ತಕಿಟ ತಕಿಟ ಧೋಂ

Saturday, January 1, 2011

ಕುವೆಂಪು -೧೦೬

ಕಳೆದ ವಾರ ೨೯ರಂದು ಕುವೆಂಪುರವರ ೧೦೬ರ ಜನ್ಮ ದಿನದ ಆಚರಣೆಯ ಸಂಭ್ರಮ ಕುಪ್ಪಳಿಯಲ್ಲಿ ನಡೆಯಿತು. ಬೆಳಿಗ್ಯೆ ಹತ್ತೂವರೆಗೆ ಕುವೆಂಪು ಸಮಾಧಿಗೆ ಪುಷ್ಪಾರ್ಚನೆಯಾದನಂತರ ಹೇಮಾಂಗಣದಲ್ಲಿ ಸಭೆ ನಡೆಯಿತು. ಚಂಪಾ, ಡಾ.ಮೋಹನ ಆಳ್ವ. ಬಾರಿ, ಕುಲಪತಿಗಳು, ಕುವೆಂಪು ವಿವಿ ಮೊದಲಾದವರು ಉಪಸ್ಥಿತರಿದ್ದರು. ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳು ಪ್ರಕಾಶ ಸ್ವಾಗತ ಮಾಡಿದರು. ಕಡಿದಾಳು ಪ್ರಕಾಶ ಮಿತಭಾಷಿ ಮತ್ತು ಜೇನ್ನೊಣದಂತೆ ಕೆಲಸಮಾಡುವವರು. ಸ್ವಾಗತವಾಗಲೀ  ಅಥವಾ ಬೇರೆ ಭಾಷಣವಾಗಲೀ ಹೆಚ್ಚು ಮಾತನಾಡುವವರಲ್ಲ. ಹಾಗಾಗಿ ಅವರ ಮಾತು ಕೇಳಲು ಹಿತವಾಗುತ್ತದೆ. ಉದ್ಘಾಟನಾ ಭಾಷಣ ಮಾಡಿದ ಚಂಪಾ ಎಂದಿನ ಶೈಲಿಯಲ್ಲಿ ವ್ಯಂಗ್ಯ ಮೊನಚುಗಳಿಂದಲೇ ಮಾತು ಪ್ರಾರಂಭಿಸಿದರು. ಅನಗತ್ಯವಾಗಿ ಲೋಕದ ಕುರಿತು ಟೀಕೆಗಳನ್ನು ಮಾಡಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ಪಡೆದವರು ಮತ್ತು ಹೊಡೆದುಕೊಂಡವರು ಎಂದು ವ್ಯಂಗ್ಯದ ಮಾತನ್ನಾಡಿದರು. ಆಳ್ವರು ಶಿಸ್ತಿನಿಂದ ಭಾಷಣವನ್ನು ಬರೆದುಕೊಂಡು ಬಂದಿದ್ದು ಅದನ್ನು ಚೆನ್ನಾಗಿಯೇ ಓದಿದರು. ಪ್ರತಿ ವರ್ಷವೂ ತನ್ನ ವಿದ್ಯಾರ್ಥಿಗಳನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ ಎಂದು ಆಶ್ವಾಸನೆ ನೀಡಿದರು. ಬಾರಿ, ಕುಲಪತಿಗಳು ಕುವೆಂಪು ವಿವಿ, ಕನ್ನಡದಲ್ಲಿ ಸ್ವಲ್ಪ ಕಷ್ಟದಿಂದ ಮಾತನಾಡಿದರು. ಆದರೆ ಹಿಂದಿನ ಕುಲಪತಿಗಳಿಗಿಂತ ಚೆನ್ನಾಗಿಯೇ ಮಾತನಾಡಿದರು. ಅವರ ಸ್ಥಾನಮಾನಕ್ಕನುಗುಣವಾಗಿ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಕುವೆಂಪುರವರ ಕುರಿತು ಫ್ರೌಡ ಪ್ರಬಂಧ ಬರೆದ ಸುಮಾರು ೧೭ ಜನರಿಗೆ ಸನ್ಮಾನ ಮಾಡಿ ಗೌರವಿಸಿದರು. ಪ್ರೊ.ಹೆಚ್.ಜೆ.ಲಕ್ಕಪ್ಪ ಗೌಡ, ಮಳಲಿ ವಸಂತ ಕುಮಾರ‍್ರಿಂದ ಪ್ರಾರಂಭಿಸಿ ಸುಮಾರು ೧೭ ಜನರಿದ್ದರು.

ಮಧ್ಯಾಹ್ನದ ಗೋಷ್ಠಿ ಮಾತ್ರ ನನಗೆ ಹಿಂಸೆಯನ್ನೇ ನೀಡಿತು. ಬಹುಶಃ ಕಳೆದ ಎರಡು ವರ್ಷಗಳಿಂದ ಇಂತಹ ಸೆಮಿ ನಾರುಗಳಿಗೆ  ನಾನು ಹಾಜರಾಗದೇ ಇರುವುದು ಕಾರಣವೇನೋ. ಮನುಶ್ಯರಿಗೆ ಅರ್ಥವಾಗುವ ಹಾಗೆ ಮಾತನಾಡದೇ, ಎಂದಿನ ಸೆಮಿನಾರ್ ಭಾಷೆಯಲ್ಲಿ ಮಾತನಾಡಿದ್ದು ಮತ್ತೂ ಒಂದು ಕಾರಣ. ಇದು ನನ್ನ ದೋಷವೂ ಇರಬಹುದು. ಸಹಜವಾಗಿ ಸರಳವಾಗಿ ಮಾತನಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲವಲ್ಲ ಎಂದು ಆಶ್ಚರ್ಯವೂ ಆಯಿತು.

ಮನಸ್ಸಿಗೆ ಬಹಳ ಸಂತೋಷವನ್ನು ನೀಡಿದ ಕಾರ್ಯಕ್ರಮವೆಂದರೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ. ಹೊಸಬಾಳೆ ಸೀತಾರಾಮರಾಯರು ಸುಮಾರು ಹದಿನೈದು ನಿಮಿಷಗಳ ಕಾಲ ರಾಮಾಯಣ ದರ್ಶನಂ ವನ್ನು ಗಮಕ ರೀತಿಯಲ್ಲಿ ಹಾಡಿ ತೋರಿಸಿದರು. ಅವರಿಗೆ ಈಗ ೮೧ರ ಪ್ರಾಯ. ನೆನಪು ಮಾತ್ರ ಗಟ್ಟಿಯಾಗಿದೆ. ಕಣ್ಣೆದುರು ಕೃತಿಯನ್ನು ಇಟ್ಟುಕೊಳ್ಳದೆ ಕೇವಲ ಸ್ಮೃತಿಯಿಂದಲೇ ಹಾಡಿದ್ದು ನನಗೆ ವಿಶೇಷವಾಗಿ ಕಂಡಿತು. ಅನಂತರ ಬೆಂಗಳೂರಿನ ಕಲಾತೀರ ಸಂಸ್ಠೆಯ ಉದಯಕುಮಾರ್ ಶೆಟ್ಟಿಯವರಿಂದ ಕುವೆಂಪು ಗೀತ ನೃತ್ಯ ಕಾರ್ಯಕ್ರಮ ನಡೆಯಿತು. ಸುಮಾರು ಎಂಟು ಹಾಡುಗಳಿಗೆ ನೃತ್ಯವನ್ನು ಅಳವಡಿಸಿದ್ದರು. ಬಹಳ ಚೆನ್ನಾಗಿ ಮೂಡಿಬಂದಿತ್ತು.

ಈಗ ಈ ವಾರ ನನ್ನ ರಥಬೀದಿಯಲ್ಲಿ ಜಾತ್ರೆಯ ಗೌಜಿ. ಕೊಟ್ಟಿಗೆಯಲ್ಲಿದ್ದ ರಥ ಹೊರಗೆ ಬಂದಿದೆ. ಅದಕ್ಕೆ ಬಾವುಟಗಳನ್ನು ಏರಿಸುತ್ತಿದ್ದಾರೆ. ರಥಬೀದಿಯ ಎರಡೂ ಬದಿಯಲ್ಲಿ ಅಂಗಡಿಗಳನ್ನು ಇಡಲು ಎಲ್ಲಿಂದಲೋ ವ್ಯಾಪಾರಿಗಳು ತುಂಬು ನಿರೀಕ್ಷೆಯನ್ನು ಇಟ್ಟುಕೊಂಡು ತಮ್ಮ ವಸ್ತುಗಳನ್ನು ಹೊಂದಿಸಿ ಇಡುತ್ತಿದ್ದಾರೆ. ಇನ್ನೆರೆಡು ದಿನಗಳಲ್ಲಿ ರಸ್ತೆಯಲ್ಲಿ ಕಾಲಿಡಲು ತೆರಪಿಲ್ಲದಂತೆ ಜನ ಸೇರುತ್ತಾರೆ. ವರ್ಷಕ್ಕೊಮ್ಮೆ ಬರುವ ಜಾತ್ರೆಯಲ್ಲಿ ನಾನೂ ನನ್ನ ಮೊಮ್ಮಗನೂ ತಿರುಗಬೇಕು. ಮಗು ಕಣ್ಣತುಂಬಾ ಆಸೆಯನ್ನಿಟ್ಟುಕೊಂಡು ಕಾಯುತ್ತಿದೆ.

ವಾರದ ಓದು:೧. ನೆನಪುಗಳು: ವಾಸುದೇವಾಚಾರ್ಯ (ಪು೧೦೯) ಮತ್ತು ಸಂಗೀತ ರಸನಿಮಿಷಗಳು -ಜಿಟಿನಾ(ಪು೧೭೫)

1 comment:

  1. ೪-೧-೧೧ರ ಪ್ರಜಾವಾಣಿಯ ಕರಾವಳಿ ಪುಟದ ರೋಹಿಣಿಯವರ ಅಂಕಣದಲ್ಲಿ ಬಂದ ಜಾತ್ರೆ ಸುತ್ತಿದ ಅನುಭವ ನಿಮ್ಮ ಜಾತ್ರೆಯ ನಿರೀಕ್ಷೆಗಳಿಗೆ ಪೂರಕವಾಗಿದೆ. ‘ಯುಗಯುಗಾದಿ ಕಳೆದರೂ’ ಅದೇ ಅನುಭವ ಆದರೆ ಹೊಸತೇ ಎನ್ನುವ ಭಾವ ರೋಹಿಣಿಯವರದಲ್ಲೂ ನಿಮ್ಮ ನಿರೀಕ್ಷೆಯಲ್ಲು ಕಂಡು ಜೀವನ ಪ್ರೀತಿಯೆಂದರೆ ಇದೇ ಇರಬೇಕು ಅಂದುಕೊಂಡೆ. ಕುಪ್ಪಳಿ ಕಲಾಪದಲ್ಲಿ ಸಭಾಸದರ ಬಗ್ಗೆ ಒಂದು ಮಾತು ಸೇರಿಸಬೇಕಿತ್ತು :-)
    ಅಶೋಕವರ್ಧನ

    ReplyDelete