ತಕಿಟ ತಕಿಟ ಧೋಂ

Monday, February 7, 2011

ಸಂಗೀತ-ಸಾಹಿತ್ಯದ ಗುಂಗಿನಲ್ಲಿ.

ಸಂಗೀತ-ಸಾಹಿತ್ಯದ ಗುಂಗಿನಲ್ಲಿ.

ಕಳೆದ ಶನಿ ಮತ್ತು ಭಾನುವಾರ ನನ್ನೂರಿನ ಸುಮುಖ ಸಂಗೀತ ಶಾಲೆಯವರ ವಾರ್ಷಿಕೋತ್ಸವ ವೆಂಕಟರಮಣ ದೇವಾಲಯದ ಅಂಗಳದಲ್ಲಿ ಮತ್ತು ಶ್ರೀ ರಾಮಮಂದಿರದ ಹತ್ತಿಲಲ್ಲಿ ನಡೆಯಿತು. ವರ್ಷಕ್ಕೊಮ್ಮೆ ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಹಾಡಲು ಅವಕಾಶ ಮಾಡಿಕೊಡುವುದಲ್ಲದೆ ಕೆಲವು ನುರಿತ ಗಾಯಕರನ್ನು ಕರೆಯಿಸಿ ಅವರಿಂದ ಸಂಗೀತ ಕಚೇರಿ ಮಾಡಿಸುವುದು ಸಂಪ್ರದಾಯ. ಹೀಗಾಗಿ ಶನಿವಾರ ಸಂಜೆ ಪುದಿಕೋಟೆ ರಾಮನಾಥನ್ ರವರ ವಯೋಲಿನ್ ಕಚೇರಿ ಇತ್ತು. ಬಹಳ ದಿನಗಳನಂತರ ಒಂದು ಅದ್ಭುತವಾದ ಕಚೇರಿಯನ್ನು ಕೇಳಿದಂತಾಯಿತು. ಮಾರನೆಯದಿನ ಕೊಪ್ಪದ ಒಬ್ಬಳು ಸಣ್ಣ ಹುಡುಗಿ -ಸ್ವಾದಿನಿ-ಬಹಳ ಚೆನ್ನಾಗಿ ಹಾಡಿದಳು. ಪ್ರಾಯದಲ್ಲಿ ಬಹಳ ಸಣ್ಣವಳು. ಲಂಗ ಹಾಕಿಕೊಂಡಿದ್ದಳು. ಆದರೆ ನುರಿತ ಗಾಯಕಿಯಂತೆ ಬಹಳ ಚೆನ್ನಾಗಿಯೇ ಹಾಡಿದಳು. ಇವೆರೆಡೂ ಸಂಗೀತ ಕಚೇರಿಗಳಿಂದ ಮನಸ್ಸಿಗೆ ಬಹಳ ಸಂತೋಷವಾಯಿತು.
ನನ್ನೂರಿನಲ್ಲಿ ಮಂಗಳವಾದ್ಯ ನುಡಿಸುವವರ ಸಂಘವೆಂಬ ಸಂಘವಿದೆ. ಇವರೆಲ್ಲರೂ ಕೂದಲು ಕತ್ತರಿಸುವ ವೃತ್ತಿಯನ್ನು ಮಾಡುವವರು. ಆದರೆ ನಾಗಸ್ವರ ನುಡಿಸುವುದರಲ್ಲಿ ತುಂಬಾ ಪರಿಣತಿಯನ್ನು ಪಡೆದಿದ್ದಾರೆ. ಇವತ್ತಿನ ದಿನಗಳಲ್ಲಿ ಶುದ್ಧ ನಾಗಸ್ವರವನ್ನು ಕೇಳುವ ಮತ್ತು ನುಡಿಸುವವರು ಬಹಳ ಕಡಮೆಯಾಗಿದ್ದಾರೆ . ವರ್ಷದಲ್ಲಿ ಒಂದು ದಿನ ಪುರಂದರ ಮತ್ತು ತ್ಯಾಗಾರಾಜರ ಸ್ಮರಣೆಯೆಂಬ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸುತ್ತಾರೆ. ಶುಭ್ರವಾದ ಬಿಳಿ ಬಟ್ಟೆಯನ್ನು ಹಾಕಿಕೊಂಡು ಸಂಭ್ರಮದಿಂದ ನಡೆಯುವ ಅವರನ್ನು ನೋಡುವುದೇ ಒಂದು ಸೊಗಸು. ಇವರೆಲ್ಲರೂ ನಮಗೆ ಚಿಕ್ಕಂದಿನಿಂದಲೇ ಪರಿಚಿತರು. ಪ್ರಾರಂಭದಲ್ಲಿ ಶುದ್ಧ ನಾಗಸ್ವರ ಕಚೇರಿ. ಸ್ಠಳೀಯ ಕಲಾವಿದರಿಂದ. ಹಿರಿಯರಿಂದ ಕಲಿತದ್ದನ್ನು ಕಿರಿಯರು ಪ್ರಸ್ತುತ ಪಡಿಸುತ್ತಾರೆ. ಒಂದು ರೀತಿಯ ಅರಂಗೇಟ್ರಂ ಇದ್ದಹಾಗೆ. ಪುರಂದರದಾಸರ ಮತ್ತು ತ್ಯ್ರಾಗರಾಜರ ಕೃತಿಯನ್ನು ಪ್ರಸ್ತುತ ಪಡಿಸುತ್ತಾರೆ. ಅನಂತರ ಅರ್ಧಗಂಟೆಯ ಸಭಾಕಾರ್ಯಕ್ರಮ. ತಮ್ಮವರೇ ಆದರೆ ಪರಸ್ಠಳ ದಲ್ಲಿರುವ ಒಬ್ಬ ಕಲಾವಿದನಿಗೆ ಅವರು ಗೌರವಿಸುತ್ತಾರೆ. ಮಾತುಗಳಿರುವುದಿಲ್ಲ. ಕೇವಲ ಗೌರವ ಅರ್ಪಣೆ. ಹಾರ, ಹಣ್ಣು, ಶಾಲು. ಬಂದ ಅತಿಥಿಗಳು ಮಾತ್ರ ಮಾತನಾಡುತ್ತಾರೆ. ಈ ಬಾರಿ ಸಾಲಿಗ್ರಾಮದ ಒಬ್ಬರನ್ನು ಗೌರವಿಸಿದರು. ಊರಿನ ಸಂಗೀತ ಶಾಲೆಯ ಶಿಕ್ಷಕರಾದ ಶ್ರೀ ಚಿಂತಾಮಣಿ ನಾಗರಾಜ್ ಅರ್ಧಗಂಟೆ ಕರ್ನಾಟಕ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಸನ್ಮಾನಿತರಾದವರಿಂದ ಸಂಗೀತ ಕಚೇರಿ. ಅವರು ಬಹಳ ಚೆನ್ನಾಗಿ ಸಾಕ್ಸೋಫೋನ್ ನ್ನು ನುಡಿಸಿದರಾದರೂ ಅಸಾಧ್ಯವಾದ ಚಳಿಯನ್ನು ತಡೆಯಲಾರದೇ ಮನೆಯಲ್ಲಿಯೇ ಕುಳಿತು ಕೇಳಬೇಕಾಯಿತು. ರಾಮೇಶ್ವರ ದೇವಸ್ಥಾನದ ರಥದಕೊಟ್ಟಿಗೆಯ ಅಂಗಳದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದು ಮೊನ್ನೆ ಮಂಗಳವಾರದ ದಿನ ನಡೆಯಿತು.

ನಿನ್ನೆ ಭಾನುವಾರ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು ಊರಿಗೆ ಬಂದಿದ್ದರು ಮತ್ತು ಅವರೊಡನೆ ಒಂದು ಸಂವಾದ ಕಾರ್ಯಕ್ರಮ ಗಾಯತ್ರೀ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಿಕ್ಕ ಪ್ರಚಾರ ಕಡಮೆ. ಆದರೂ ಅಭೂತಪೂರ್ವವಾದ ಸ್ಪಂದನ ಕಾರ್ಯಕ್ರಮಕ್ಕೆ ಸಿಕ್ಕಿತು. ಅನುಮಾನದಿಂದಲೇ ಇನ್ನೂರಷ್ಟು ಹಾಕಿದ್ದ ಕುರ್ಚಿಗಳು ಸಾಲದೇ, ಅನಂತರ ಪೂರ್ಣ ಪ್ರಮಾಣದಲ್ಲಿ ಮತ್ತೆ ಕುರ್ಚಿಯನ್ನು ಹಾಕಬೇಕಾಯಿತು. ಸುಮಾರು ಆರು ನೂರು ಜನ ಸ್ವಯಂಪ್ರೇರಿತರಾಗಿ ಬಂದಿದ್ದರು. ಬಂದವರಿಗೆಲ್ಲರಿಗೂ, ಪ್ರಶ್ನೆಕೇಳಬಯಸುವವರೆಲ್ಲರಿಗೂ ಕಾಗದಗಳನ್ನು ಹಂಚಿ.ಅವುಗಳನ್ನು ಶಿಸ್ತಾಗಿ ಸಂಗ್ರಹಿಸುತ್ತಿದ್ದರು. ಶಿವಮೊಗ್ಗದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಓಂಕಾರಪ್ಪನವರು ಪ್ರಸ್ತಾವಿಕ ಭಾಷಣವನ್ನು ಮಾಡಿ ಆದನಂತರ ಸುಮಾರು ಹತ್ತು ನಿಮಿಷ ಭೈರಪ್ಪನವರು ತಾನು ಪ್ರಶ್ನೆಗಳಿಗೆ ಉತ್ತರಿಸಲು ಹಾಕಿಕೊಂಡಿರುವ ನಿಬಂಧನೆಗಳನ್ನು ವಿವರಿಸಿದರು. ಒಂದೊಂದಾಗಿ ಪ್ರಶ್ನೆಗಳನ್ನು ಓದಿ ಉತ್ತರಿಸಲು ಪ್ರಾರಂಭಿಸಿದರು. ರಾಜಕೀಯದ ಪ್ರಶ್ನೆಗಳನ್ನು ಉತ್ತರಿಸಲು ಅವರು ನಿರಾಕರಿಸಿದರು. ಚರ್ಚಾಸ್ಪದವಾಗಬಹುದಾದ ಪ್ರಶ್ನೆಗಳನ್ನೂ ಅವರು ಉತ್ತರಿಸಲಿಲ್ಲ. ಉತ್ತರಗಳು ಸಂಕ್ಷಿಪ್ತವಾಗಿದ್ದವು. ನೇರವಾಗಿದ್ದವು. ಹಿತವಾಗಿದ್ದವು. ಕೇಳುಗರು ಅವರ ಉತ್ತರಗಳಿಗೆ ಸಮ್ಮತಿಸುವಂತೆ ಕರತಾಡನವನ್ನು ಮಾಡುತ್ತಿದ್ದರು. ನಿಶ್ಶಬ್ದವಾಗಿ ಸಭೆ ಸ್ಪಂದಿಸುತ್ತಿತ್ತು. ಒಂದು ಒಳ್ಳೆಯ ಕಾರ್ಯಕ್ರಮವನ್ನು ನೋಡುವ ಮತ್ತು ಕೇಳುವ ಅವಕಾಶ ಹೀಗೆ ಒದಗಿಬಂದಿತು. ಮೊನ್ನೆಮೊನ್ನೆ ನಡೆದ ಸಾಹಿತ್ಯಸಂಮೇಳನದಲ್ಲೂ ಸಂವಾದ ಕಾರ್ಯಕ್ರಮವಿತ್ತು. ಬೇಡವೆಂದರೂ ಹೋಲಿಕೆ ಮನಸ್ಸಿನಲ್ಲಿ ಇಣುಕಿತು. ಅಲ್ಲಿ ಪ್ರಶ್ನೆ ಹತ್ತು ನಿಮಿಷದದ್ದಾದರೆ, ಉತ್ತರ ಯಶೋದೆಗೆ ಕೃಷ್ಣ ಬಾಯಲ್ಲಿ ಬ್ರಹ್ಮಾಂಡ ತೋರಿಸಿದ ಹಾಗೆ ಉತ್ತರ ಮೂವತ್ತು ನಿಮಿಷದ್ದಾಗಿ ನಾವೆಲ್ಲಾ ದಿಗ್ಭ್ರಮೆಗೆ ಒಳಗಾಗಿದ್ದೆವು. ಇಲ್ಲಿ ಕೃತಿ ಮತ್ತು ಕೃತಿಗಳ ಕುರಿತಾಗಿದ್ದರೆ, ಅಲ್ಲಿ ಬಯಲೇ ಮಿತಿಯಾಗಿತ್ತು. ಸಾಹಿತ್ಯಿಕ ಕಾರ್ಯಕ್ರಮಗಳು ಬಹಳ ವಿರಳವಾಗಿ ನಡೆಯುವ ನನ್ನೂರಿನಲ್ಲಿ ನಡೆದ ಈ ಕಾರ್ಯಕ್ರಮಗಳು ಮನಸ್ಸಿಗೆ ಒಂದು ಉಲ್ಲಾಸವನ್ನೇ ತಂದುಕೊಟ್ಟಿವೆ.

ಇನ್ನು ಬರುವ ಶನಿವಾರ ತುಂಗಾ ಮಹೋತ್ಸವ. ನದೀ ತೀರದಲ್ಲಿ . ರಾತ್ರಿ ಏಳರಿಂದ ಮಾರನೆಯ ದಿನ ಬೆಳಿಗ್ಯೆ ಆರರವರೆಗೆ. ಉಣ್ಣಿಕೃಷ್ಣನ್,ಮೊದಲಾದವರು ಬರುತ್ತಿದ್ದಾರೆ. ಚಳಿ ಎಷ್ಟೇ ಇರಲಿ. ಸರ್ವ ಸಿದ್ಧತೆಯಿಂದ ಹೋಗಿ ರಾತ್ರಿ ಹಗಲಾಗಿಸಬೇಕು. ಕಾಯುತ್ತಿದ್ದೇನೆ-ಶನಿವಾರಕ್ಕಾಗಿ.

ವಾರದ ಓದು-ರೈತನಾಗುವ ಹಾದಿಯಲ್ಲಿ -ಎಸ್.ಎಂ.ಪೆಜತ್ತಾಯ(೧೧೪),Tell me why , mummy-David Thomas.(321)

No comments:

Post a Comment