನ್ನ ಕೈ ಯನ್ನು ಬಲವಾಗಿ ಹಿಡಿದು ’ ಇನ್ನು ಎಷ್ಟು ವರುಷ ಸರ್ವೀಸ್ ಇದೆ’ ಎಂದು ಕೇಳಿದ. ಮೂರು ವರ್ಷವೆಂದು ನಾನು ಹೇಳಿದಾಗ ಹಿಡಿದ ಕೈ ಯನ್ನು ಬಿಡದೇ, ಇನ್ನೂ ಬಿಗಿಯಾಗಿ ಹಿಡಿದುಕೊಂಡು ’ನಾಗರಾಜಾ, ನಿವೃತ್ತನಾದ ಮೇಲೆ ಊರಿಗೇ ಬಾ. ಒಟ್ಟಿಗೇ ಸಾಯೋಣ’ ಎಂದು ಹೇಳಿದ. ನಾನು ನಕ್ಕು ಹಾಗೇ ಆಗಲಿ ಎಂದು ಹೇಳಿದೆ. ಆಗ ಅವನ ಮಾತು ನನ್ನ ಮನಸ್ಸಿನ ಆಳದಲ್ಲಿ ಇಳಿದಿರಲಿಲ್ಲ. ದಿನ ಕಳೆದಂತೆ ಅವನಾಡಿದ ಮಾತಿನರ್ಥ ಸ್ವಷ್ಟವಾಗಲು ಪ್ರಾರಂಭವಾಯಿತು. ಗೆಳೆಯರೆಂದರೆ ಹೀಗೆ ಇರುತ್ತಾರೆ. ಒಟ್ಟಿಗೆ ಸಾಯಲು ಕಾಯುತ್ತಿರುತ್ತಾರೆ. ಸಾಯಬೇಕಾದರೂ ಸರಿಯೇ. ಸರಿಯಾದ ಸ್ಠಳದಲ್ಲಿಯೇ ಸಾಯಬೇಕು. ಗೆಳೆಯರು ಇದ್ದ ಊರಿನಲ್ಲಿ, ಬಂಧುಗಳು ಇರುವ ಊರಿನಲ್ಲಿ. ಹುಟ್ಟೂರಿನಲ್ಲಿ.  ಈಗ ನಾನಿರುವ ಊರು ನನ್ನದಲ್ಲ. ಅಲ್ಲದೆ ನನ್ನ ಬರವಿಗೆ ಕಾಯುತ್ತಿರುವವರು ಹುಟ್ಟೂರಿನಲ್ಲಿದ್ದಾರೆ. ಆದ್ದರಿಂದ ಮತ್ತೆ ಅಲ್ಲಿಗೆ ಹೋಗಬೇಕು ಎಂದು ಬಲವಾಗಿ ಅನ್ನಿಸಲು ಪ್ರಾರಂಭಿಸಿತು. 


ನಾನಿದ್ದ ಊರಿನ ಬಗ್ಗೆ ಮೋಹ ಕಡಮೆಯಾಗಲು ಮತ್ತು ಮರಳಿ ಮಣ್ಣಿಗೆ ತೆರಳುವ ನನ್ನ ನಿರ್ಧಾರ ಗಟ್ಟಿಯಾಗಲು ಇನ್ನೂ ಒಂದು ಘಟನೆ ನಡೆಯಿತು. ನಾನು ನಿವೃತ್ತನಾಗಲು ಎಂಟು ತಿಂಗಳು ಇತ್ತು. ನನ್ನ ಉತ್ತರಾಧಿಕಾರಿಯಾಗಿ ನಿಯುಕ್ತರಾಗಿದ್ದ ನನ್ನ ಸಹೋದ್ಯೋಗಿಯೊಬ್ಬರು ದಿನನಿತ್ಯ ನಡೆದಾಡುವ ರಸ್ತೆಯಲ್ಲಿ ನಿತ್ಯದಂತೆ ನಡೆದುಕೊಂಡು ಹೋಗುತ್ತಿರುವಾಗ ಅವರಿಗೆ ತಲೆ ಸುತ್ತು ಬಂದು ರಸ್ತೆಯಲ್ಲಿಯೇ ಬಿದ್ದು ಬಿಟ್ಟರು. ಸ್ಮೃತಿ ಕಳೆದುಕೊಂಡರು. ಆ ರಸ್ತೆ ಅಪರಿಚಿತವಾದುದೇನೂ ಅಲ್ಲ. ಸುಮಾರು ಹದಿನೆಂಟು ವರುಷಗಳಿಂದ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತಿರುತ್ತೇವೆ. ಅಲ್ಲಿ ಅಕ್ಕಪಕ್ಕದಲ್ಲಿರುವ ಅಂಗಡಿಗಳವರಿಗೆ ನಾವು ಯಾರು ಎನ್ನುವುದು ಸರಿಯಾಗಿ ತಿಳಿದಿದೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಎಂದು ಹತ್ತಿರಕ್ಕೆ ಬರಲಿಲ್ಲ. ಒಂದು ಅಂಗಡಿಯವರು ಹತ್ತಿರಕ್ಕೆ ಬಂದು ಸ್ಮೃತಿ ಕಳೆದುಕೊಂಡು ಬಿದ್ದಿದ್ದ ನನ್ನ ಗೆಳೆಯರ ಕೈಯಲ್ಲಿದ್ದ ಚೀಲವನ್ನು ಮಾತ್ರ ಸುರಕ್ಷಿತವಾಗಿ ತೆಗೆದಿರಿಸಲು ಅದನ್ನು ಎತ್ತಿಕೊಂಡು ಅವರ ಅಂಗಡಿಗೆ ಹೋದರು. ಶಿವಾಯ್ ಅವರ ಸಹಾಯಕ್ಕೆ ಯಾರೂ ಹತ್ತಿರಕ್ಕೆ ಸುಳಿಯಲಿಲ್ಲ. ಆ ವೇಳೆಯಲ್ಲಿ ಆಪದ್ಭಾಂಧವನಂತೆ ಸಹಾಯಕ್ಕೆ ಬಂದವರು ಒಬ್ಬರು ಸಾಮಾನ್ಯ ಜನವೆಂದು ನಾವು ಗುರುತಿಸುವ ಗ್ಯಾರೇಜಿನಲ್ಲಿ ಕೆಲಸ ಮಾಡುವ ಒಬ್ಬ ಸಹೃದಯಿ. ಅವರು ರಿಕ್ಷಾವನ್ನು ನಿಲ್ಲಿಸಿ ಆಸ್ಪತ್ರೆಗೆ ಅವರನ್ನು ಸೇರಿಸಿದರು. ವಿಷಯ ತಿಳಿದು ನಾವೆಲ್ಲ ಆಸ್ಪತ್ರೆಗೆ ಧಾವಿಸಿದಾಗ ಆ ವ್ಯಕ್ತಿ ಇನ್ನೂ ಅಲ್ಲಿಯೇ ಇದ್ದರು. ಅವರು ನಮ್ಮನ್ನು ನೋಡಿ ’ ಎಂತಹ ಊರು ಸ್ವಾಮಿ ಇದು. ಮಾಸ್ಟ್ರು ಎಚ್ಚರ ತಪ್ಪಿ ಬಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಗುರುತೇ ಇಲ್ಲದವರ ಹಾಗೇ ಎಲ್ಲರೂ ನಡೆದು ಕೊಂಡರು. ಇಂತಹ ಊರಿನಲ್ಲಿ ಬದುಕುವುದು ಕಷ್ಟ’ ಎಂದು ಉದ್ಗರಿಸಿದರು. ಕೇಳಿದ ನಮಗೂ ಇದು ಹೃದಯಹೀನ ಊರು, ಆತ್ಮವಿಲ್ಲದ ಊರು ಎಂದೆನಿಸಿತು. ಅಲ್ಲಿದ್ದ ಅಂಗಡಿಯವರಿಗೆ ನಾವು ಅಪರಿಚಿತರೇನೂ ಅಲ್ಲ. ರಸ್ತೆ ದಾಟಿದರೆ ನಮ್ಮ ಕಾಲೇಜು ಇದೆ. ಅಲ್ಲಿ ಸಾಲಾಗಿ ಇರುವ ಅಂಗಡಿಗಳಲ್ಲಿ ನಾವು ಎಷ್ಟೋ ಬಾರಿ ವ್ಯಾಪಾರವನ್ನು ಮಾಡಿದ್ದೇವೆ. ಹೀಗೆ ಇದ್ದೂ ಇಂತಹ ಪರಿಸ್ಠಿತಿ ಬಂದಿತೆಂದರೆ ಈ ಊರೇ ಬೇಡವೆಂಬ ಹೇವರಿಕೆ ಬಲವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿತು.


ಅದಕ್ಕಾಗಿ ನೆಮ್ಮದಿಯನ್ನು ಅರಸಿಕೊಂಡು , ಸಾಯಲು ಒಳ್ಳೆಯ ಸ್ಠಳವೆಂದು , ಗೆಳೆಯರೊಡನೆ ನಗೆಯಾಡುತ್ತಾ ಕೊನೆಯ ದಿನಗಳನ್ನು ಕಳೆಯಲು ಹುಟ್ಟೂರಿಗೆ ಬಂದಿದ್ದೇನೆ. ನಿಜವಾಗಲೂ ನೆಮ್ಮದಿಯಿಂದ ಇದ್ದೇನೆ. 

3 comments:

  1. ಸಾರ್, ನಿಮ್ಮ ಬದುಕಿಗೆ ನೀಡಿದ ಕುತೂಹಲದ ತಿರುವುಗಳು ಆಸಕ್ತಿದಾಯಕ. ನೀವು ಬಿಟ್ಟ ಊರು ನಾನು ಹುಟ್ಟಿದ ಊರು. ನಾನು ಬ್ಯಾಂಕ್ ಕೆಲಸದಿಂದ ಸ್ವಯಂ ನಿವೃತ್ತಿ ತಗೊಂಡಾಗ ವಾಪಸ್ಸ್ ಊರಿಗೆ ಹೋಗಲು ಮನಸ್ಸಾಗದೇ ಶ್ರವಣಬೆಳಗೊಳದಲ್ಲೇ ಉಳಕೊಂಡಿದ್ದೇನೆ. ನಿಮ್ಮ ಅನುಭವ ಓದಿದಾಗ ನಾನು ಮಾಡಿದ್ದು ಸರಿ ಎಂದೆನಿಸುತ್ತದೆ. ನನ್ನದಲ್ಲದ ಊರು ಈಗ ನನ್ನದಾಗಿದೆ. ಇಲ್ಲಿ ಬಿದ್ದಾಗ ಎತ್ತಿಕೊಳ್ಳುವ ಹೃದಯವಂತರಿದ್ದಾರೆ!!
    ಸಾರ್, ಇನ್ನೂ ಬರೆಯಿರಿ. - ಶ್ರೀನಿವಾಸ ನಟೇಕರ್

    ReplyDelete
  2. ಪ್ರಿಯ ನಟೇಕರ್,
    ನಮಸ್ತೆ.
    ನಿಮ್ಮ ಪ್ರತಿಕ್ರಿಯೆ ಸಂತೋಷ ತಂದಿತು. ನಿಮ್ಮ ನಿರ್ಧಾರ ಸರಿ. ಹೃದಯವಂತರೊಡನೆ ಇರುವುದಕ್ಕಿಂತ ಬೇರೆ ಸುಖವಿಲ್ಲ. ಮತ್ತೆ ಬರೆಯಿರಿ.
    ಜವಳಿ

    ReplyDelete
  3. muraleedhara upadhya hiriadka
    [http;//mupadhyahiri.blogspot.com]
    nalmeya javali. "nammane" nodi kushi. neevu kudla dinda theerthahallige hoda kaarana Odi SHOCK.
    NAVARAATRI SHUBHASHAYAGALU

    ReplyDelete